ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಿದ ನವಜೋತ್ ಸಿಂಗ್ ಸಿದ್ದು, ವ್ಯಾಪಕ ಆಕ್ರೋಶ
ಚಂಡೀಗಢ, ಫೆ 15: ಪುಲ್ವಾಮಾದಲ್ಲಿ ನಡೆದ ಉಗ್ರಕೃತ್ಯಕ್ಕೆ ಸಂಬಂಧಪಟ್ಟಂತೆ, ಪಂಜಾಬ್ ಅಸೆಂಬ್ಲಿ ಆವರಣದಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿದ್ದು, ಸಿಆರ್ ಪಿಎಫ್ ಯೋಧರ ಮೇಲೆ ನಡೆದ ದಾಳಿಗೆ, ಪಾಕಿಸ್ತಾನವನ್ನು ದೂಷಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರ, ಭಯೋತ್ಪಾದನಾ ಕೃತ್ಯಕ್ಕೆ ಕುಮ್ಮುಕ್ಕು ಸಿಗುತ್ತಿರುವುದೇ ಪಾಕಿಸ್ತಾನದಲ್ಲಿ, ಮೊದಲು ಅವರಿಗೆ ತಕ್ಕ ಉತ್ತರವನ್ನು ನೀಡಬೇಕಿದೆ ಎಂದು ಹೇಳಿದ್ದರು. ಆದರೆ, ಅವರದೇ ಸರಕಾರದ ಮಂತ್ರಿ ನವಜೋತ್ ಸಿದ್ದು ವ್ಯತಿರಿಕ್ತ ಹೇಳಿಕೆಯನ್ನು ನೀಡಿ, ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಪುಲ್ವಾಮಾದಲ್ಲಿ ನಡೆದ ಘಟನೆಯನ್ನು ಕಟುವಾಗಿ ಖಂಡಿಸುತ್ತೇನೆ, ಇದು ಹೇಡಿಗಳು ಮಾಡುವ ಕೆಲಸ. ಉಗ್ರಕೃತ್ಯಕ್ಕೆ ಶಾಸ್ವತ ಪರಿಹಾರ ಸಿಗಬೇಕಾಗಿದೆ. ಇದು ಸಾಧ್ಯವಾಗುವುದು ಪಾಕಿಸ್ತಾನದ ಜೊತೆಗೆ ಮಾತುಕತೆ ನಡೆಸುವುದರಿಂದ ಮಾತ್ರ ಸಾಧ್ಯ ಎಂದು ಟ್ವೀಟ್ ಮಾಡಿದ್ದರು.

ಇದಾದ ನಂತರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಯಾರೋ ಮಾಡಿದ ಕೃತ್ಯಕ್ಕೆ ಇಡೀ ದೇಶವನ್ನು (ಪಾಕಿಸ್ತಾನ) ದೂಷಿಸುವುದು ತಪ್ಪು. ಇದಕ್ಕೆ ಸಂಬಂಧಪಟ್ಟ ಸಂಘಟನೆಯನ್ನೋ ಅಥವಾ ವ್ಯಕ್ತಿಯನ್ನು ದೂಷಿಸಬೇಕು ಎಂದು ಪರೋಕ್ಷವಾಗಿ, ಗುರುವಾರದ ಉಗ್ರಕೃತ್ಯದಲ್ಲಿ ಪಾಕ್ ಕೈವಾಡವಿಲ್ಲ ಎಂದು ಸಿದ್ದು ಹೇಳಿದ್ದಾರೆ.
ಸಿದ್ದು ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅವರು ಭಾಗವಹಿಸುವ ಕಪಿಲ್ ಶರ್ಮಾ ಶೋನಿಂದ ಅವರನ್ನು ಹೊರಹಾಕಿ ಎಂದು ಸಾಮಾಜಿಕ ತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇಮ್ರಾನ್ ಖಾನ್, ಪಾಕ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮದಲ್ಲಿ ನವಜೋತ್ ಸಿಂಗ್ ಸಿದ್ದು ಭಾಗವಹಿಸಿ, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.












Click it and Unblock the Notifications