ಪಂಜಾಬ್ ಚುನಾವಣೆ: ಎಸ್‌ಎಡಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ, ಹಲವರಿಗೆ ಗಾಯ
ಚಂಡೀಗಢ, ಜನವರಿ 27: ಬುಧವಾರ ಪಂಜಾಬ್‌ನ ಬಟಿಂಡಾ ಜಿಲ್ಲೆಯ ರಾಮ್‌ಪುರ ಫುಲ್ ಕ್ರೀಡಾಂಗಣದಲ್ಲಿ ಸ್ಥಳೀಯ ಚಾನೆಲ್ ವಾಹಿನಿಯೊಂದು ಆಯೋಜಿಸಿದ್ದ ಟಿವಿ ಚರ್ಚೆಯ ಸಂದರ್ಭದಲ್ಲಿ ಶಿರೋಮಣಿ ಅಕಾಲಿದಳ (ಎಸ್‌ಎಡಿ) ಮತ್ತು ಕಾಂಗ್ರೆಸ್ ಕಾರ್ಯಕರ್ತರು ಘರ್ಷಣೆಗೆ ಇಳಿದಿದ್ದು, ಈ ಸಂದರ್ಭದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಆಗಿದೆ.
ಘರ್ಷಣೆಯನ್ನು ದೃಢೀಕರಿಸಿದ ರಾಂಪುರ ಫುಲ್‌ನ ಎಸ್‌ಎಚ್‌ಒ ಬಿಕ್ರಮಜೀತ್ ಸಿಂಗ್, "ನಾವು ಎರಡೂ ಕಡೆಯಿಂದ ದೂರುಗಳನ್ನು ಪಡೆದುಕೊಂಡಿದ್ದೇವೆ. ಈ ವಿಷಯದ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ," ಎಂದು ತಿಳಿಸಿದರು. ಪ್ರತಿ ಪಕ್ಷದ ಕಾರ್ಯಕರ್ತರು ಘರ್ಷಣೆಯನ್ನು ಪ್ರಚೋದಿಸಿದ್ದು ಎಂದು ಇನ್ನೊಬ್ಬರು ಆರೋಪ ಮಾಡಿದ್ದಾರೆ. ಆದರೆ ಎಸ್‌ಎಡಿ ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಬಂದು ಘರ್ಷಣೆ ಹುಟ್ಟಿಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪ ಮಾಡಿದ್ದಾರೆ.
ಆದರೆ ಎಸ್‌ಎಡಿ ಸದಸ್ಯರು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಆಕ್ರಮಣಕಾರಿಯಾಗಿ ವರ್ತನೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದರೆ, ಕಾಂಗ್ರೆಸ್ ಕಾರ್ಯಕರ್ತರು ಮೊದಲು ದಾಳಿ ಮಾಡಿದರು ಎಂದು ಎಸ್‌ಎಡಿ ಸ್ಥಳೀಯ ಮುಖಂಡರು ದೂರಿದ್ದಾರೆ. ಕಾಂಗ್ರೆಸ್ ಶಾಸಕ ಗುರುಪ್ರೀತ್ ಸಿಂಗ್ ಕಂಗರ್ ಅವರು ರಾಂಪುರ ಫುಲ್‌ನಿಂದ ಮತ್ತೆ ಸ್ಪರ್ಧೆ ಮಾಡುತ್ತಿದ್ದಾರೆ. ಅವರ ಪ್ರತಿ ಸ್ಫರ್ಧಿಗಳು ಎಸ್‌ಎಡಿಯ ಸಿಕಂದರ್ ಸಿಂಗ್ ಮಲುಕಾ, ಎಎಪಿಯ ಬಾಲ್ಕರ್ ಸಿಂಗ್ ಸಿಧು ಮತ್ತು ಪಂಜಾಬ್ ಲೋಕ ಕಾಂಗ್ರೆಸ್‌ನ ಡಾ ಅಮರ್‌ಜೀತ್ ಶರ್ಮಾ ಆಗಿದ್ದಾರೆ.

