ಮಗಳು ಸೌಂದರ್ಯಾ ಮದುವೆಗೆ ಆಹ್ವಾನ ನೀಡುತ್ತಿದ್ದಾರೆ ರಜನೀಕಾಂತ್
ಚೆನ್ನೈ, ಫೆಬ್ರವರಿ 7: ತಮಿಳು ನಟ ರಜನೀಕಾಂತ್ ರ ಮಗಳು ಸೌಂದರ್ಯಾ ಮದುವೆ ಸೋಮವಾರದಂದು ಚೆನ್ನೈನಲ್ಲಿ ನಡೆಯಲಿದೆ. ಮೂವತ್ನಾಲ್ಕು ವರ್ಷದ ಸೌಂದರ್ಯಾ ವಿವಾಹವು ಉದ್ಯಮಿ ಹಾಗೂ ನಟ ವಿಶಾಗನ್ ವನ್ನಂಗಮುಡಿ ಜತೆಗೆ ಎಂಬುದನ್ನು ಈಗಾಗಲೇ ಟ್ವಿಟ್ಟರ್ ನಲ್ಲಿ ಖಾತ್ರಿ ಪಡಿಸಲಾಗಿದೆ. ರಜನಿ ಕುಟುಂಬದಲ್ಲಿ ಸಂಭ್ರಮದ ವಾತಾವರಣ ಇದ್ದು, ಸ್ವತಃ ರಜನೀಕಾಂತ್ ಮದುವೆಗೆ ಆಹ್ವಾನಿಸುತ್ತಿದ್ದಾರೆ.
ವರದಿಗಳ ಪ್ರಕಾರ, ರಜನೀಕಾಂತ್ ಕಾಂಗ್ರೆಸ್ ನ ತಮಿಳುನಾಡು ರಾಜ್ಯಾಧ್ಯಕ್ಷ ತಿರುಣಾವುಕ್ಕರಸರ್ ನ ಭೇಟಿ ಆಗಿದ್ದು, ಮದುವೆಯ ಮೊದಲ ಆಹ್ವಾನ ಪತ್ರಿಕೆ ಅವರಿಗೆ ನೀಡಿದ್ದಾರೆ.
ಈ ಭೇಟಿ ಬಗ್ಗೆ ಮಾತನಾಡಿರುವ ರಜನೀಕಾಂತ್, ತಿರುಣಾವುಕ್ಕರಸರ್ ಅವರು ಸೌಂದರ್ಯಾ ಮದುವೆ ಕಾರ್ಯಕ್ರಮ ನಿಗದಿ ಮಾಡುವುದರಲ್ಲಿ ಪ್ರಮುಖರು. ಆದ್ದರಿಂದ ಅವರಿಗೆ ಮೊದಲ ಆಹ್ವಾನ ಪತ್ರಿಕೆ ನೀಡಿದ್ದೇನೆ. ಇನ್ನೂ ಕೆಲವರನ್ನು ನಾನು ಆಹ್ವಾನಿಸುತ್ತೇನೆ. ಈಗ ರಾಜಕಾರಣಿಗಳನ್ನು ಭೇಟಿ ಆಗುತ್ತಿರುವುದು ಮದುವೆಗೆ ಆಹ್ವಾನ ನೀಡುವುದಕ್ಕೆ ಅಷ್ಟೇ ಎಂದು ಹೇಳಿದ್ದಾರೆ.

ದಿವಂಗತ ಶಿವಾಜಿ ಗಣೇಶನ್ ಅವರ ಮನೆಗೆ ಭೇಟಿ ನೀಡಿದ ರಜನೀಕಾಂತ್, ಆಹ್ವಾನ ನೀಡಿದ್ದಾರೆ. ಅದರ ಫೋಟೋವನ್ನು ಶಿವಾಜಿ ಮೊಮ್ಮಗ -ನಟ ವಿಕ್ರಮ್ ಪ್ರಭು ಇನ್ ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ರನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ರಜನೀ ಆಹ್ವಾನ ನೀಡಿದ್ದಾರೆ.
ಸೌಂದರ್ಯಾಗೆ ಇದು ಎರಡನೇ ಮದುವೆ. ಇದಕ್ಕೂ ಮುನ್ನ ಅಶ್ವಿನಿ ರಾಮ್ ಕುಮಾರ್ ರನ್ನು ಮದುವೆ ಆಗಿದ್ದರು. ಆದರೆ ಎರಡು ವರ್ಷದ ಹಿಂದೆ ವಿವಾಹ ವಿಚ್ಛೇದನ ಆಗಿತ್ತು. ಈ ದಾಂಪತ್ಯಕ್ಕೆ ವೇದ್ ಎಂಬ ಮಗನಿದ್ದಾನೆ. ಸೌಂದರ್ಯಾ ತಮ್ಮ ವೃತ್ತಿ ಬದುಕನ್ನು ಗ್ರಾಫಿಕ್ ಡಿಸೈನರ್ ಆಗಿ ಆರಂಭಿಸಿದವರು. ಕೊಚಡಿಯಾನ್ ಎಂಬ ಸಿನಿಮಾ ನಿರ್ದೇಶನ ಕೂಡ ಮಾಡಿದ್ದಾರೆ.












Click it and Unblock the Notifications