ಬ್ರಾಹ್ಮಣರ ಮೀಸಲಾತಿಯಿಂದ ಹಿಂದುಳಿದ ವರ್ಗಗಳಿಗೆ ಅನ್ಯಾಯ-ಯತೀಂದ್ರ ಸಿದ್ದರಾಮಯ್ಯ
ಚಾಮರಾಜನಗರ, ಡಿಸೆಂಬರ್2- ಕೇಂದ್ರ ಸರ್ಕಾರ ಯಾವುದೇ ಹೋರಾಟ ಮಾಡದೆ ಇರುವ ಬ್ರಾಹ್ಮಣರಿಗೆ ಶೇಕಡಾ 10ರಷ್ಟು ಮೀಸಲಾತಿಯನ್ನು ನೀಡುವ ಮೂಲಕ ಅತ್ಯಂತ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದೆ ಎಂದು ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಬ್ರಾಹ್ಮಣರಿಗೆ ಶೇಕಡಾ 10ರಷ್ಟು ಮೀಸಲಾತಿ ನೀಡಿರುವುದರಿಂದ ಅತ್ಯಂತ ಹೆಚ್ಚಿನ ನಷ್ಟವಾಗಿರುವುದು ಕುರುಬ ಸಮುದಾಯಕ್ಕೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಯತೀಂದ್ರ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭೆ ವಿಪಕ್ಷ ನಾಯಕರಾಗಿ ಮುಂದುವರೆಯಲಿದ್ದಾರೆಯೇ ಮಲ್ಲಿಕಾರ್ಜುನ ಖರ್ಗೆ?
ಚಾಮರಾಜನಗರ ತಾಲೂಕಿನಲ್ಲಿ ನಡೆದ ಕನಕ ಜಯಂತೋತ್ಸವದಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗದವರು ಶತಮಾನಗಳಿಂದ ಶೋಷಣೆಗೊಳಗಾದ ಸಮಾಜಗಳಿಗೆ ಮೀಸಲಾತಿ ನೀಡಲು ಪ್ರಯತ್ನ ಪಟ್ಟಾಗಲೆಲ್ಲಾ ವಿರೋಧ ವ್ಯಕ್ತಪಡಿಸಿದವರು ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ಎಂದು ಕಿಡಿಕಾರಿದರು.

ಬ್ರಾಹ್ಮಣರಿಗೆ ಯಾವ ಮಾನದಂಡದ ಮೇಲೆ ಮೀಸಲಾತಿ ನೀಡಿದ್ದಾರೆ
ಬಿಜೆಪಿಯವರು ಸನಾತನ ಧರ್ಮವನ್ನು ಪ್ರತಿಪಾತಿಸುವ ಮೂಲಕ ಅಂಬೇಡ್ಕರ್ ಅವರ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದಾರೆ. ಯಾವುದೇ ಹೋರಾಟ ಮಾಡದ ಬ್ರಾಹ್ಮಣರಿಗೆ ಶೇಕಡಾ 10ರಷ್ಟು ನೀಡಿದೆ. ಆದರೆ, ಸತತ ಹೋರಾಟ ಮಾಡುತ್ತಿರುವ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವಲ್ಲಿ ತಾರತಮ್ಯ ಮಾಡುತ್ತಿವೆ. ಶೇ.4ರಷ್ಟು ಮೀಸಲಾತಿಯನ್ನು ಹೆಚ್ಚು ಜನಸಂಖ್ಯೆ ಹೊಂದಿರುವ ಕುರುಬ ಸಮಾಜಕ್ಕೆ ನೀಡಲಾಗಿದೆ. ದೇಶದಲ್ಲಿ ಶೇ.3ರಷ್ಟು ಜನಸಂಖ್ಯೆ ಹೊಂದಿರುವ ಬ್ರಾಹ್ಮಣರಿಗೆ 10ರಷ್ಟು ಮೀಸಲಾತಿಯನ್ನು ಯಾವ ಮಾನದಂಡದಲ್ಲಿ ನೀಡಲಾಯಿತು. ಅದನ್ನು ಪ್ರಶ್ನೆ ಮಾಡಿದರೆ, ಬಿಜೆಪಿ ಹಾಗೂ ಹಿಂದುತ್ವವಾದಿಗಳಲ್ಲಿ ಉತ್ತರವಿಲ್ಲ. ನ್ಯಾಯಾಲಯವು ಸಹ ಈ ಮೀಸಲಾತಿಯನ್ನು ಎತ್ತಿ ಹಿಡಿದಿದೆ ಎಂದರು.

ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು
ಮಾತು ಮುಂದುವರಿಸಿದ ಅವರು, ಈ ಹಿನ್ನೆಲೆಯಲ್ಲಿ ತಳ ಸಮುದಾಯಗಳು ಒಗ್ಗಟ್ಟು ಕಾಪಾಡಿಕೊಳ್ಳಬೇಕು. ಮುತ್ತಿಗೆ ಗ್ರಾಮದಲ್ಲಿ ಎಲ್ಲಾ ಸಮುದಾಯಗಳು ಒಗ್ಗಟ್ಟಿನಿಂದ ಅಂಬೇಡ್ಕರ್ ಹಾಗೂ ಕನಕ ಜಯಂತಿಯನ್ನು ಅಚರಣೆ ಮಾಡುವ ಮೂಲಕ ಮಾದರಿ ಗ್ರಾಮವಾಗಿದೆ. ಇತ್ತೀಚಿನ ದಿನಗಳಲ್ಲಿ ಓಬಿಸಿ ಹಾಗೂ ಎಸ್‌ಸಿ ಎಸ್‌ಟಿ ನಡುವೆ ಮೀಸಲಾತಿಗಾಗಿ ಕಂದಕ ನಿರ್ಮಾಣ ಮಾಡುವ ಹುನ್ನಾರ ನಡೆಯುತ್ತಿದೆ. ಇದು ನಿಲ್ಲಬೇಕು. ಕುರುಬರು ಎಸ್‌ಟಿ ಮೀಸಲಾತಿ ಕೇಳಿದರೆ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಎಸ್‌ಟಿ ಕೇಳಿದರೆ ಆ ಸಮುದಾಯಕ್ಕೆ ಅನ್ಯಾಯವಾಗುತ್ತದೆ ಎಂಬ ವಿರೋಧಗಳು ಕೇಳಿಬರುತ್ತಿದೆ. ಹೀಗಾಗಿ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರು ಒಗ್ಗಟ್ಟು ಪ್ರದರ್ಶನ ಮಾಡುವ ಇಂತಹ ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಮಕ್ಕಳನ್ನು ವಿದ್ಯಾವಂತರನನ್ನಾಗಿ ಮಾಡಿ
ಇನ್ನು ಕನಕ ಜಯಂತೋತ್ಸವದಲ್ಲಿ ಉಪಸ್ಥಿತರಿದ್ದ ಕೆ.ಆರ್. ನಗರದ ಕಾಗಿನೆಲೆ ಶಾಖಾ ಮಠದ ಕಿರಿಯ ಶ್ರೀಗಳಾದ ಅರುಣ ಸಿದ್ದೇಶ್ವರ ಸ್ವಾಮಿ ಮಾತನಾಡಿ, ಮುತ್ತಿಗೆ ಗ್ರಾಮ ಮುತ್ತಿನಂಥ ಗ್ರಾಮವಾಗಿದ್ದು, ಕನಕದಾಸರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡಿದೆ. ಇಲ್ಲಿ ಎಲ್ಲಾ ವರ್ಗದವರು ಜೊತೆಗೆ ಅನ್ಯೋನ್ಯತೆಯಿಂದ ನಡೆಯುತ್ತಿದ್ದಾರೆ. ಗ್ರಾಮದಲ್ಲಿರುವ ಎಲ್ಲರೂ ಸಹ ವೈಯಕ್ತಿಕ ಭಿನ್ನಾಪ್ರಾಯವನ್ನು ಬಿಟ್ಟು ಗ್ರಾಮದ ಅಭಿವೃದ್ದಿಯತ್ತ ಗಮನ ಕೊಡಿ. ಮಕ್ಕಳನ್ನು ವಿದ್ಯಾವಂತರನನ್ನಾಗಿ ಮಾಡಿ, ಸಮಾಜದ ಮುಖ್ಯವಾಹಿನಿ ಬರಬೇಕು ಎಂದು ಹೇಳಿದರು.