ತಾವು ಗಲಭೆ ಎಬ್ಬಿಸಿದ್ದು ಎಂಬ ಆರೋಪವನ್ನು ನಿರಾಕರಿಸಿದ ಎಸ್‌ಎಡಿ ಅಭ್ಯರ್ಥಿಯ ಪುತ್ರ ಗುರುಪ್ರೀತ್ ಸಿಂಗ್ ಮಾಲುಕಾ, ಚರ್ಚೆಯ ನಂತರ ಜನರು ಹೊರಡುತ್ತಿದ್ದಂತೆ, "ಕಾಂಗ್ರೆಸ್‌ನವರು ನಮ್ಮ ಜನರ ಮೇಲೆ ದಾಳಿ ಮಾಡಿದರು ಮತ್ತು ನಮ್ಮ ವಾಹನಕ್ಕೆ ಹಾನಿ ಮಾಡಿದ್ದಾರೆ" ಎಂದು ಹೇಳಿದರು. "ನಮ್ಮ ಕಾರ್ಯಕರ್ತರೊಬ್ಬರಿಗೆ ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿಯಿಂದಾಗಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅನೇಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ," ಎಂದು ತಿಳಿಸಿದ್ದಾರೆ.
ಕೊಲೆ ಯತ್ನ ದೂರು ದಾಖಲು
ಬುಧವಾರ ಸಂಜೆ, ಮೆಹ್ರಾಜ್ ದೂರಿನ ಮೇರೆಗೆ, ರಾಂಪುರ ಫುಲ್ ಪೊಲೀಸರು ಎಸ್‌ಎಡಿ ನಾಯಕರಾದ ಹರಿಂದರ್ ಸಿಂಗ್ ಹಿಂದಾ, ಅವರ ಸಹೋದರ ಮಣಿಂದರ್ ಸಿಂಗ್ ಮಿಂಡಿ ಮತ್ತು ನಿರ್ಮಲ್ ಸಿಂಗ್ ಮೆಹರಾಜ್ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಹತ್ಯೆ ಯತ್ನ, ಉದ್ದೇಶಪೂರ್ವಕವಾಗಿ ಗಾಯ ಮಾಡುವುದು, ಗಲಭೆ, ಮಾರಣಾಂತಿಕ ಆಯುಧಗಳಿಂದ ಹಲ್ಲೆ ಆರೋಪದಲ್ಲಿ ದೂರು ದಾಖಲು ಮಾಡಿದ್ದಾರೆ. ಐಪಿಸಿ 308, 323, 148 ಮತ್ತು 149 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ರಾಂಪುರ ಫುಲ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ ಆದರೆ, ಇದುವರೆಗೆ ಯಾವುದೇ ಬಂಧನ ನಡೆದಿಲ್ಲ.
ವಿಧಾನಸಭೆ ಚುನಾವಣೆ
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಪಂಜಾಬ್‌ನಲ್ಲಿ ಹೊಸ ಭರವಸೆ ಮೂಡಿಸಿದ್ದ ಆಮ್ ಆದ್ಮಿ ಪಕ್ಷ 2017ರ ವಿಧಾನಸಭೆ ಚುನಾವಣೆಯಲ್ಲಿ ಶೇ.23ರಷ್ಟು ಮತಗಳನ್ನು ಗಳಿಸಿತ್ತು. 115 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಆಪ್ 20 ಸ್ಥಾನಗಳನ್ನು ಗೆದ್ದಿತ್ತು. ಮಿತ್ರ ಪಕ್ಷ ಲೋಕ್ ಇನ್ಸಾಫ್ ಪಕ್ಷ 5 ಸ್ಥಾನಗಳಲ್ಲಿ ಸ್ಪರ್ಧಿಸಿ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಶಿರೋಮಣಿ ಅಕಾಲಿದಳ 15 ಹಾಗೂ ಬಿಜೆಪಿ ಕೇವಲ 3 ಸ್ಥಾನಗಳಲ್ಲಿ ಮಾತ್ರ ಗೆಲುವು ಪಡೆದುಕೊಂಡಿತ್ತು. ಕಾಂಗ್ರೆಸ್ 117 ವಿಧಾನಸಭೆ ಕ್ಷೇತ್ರಗಳ ಪೈಕಿ77ರಲ್ಲಿ ಗೆಲುವು ಸಾಧಿಸಿತ್ತು.












Click it and Unblock the Notifications