ರಜೆ ನೀಡದ್ದಕ್ಕೆ ಮಾಲೀಕನ ಪತ್ನಿಯನ್ನೇ ಕೊಲೆಗೈದ ನೌಕರ!
ಚೆನ್ನೈ, ಜ. 13: ಬೋನಸ್ ಮತ್ತು ಪೊಂಗಲ್ ಹಬ್ಬಕ್ಕೆ ರಜೆ ನೀಡದ ಟೀ ಶಾಪ್ ಮಾಲೀಕನ ಹೆಂಡತಿಯನ್ನು ಕೊಲೆ ಮಾಡಿದ್ದಲ್ಲದೇ ಆತನ ಮಕ್ಕಳ ಮೇಲೂ ನೌಕರ ದಾಳಿ ಮಾಡಿದ್ದಾನೆ. ನಂತರ ಏನೂ ಗೊತ್ತಿಲ್ಲದಂತೆ ಟೀ ಶಾಪ್ ಗೆ ವಾಪಸ್ ಬಂದು ತನ್ನ ಕೆಲಸದಲ್ಲಿ ನಿರತನಾಗಿದ್ದಾನೆ.
ಮೈಕಲ್ ರಾಜ್ ಎಂಬುವರು ನಡೆಸುತ್ತಿದ್ದ ಟೀ ಶಾಪ್ ನಲ್ಲಿ ಕೆಲಸಕ್ಕಿದ್ದ ವಿಘ್ನೇಶ್ವರನ್ ಹಬ್ಬದ ಬೋನಸ್ ಕೇಳಿದ್ದಾನೆ. ಆದರೆ ಮೈಕಲ್ ರಾಜ್ ಅದನ್ನು ನಿರಾಕರಿಸಿದ್ದರಿಂದ ಕೋಪಗೊಂಡ ವಿಘ್ನೇಶ್ವರನ್ ಮಾಲೀಕನ ಹೆಂಡತಿಯನ್ನೇ ಕೊಲೆ ಮಾಡಿದ್ದಾನೆ.[ಅಡುಗೆ ಭಟ್ಟನ ಸೋಗಿನಲ್ಲಿದ್ದ ನೇಪಾಳಿ ಮನೆಗಳ್ಳನ ಬಂಧನ]

ಮಾಲೀಕ ಸಂಜೆ ಮನೆಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದ್ದು ಹೆಂಡತಿ ಕೊಲೆಯಾಗಿರುವುದು ಗೊತ್ತಾಗಿದೆ. ಹಲ್ಲೆಗೊಳಗಾದ ಮಕ್ಕಳು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಲೀಕನ ಹೆಂಡತಿಯನ್ನು ಕೊಲೆ ಮಾಡಿದ್ದಲ್ಲದೇ 40 ಸಾವಿರ ರೂ. ನಗದನ್ನು ದೋಚಿ ಆರೋಪಿ ಪರಾರಿಯಾಗಿದ್ದ. ಕಟ್ಟಡಕ್ಕೆ ಅಳವಡಿಸಿದ್ದ ಸಿಸಿ ಟಿವಿ ಮೂಲಕ ಆರೋಪಿಯನ್ನು ಗುರುತಿಸಲಾಯಿತು. ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications