ಸತ್ಯರಾಜ್ ದೊಡ್ಡಮನುಷ್ಯ ಎಂದು ಕಮಲ್ ಮೆಚ್ಚುಗೆ ಸೂಚಿಸಿದ್ದು ಹೇಗೆ?
ನಟ ಸತ್ಯರಾಜ್ ಕನ್ನಡಿಗರನ್ನು ಕ್ಷಮೆ ಕೇಳಿ, ಬಾಹುಬಲಿ 2 ಸಿನಿಮಾ ಬಿಡುಗಡೆಗೆ ಇದ್ದ ತಡೆಯನ್ನು ನಿವಾರಿಸಿದ್ದಕ್ಕೆ ಕಮಲ್ ಹಾಸನ್ ಮೆಚ್ಚುಗೆ ಸೂಚಿಸಿದ್ದಾರೆ. ಕ್ಷಮೆ ಕೇಳುವ ಮೂಲಕ ದೊಡ್ಡಮನುಷ್ಯ ಆಗಿದ್ದಾರೆ ಎಂದು ಸಿನಿಮಾ ಡೈಲಾಗ್ ನೆನಪಿಸಿದ್ದಾರೆ
ಚೆನ್ನೈ, ಏಪ್ರಿಲ್ 22: ನಟ ಸತ್ಯರಾಜ್ ಕನ್ನಡಿಗರನ್ನು ಕ್ಷಮೆ ಕೇಳಿದ್ದಕ್ಕೆ ಹಿರಿಯ ನಟ ಕಮಲ್ ಹಾಸನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆತ ದೊಡ್ಡ ಮನುಷ್ಯ ಎಂದು ಹೊಗಳಿದ ಕಮಲ್, "ಇಂಥ ಸಂಕಷ್ಟದ ಸಂದರ್ಭದಲ್ಲಿ ಸೌಹಾರ್ದತೆ ಮೆರೆದಿದ್ದಕ್ಕೆ ಅಭಿನಂದನೆ" ಎಂದು ಟ್ವೀಟ್ ಮಾಡಿದ್ದಾರೆ. ನಟ-ನಿರ್ದೇಶಕ ಕಮಲ್ ಹಾಸನ್ ತಮ್ಮ ಸಿನಿಮಾ ವಿರುಮಾಂಡಿಯನ್ನು ಉದಾಹರಿಸಿ, ಸತ್ಯರಾಜ್ ಅವರನ್ನು ದೊಡ್ಡ ಗುಣವುಳ್ಳ ಮನುಷ್ಯ ಎಂದಿದ್ದಾರೆ.
ಆ ಸಿನಿಮಾದಲ್ಲಿ ಮುಖ್ಯ ಪಾತ್ರದ ಪತ್ನಿ ಒಂದು ಮಾತು ಹೇಳುತ್ತಾರೆ. ಯಾರು ಕ್ಷಮೆ ಕೇಳುತ್ತಾರೋ ಆತ ದೊಡ್ಡ ಮನುಷ್ಯ ಎಂಬ ಮಾತು ಬರುತ್ತದೆ. ಅದನ್ನು ಕಮಲ್ ಉದಾಹರಿಸಿದ್ದಾರೆ. ಕಾವೇರಿ ಗಲಾಟೆ ವೇಳೆ ಸತ್ಯರಾಜ್ ನೀಡಿದ್ದ ಹೇಳಿಕೆಯೊಂದಕ್ಕೆ ಶುಕ್ರವಾರ ಸತ್ಯರಾಜ್ ಕ್ಷಮೆ ಕೇಳಿದ್ದರು. ಅವರು ನಟಿಸಿದ ಬಾಹುಬಲಿ 2 ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಕ್ಷಮೆ ಕೇಳಿದ್ದಾರೆ.[ಕನ್ನಡಿಗರ ಕ್ಷಮೆಕೋರಿ ಸತ್ಯರಾಜ್ ಆಡಿರುವ ಮಾತುಗಳಿವು!]

ಒಂಬತ್ತು ವರ್ಷದ ಹಿಂದೆ ನೀಡಿದ್ದ ಹೇಳಿಕೆ ಅದು. ಕರ್ನಾಟಕದಲ್ಲಿ ತಮಿಳರ ಮೇಲೆ ಹಲ್ಲೆ ನಡೆದಿದೆ ಎಂದು ಹಾಗೆ ಹೇಳಿದ್ದೆ. ಅದಕ್ಕಾಗಿ ಕ್ಷಮೆ ಕೇಳುತ್ತಿದ್ದೇನೆ ಎಂದು ನಟ ಸತ್ಯರಾಜ್ ಹೇಳಿದ್ದರು.
Congrats Mr. Sathyaraj for maintaining rationality in a troubled environement. Quoting VirumaaNdi மன்னிப்புக் கேக்கறவன் பெரியமனுசன். Bravo
— Kamal Haasan (@ikamalhaasan) 22 April 2017
ಆದರೆ ಬಿಜೆಪಿ ಮುಖಂಡ ಎಚ್ ರಾಜಾ, ನಟ ಕಮಲ್ ಹಾಸನ್ ಹಾಗೂ ಸತ್ಯರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಮಲ್ ಹಾಸನ್ ಆಗಲಿ, ಸತ್ಯರಾಜ್ ಆಗಲಿ ಹಣದ ಬಗ್ಗೆ ಮಾತ್ರ ಚಿಂತಿಸುತ್ತಾರೆ. ತಮಿಳು ಬಗ್ಗೆ ಇರುವ ಪ್ರೀತಿ, ಭಾವನೆಗಳು ಮೇಲ್ನೋಟಕ್ಕೆ ಅಷ್ಟೇ ಎಂದು ಟ್ವೀಟ್ ಮಾಡಿದ್ದಾರೆ.

ಸತ್ಯರಾಜ್ ಅವರು ಆತ್ಮಗೌರವ ಬಿಟ್ಟು ಹಣಕ್ಕಾಗಿ ಹೀಗೆ ನಡೆದುಕೊಂಡಿದ್ದಾರೆ ಎಂದು ಹೀಗಳೆದಿದ್ದಾರೆ.












Click it and Unblock the Notifications