LIVE : ಕಡೆಗೂ ಕು. ಜಯಲಲಿತಾ ಸಾವಿಗೆ ಶರಣು

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 05 : ಸಾವು ಬದುಕಿನ ನಡುವೆ ಹೋರಾಟ ನಡೆಸಿ ತಮಿಳುನಾಡಿನ ಪುರಚ್ಚಿ ತಲೈವಿ ಅವರು ಡಿಸೆಂಬರ್ 5, ಸೋಮವಾರದಂದು 11.30ಕ್ಕೆ ಅಂತಿಮವಾಗಿ ಸಾವಿಗೆ ಶರಣಾಗಿದ್ದಾರೆ. ಮಂಗಳವಾರ ಅಂತಿಮ ಸಂಸ್ಕಾರ ನೆರವೇರಲಿದೆ.

ಹಿಂದಿನ ಸುದ್ದಿ : ಎಪ್ಪತ್ತೆರಡು ದಿನಗಳಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡಿನ ಜನಪ್ರಿಯ ಮುಖ್ಯಮಂತ್ರಿ ಕುಮಾರಿ ಜೆ ಜಯಲಲಿತಾ (68) ಅವರಿಗೆ ಭಾನುವಾರ ಹೃದಯ ಸ್ಥಂಭನ ಸಂಭವಿಸಿರುವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ತಾಜಾ ಸುದ್ದಿಸಂಗ್ರಹ ಇಲ್ಲಿದೆ.

ಜಯಲಲಿತಾ ಅವರ ಆರೋಗ್ಯಸ್ಥಿತಿ ಗಂಭೀರವಾಗಿರುವುದರಿಂದ ಇಡೀ ತಮಿಳುನಾಡೇ ಸ್ಥಬ್ಧಗೊಂಡಿದೆ, ಅಘೋಷಿತ ಬಂದ್ ಹೇರಿದಂತಾಗಿದೆ. ಜಯಾ ಅವರ ಅಭಿಮಾನಿಗಳು ಮಾತ್ರವಲ್ಲ ಚಿಕಿತ್ಸೆ ನೀಡುತ್ತಿರುವ ತಜ್ಞ ವೈದ್ಯರು ಕೂಡ ದೇವರ ಮೊರೆ ಹೋಗಿದ್ದಾರೆ. ಇದರಿಂದಾಗಿ ಸಹಜವಾಗಿ ಕರ್ನಾಟಕದ ಮೇಲೆಯೂ ಪರಿಣಾಮ ಬೀರಿದೆ. [ಜಯಾಗೆ ಆಗಿದ್ದು ಹೃದಯಾಘಾತವಲ್ಲ, ಹೃದಯ ಸ್ಥಂಭನ]

Jayalalithaa cardiac arrest : Latest updates from Tamil Nadu and Karnataka

* ಜಯಲಲಿತಾ ಅಸುನೀಗಿದರು ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಸುದ್ದಿವಾಹಿನಿಗಳಲ್ಲಿ ಹಬ್ಬಿತ್ತು. ಎಐಎಡಿಎಂಕೆ ಕಚೇರಿಯ ಧ್ವಜವನ್ನು ಅರ್ಧಕ್ಕೆ ಇಳಿಸಲಾಗಿತ್ತು. ಆದರೆ, ಇದು ಗಾಳಿಸುದ್ದಿ, ಜಯಾ ಇನ್ನೂ ಬದುಕಿದ್ದಾರೆ ಎಂದು ಅಪೋಲೋ ಆಸ್ಪತ್ರೆ ಪ್ರಕಟಣೆ ನೀಡಿದೆ.

* ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಆದರೆ, ಜಯಲಲಿತಾ ಅವರನ್ನು ಉಳಿಸಿಕೊಳ್ಳಲು ಸರ್ವರೀತಿಯ ಪ್ರಯತ್ನ ಮಾಡಲಾಗುತ್ತಿದೆ : ಲಂಡನ್ ವೈದ್ಯ ಡಾ. ರಿಚರ್ಡ್ ಬೇಲಿ. ದೇವರು ಕೂಡ ಕೈಚೆಲ್ಲಿದ್ದಾನೆ ಎಂಬಂಥ ಭಾವ!

* ಮೊದಲ ಹಂತದ ಶಸ್ತ್ರಚಿಕಿತ್ಸೆಯ ನಂತರ ಜಯಾ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಇಲ್ಲ. ಮತ್ತೊಂದು ಶಸ್ತ್ರಚಿಕಿತ್ಸೆ ಮಾಡುವುದು ಬಲು ಕಷ್ಟ ಅಂತಿದ್ದಾರೆ ದೆಹಲಿಯಿಂದ ಬಂದಿರುವ ನುರಿತ ತಜ್ಞರು. ಡಾ. ರಿಚರ್ಡ್ ಬೇಲಿ ಕೂಡ ಇದೇ ಮಾತನ್ನು ಹಿಂದೆ ಹೇಳಿದ್ದರು.

* ಶಸ್ತ್ರಚಿಕಿತ್ಸೆಯ ನಂತರವೂ ಜಯಲಲಿತಾ ಅವರ ಆರೋಗ್ಯ ಸ್ಥಿತಿ ತೀರ ಕಳವಳಕಾರಿಯಾಗಿದೆ, ಎಕ್ಮೋ ಮತ್ತು ಇತರ ಜೀವರಕ್ಷಕ ಸಾಧನ ವ್ಯವಸ್ಥೆಯನ್ನು ಅವರಿಗೆ ಅಳವಡಿಸಲಾಗಿದೆ ಎಂದು ಅಪೋಲೋ ಆಸ್ಪತ್ರೆಯ ವಕ್ತಾರ ಹೇಳಿಕೆ ನೀಡಿದ್ದಾರೆ.