ಮುತ್ತಿಗೆ ಗ್ರಾಮದಲ್ಲಿ 555ನೇ ಕನಕ ಜಯಂತೋತ್ಸವ
ಚಾಮರಾಜನಗರ ತಾಲೂಕಿನ ಮುತ್ತಿಗೆ ಗ್ರಾಮದಲ್ಲಿ ಕನಕ ಯುವಕರ ಸೇನೆ ವತಿಯಿಂದ ಭಕ್ತ ಕನಕದಾಸರ 555ನೇ ಕನಕ ಜಯಂತೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಸಮಾಜದ ಬಂಧುಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ತಾಲೂಕು ಕುರುಬ ಸಂಘದ ಅಧ್ಯಕ್ಷ ಸಿ.ಎನ್. ಬಾಲರಾಜು, ಉಪಾಧ್ಯಕ್ಷ ಉಮೇಶ್, ಗೌರವಧ್ಯಕ್ಷ ಸೋಮಣ್ಣೇಗೌಡ, ಪ್ರದೇಶದ ಕುರುಬರ ಸಂಘ ಅಧ್ಯಕ್ಷ ಸುಬ್ರಮಣ್ಯ, ಮುಖಂಡರಾದ ವಕೀಲೆ ಜಿ. ನಾಗಶ್ರೀಪ್ರತಾಪ್, ಎಚ್.ಎಂ. ಗಣೇಶ ಪ್ರಸಾದ್, ಕುರುಬರ ಸಂಘದ ನಿರ್ದೇಶಕ ಜೆ. ಗೋಪಿ. ಎಪಿಎಂಸಿ ಅಧ್ಯಕ್ಷ ಎಂ.ಬಿ. ಗುರುಸ್ವಾಮಿ, ಜಿಲ್ಲಾ ಕಸಾಪ ಉಪಾಧ್ಯಕ್ಷ ಮಾದಾಪುರ ರವಿಕುಮಾರ್, ಹೆಗ್ಗೋಠಾರ ಗ್ರಾ.ಪಂ. ಅಧ್ಯಕ್ಷೆ ದೀಪ ಸಂತೋಷ, ಸದಸ್ಯರಾದ ಡಿ. ಮಂಜು, ಅಂಬಿಕಾ ವಿಲ್ಸನ್, ಪಿಡಿಓ ಮಾದಪ್ಪ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ನಂಜೇಗೌಡ, ಉಪಾಧ್ಯಕ್ಷ ಬಸಪ್ಪನಪಾಳ್ಯ ನಟರಾಜು, ಮಾಜಿ ಅಧ್ಯಕ್ಷ ಜನ್ನೂರು ಮಹದೇವ್, ಮಾಜಿ ಅಧ್ಯಕ್ಷ ಬಸಪ್ಪನಪಾಳ್ಯ ರಾಜಶೇಖರ್, ಕನಕ ನೌಕರರ ಸಂಘದ ಅಧ್ಯಕ್ಷ ನಿಂಗೇಗೌಡ, ಮುತ್ತಿಗೆ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಕಮಿಟಿಯ ಬಸವರಾಜು, ಜವರೇಗೌಡ, ಶಿವಲಿಂಗೇಗೌಡ, ಬೆಳ್ಳೇಗೌಡ, ನಾಗೇಶ್, ಮುತ್ತಿಗೆ ಮೂರ್ತಿ, ಮುತ್ತಿಗೆ ದೊರೆ, ಕರಿನಂನಪುರ ಸ್ವಾಮಿ, ಹಳೇಪುರ ಬಸವಣ್ಣ, ಶಿಕ್ಷಕ ಬಸವರಾಜು ಹಾಗೂ ಇತರರು ಭಾಗಿಯಾಗಿದ್ದರು.