12 ಕೋಟಿ ಮೌಲ್ಯದ ಮೊಬೈಲ್ ಸಾಗಿಸುತ್ತಿದ್ದ ಲಾರಿ ಅಪಹರಣ!
ಚೆನ್ನೈ, ಆಗಸ್ಟ್ 27 : ತಮಿಳುನಾಡಿನಿಂದ ಮುಂಬೈಗೆ ಸಂಚಾರ ನಡೆಸುತ್ತಿದ್ದ ಲಾರಿಯನ್ನು ಅಪಹರಣ ಮಾಡಲಾಗಿದೆ. ಲಾರಿಯಲ್ಲಿ 12 ಕೋಟಿ ರೂ. ಮೌಲ್ಯದ ಮೊಬೈಲ್ ಫೋನ್‌ಗಳಿದ್ದವು. 6 ಕೋಟಿ ರೂ. ಮೌಲ್ಯದ ಮೊಬೈಲ್ ಕಳುವು ಮಾಡಲಾಗಿದೆ.
ತಮಿಳುನಾಡು-ಆಂಧ್ರಪ್ರದೇಶ ಗಡಿ ಭಾಗದಲ್ಲಿ ಅಪರಿಚಿತರು ಲಾರಿಯನ್ನು ಅಪಹರಣ ಮಾಡಿದ್ದಾರೆ. 6 ಕೋಟಿ ರೂ. ಮೌಲ್ಯದ ಮೊಬೈಲ್ ಕಳುವು ಮಾಡಲಾಗಿದ್ದು, ಚಿತ್ತೂರು ಬಳಿ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.
ಲಾರಿ ಚಾಲಕ ಇರ್ಫಾನ್ ಮೇಲೆ ದರೋಡೆಕೋರರು ಹಲ್ಲೆ ಮಾಡಿದ್ದು, ಕೈಗಳನ್ನು ಕಟ್ಟಿ ಕಂಟೈನೈರ್ ಒಳಗೆ ಹಾಕಿದ್ದಾರೆ. ಕೈಗಳನ್ನು ಬಿಚ್ಚಿಕೊಂಡ ಚಾಲಕ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದರೋಡೆ ಕುರಿತು ದೂರು ನೀಡಿದ್ದಾನೆ.

ತಮಿಳುನಾಡಿನಿಂದ ಮಂಗಳವಾರ ಸಂಜೆ ಲಾರಿ ಹೊರಟಿತ್ತು. ಮುಂಬೈಗೆ ಮೊಬೈಲ್ ಫೋನ್‌ಗಳನ್ನು ತಲುಪಿಸಬೇಕಿತ್ತು. ತಮಿಳುನಾಡು-ಆಂಧ್ರಪ್ರದೇಶ ಗಡಿಯಲ್ಲಿ ಲಾರಿಯನ್ನು ಅಡ್ಡಗಟ್ಟಿ ಅಪಹರಣ ಮಾಡಲಾಗಿದೆ.
15 ಕಿ. ಮೀ. ದೂರ ಲಾರಿಯನ್ನು ತಂದಿರುವ ಕಳ್ಳರು, ಲಾರಿಯಲ್ಲಿದ್ದ 16 ಬಾಕ್ಸ್‌ಗಳ ಪೈಕಿ 8 ಬಾಕ್ಸ್ ಹೊತ್ತುಕೊಂಡು ಹೋಗಿದ್ದಾರೆ. ಒಟ್ಟು 7,500 ಮೊಬೈಲ್‌ಗಳು ಬಾಕ್ಸ್‌ಗಳಲ್ಲಿ ಇದ್ದವು ಎಂಬ ಮಾಹಿತಿ ಸಿಕ್ಕಿದೆ.
ದರೋಡೆಕೋರರನ್ನು ಹಿಡಿಯಲು ಪೊಲೀಸರು ತಂಡವನ್ನು ರಚನೆ ಮಾಡಿದ್ದಾರೆ. ತಮಿಳುನಾಡಿನಲ್ಲಿದ್ದ ಉತ್ಪಾದನಾ ಕಂಪನಿಯ ಪ್ರತಿನಿಧಿಗಳನ್ನು ಸಹ ಪೊಲೀಸರು ಕರೆಸುತ್ತಿದ್ದಾರೆ.












Click it and Unblock the Notifications