Breaking : ಕಲ್ಲಕುರಿಚಿ ಬಾಲಕಿ ಸಾವು, ಪೋಷಕರ ಅರ್ಜಿ ವಿಚಾರಣೆ ಇಲ್ಲ
ಚೆನ್ನೈ, ಜುಲೈ 21: ತಮಿಳುನಾಡಿನ ಕಲ್ಲಕುರಿಚಿ ಬಾಲಕಿಯ ಸಾವು ಪ್ರಕರಣ ಸುಪ್ರೀಂಕೋರ್ಟ್‌ಗೆ ತಲುಪಿದೆ. ಮರು ಮರಣೋತ್ತರ ಪರೀಕ್ಷೆ ಕುರಿತ ವಿಚಾರದಲ್ಲಿ ತುರ್ತುವಿಚಾರಣೆಗೆ ಸಮ್ಮತಿ ಸೂಚಿಸಿದ್ದ ಸುಪ್ರೀಂಕೋಟ್ ಈಗ ಮನವಿಯನ್ನು ನಿರಾಕರಿಸಿದೆ.
ಮೃತ ವಿದ್ಯಾರ್ಥಿನಿಯ ತಂದೆ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ನಿರಾಕರಿಸಿ, ಸಂಬಂಧಪಟ್ಟ ಹೈಕೋರ್ಟ್ ಸಂಪರ್ಕಿಸುವಂತೆ ಸೂಚನೆ ನೀಡಿದೆ. ಬಾಲಕಿಯ ತಂದೆ ಮತ್ತೆ ನಡೆಯಲಿರುವ ಮರು ಮರಣೋತ್ತರ ಪರೀಕ್ಷೆಯಲ್ಲಿ ತಮ್ಮ ಆಯ್ಕೆಯ ಒಬ್ಬ ಫೋರೆನ್ಸಿಕ್ ತಜ್ಞರನ್ನು ಸೇರಿಸುವ ಮೂಲಕ ಮರಣೋತ್ತರ ಪರೀಕ್ಷೆಯನ್ನು ನಡೆಸುವಂತೆ ಕೋರಿದ್ದರು.
ಈ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಸಂಬಂಧಪಟ್ಟ ಹೈಕೋರ್ಟ್‌ಗೆ ಹೋಗುವಂತೆ ಹೇಳಿದೆ. ತಮಿಳುನಾಡಿನ ಕಲ್ಲಕುರಿಚಿ ಬಳಿಯ ಚಿನ್ನ ಸೇಲಂನಲ್ಲಿರುವ ಖಾಸಗಿ ಹೈಯರ್ ಸೆಕೆಂಡರಿ ಶಾಲೆಯ 12 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಿಕ್ಷಕರ ಚಿತ್ರಹಿಂಸೆಗೆ ಒಳಗಾಗಿ ಕಳೆದ ಮಂಗಳವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಶವಪರೀಕ್ಷೆಯಲ್ಲಿ ವಿದ್ಯಾರ್ಥಿಯ ಮೈಮೇಲೆ ಗಾಯಗಳು ಮತ್ತು ರಕ್ತಸ್ರಾವ ಕಂಡುಬಂದಿದೆ. ಶಾಲಾ ಬಾಲಕಿಯ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಅನೇಕ ಪ್ರತಿಭಟನೆಗಳು ನಡೆದಿದ್ದವು. ಪ್ರಕರಣದಲ್ಲಿ ಇಬ್ಬರು ಶಿಕ್ಷಕರನ್ನು ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ಇದುವರೆಗೆ ಐವರು ಶಿಕ್ಷಕರು ಹಾಗೂ ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಬಾಲಕಿ ಸಾವು ಖಂಡಿಸಿ ಭಾನುವಾರ ಪ್ರತಿಭಟನೆ ನಡೆಸುವ ವೇಳೆ ಹಿಂಸಾಚಾರ ನಡೆದಿತ್ತು.
ಕಲ್ಲಕುರುಚಿ 12ನೇ ತರಗತಿ ವಿದ್ಯಾರ್ಥಿ ಸಾವು ಪ್ರಕರಣದಲ್ಲಿ ತಮಿಳುನಾಡು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಶರಣ್ಯ ಜಯಕುಮಾರ್ ಗುರುವಾರ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ವಿವರವಾದ ವಿಚಾರಣೆ ನಡೆಸಿದರು. "ಹಾಸ್ಟೆಲ್‌ಗೆ ಪರವಾನಗಿ ಇರಲಿಲ್ಲ, ಹಾಸ್ಟೆಲ್ ಕಾಯಿದೆಯಡಿ ನೋಂದಣಿ ಮಾಡಿರಲಿಲ್ಲ. ಸುಮಾರು 24 ಹುಡುಗಿಯರು ಮತ್ತು 83 ಹುಡುಗರನ್ನು ಅಲ್ಲಿ ದಾಖಲಿಸಲಾಗಿದೆ ಎಂದು ನಮಗೆ ತಿಳಿಸಲಾಗಿದೆ ' ಎಂದರು.
ಮುಂದುವರೆದು "ಯಾವುದೇ ಖಾಸಗಿ ಹಾಸ್ಟೆಲ್ ತಮಿಳುನಾಡಿನಲ್ಲಿ ಹಾಸ್ಟೆಲ್ ಆಕ್ಟ್ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಅದೊಂದು ಎಚ್ಚರಿಕೆ. ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ಖಾಸಗಿ ಹಾಸ್ಟೆಲ್‌ಗಳು ಕಾಯಿದೆಯಡಿ ಪರವಾನಗಿಗಾಗಿ ಅರ್ಜಿ ಸಲ್ಲಿಸಬೇಕು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಂದ ಅನುಮೋದನೆ ಪಡೆಯಬೇಕು' ಎಂದು ಎಚ್ಚರಿಕೆ ನೀಡಿದರು.












Click it and Unblock the Notifications