* ಜಯಲಲಿತಾ ಅವರ ಆರೋಗ್ಯದ ಬಗ್ಗೆ ನಿಖರ ಮಾಹಿತಿಗಾಗಿ ಕೌತುಕ ಹೆಚ್ಚುತ್ತಲೇ ಇದೆ. ಹನ್ನೆರಡು ಗಂಟೆಗೆ ನೀಡಬೇಕಿದ್ದ ಅಧಿಕೃತ ಪ್ರಕಟಣೆಯ ಸಮಯ ಈಗ ಸಂಜೆ 5 ಗಂಟೆಗೆ ನಿಗದಿಯಾಗಿದೆ.

* ಬೆಂಗಳೂರಿನಲ್ಲಿ ತಮಿಳರು ಹೆಚ್ಚು ವಾಸವಿರುವ ಬಡಾವಣೆಗಳಲ್ಲಿ ಹೆಚ್ಚಿದ ಪೊಲೀಸ್ ಬಂದೋಬಸ್ತ್. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿರುವುದಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ (ಬೆಂಗಳೂರು ಪಶ್ಚಿಮ) ಚರಣ್ ರೆಡ್ಡಿ ಹೇಳಿದ್ದಾರೆ. [ಜಯಾಗೆ ಅನಾರೋಗ್ಯ: ಬೆಂಗಳೂರು 'ಸೇಫ್' ಎಂದ ಪೊಲೀಸರು]


* ಅಪೋಲೋ ಆಸ್ಪತ್ರೆಯಲ್ಲಿರುವ ಜಯಾ ಸ್ನೇಹಿತೆ ಶಶಿಕಲಾ ಜೊತೆ ಮಾತನಾಡಿದ ನಟ ರಜನಿಕಾಂತ್. ಜಯಲಲಿತಾ ಶೀಘ್ರ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿಕೆ ನೀಡಿದ್ದಾರೆ.

* ತಮಿಳುನಾಡಿನ ಕಡಲೂರು ತಾಲೂಕಿನಲ್ಲಿ ಎಐಎಡಿಎಂಕೆ ಕಾರ್ಯಕರ್ತ ಸನ್ಯಾಸಿಪೇಟೈ ಗ್ರಾಮದ ನೀಲಕಂಠನ್ ಹೃದಯಾಘಾತದಿಂದ ಹಠಾತ್ ಸಾವು. ಟಿವಿಯಲ್ಲಿ ಜಯಲಲಿತಾ ಸುದ್ದಿ ನೋಡುತ್ತಿದ್ದಾಗಲೇ ಅವರಿಗೆ ಹೃದಯಾಘಾತವಾಗಿದೆ.

* ಸುರಕ್ಷತಾ ದೃಷ್ಟಿಯಿಂದ ಬೆಂಗಳೂರು ನಗರದಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. 250 ಹೊಯ್ಸಳ ವಾಹನಗಳು, 400 ಚೀತಾಸ್ ವಾಹನಗಳು, 25 ಪೊಲೀಸ್ ಪಡೆಗಳು ನಗರದಲ್ಲಿ ಗಸ್ತು ತಿರುಗುತ್ತಿವೆ.

* ತಮಿಳುನಾಡಿನಲ್ಲಿ ಖಾಸಗಿ ಶಾಲಾ ಕಾಲೇಜುಗಳು ರಜಾ ಘೋಷಿಸಿದ್ದರೆ, ಸರಕಾರಿ ಶಾಲಾ ಕಾಲೇಜುಗಳು, ಕಚೇರಿಗಳು, ಬ್ಯಾಂಕ್ ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.

* ಜಯಾಗೆ ಏನಾಗಿದೆಯೇನೋ ಎಂಬ ಆತಂಕ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಇದಕ್ಕೆ ಉತ್ತರವಾಗಿ, ಮಧ್ಯಾಹ್ನ 12 ಗಂಟೆಗೆ ಅಧಿಕೃತ ಪ್ರಕಟಣೆಯನ್ನು ಅಪೋಲೋ ಆಸ್ಪತ್ರೆಯ ವೈದ್ಯರು ಹೊರಡಿಸಲಿದ್ದಾರೆ.

* ತಮಿಳುನಾಡಿಗೆ ಸಂಚರಿಸಬೇಕಿದ್ದ 75ಕ್ಕೂ ಹೆಚ್ಚು ಕರ್ನಾಟಕದ ವಾಹನಗಳನ್ನು ತಡೆಹಿಡಿಯಲಾಗಿದೆ. ಕರ್ನಾಟಕದೊಳಗೆ ಬರುತ್ತಿದ್ದ ವಾಹನಗಳನ್ನೂ ವಾಪಸ್ ಕಳುಹಿಸಲಾಗುತ್ತಿದೆ. [ತಮಿಳುನಾಡಿಗೆ ತೆರಳುವ ಕೆಎಸ್ ಆರ್ ಟಿಸಿ ಬಸ್ ಸೇವೆ ರದ್ದು]

* ಅಪೋಲೋ ಆಸ್ಪತ್ರೆಯೆದುರಿಗೆ ಸಹಸ್ರಾರು ಅಭಿಮಾನಿಗಳು ನೆರೆಯುತ್ತಿರುವುದರಿಂದ ಚೆನ್ನೈ ಪೊಲೀಸರು ಭಾರೀ ಮುನ್ನೆಚ್ಚರಿಕೆ ವಹಿಸಿದ್ದಾರೆ, ಭಾರೀ ಬಂದೋಬಸ್ತ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tamil Nadu chief minister J Jayalalithaa cardiac arrest : Latest updates from Tamil Nadu and Karnataka
Please Wait while comments are loading...