ತಿರುವಿನಲ್ಲಿ ವಾಲಿದ ಕೆಎಸ್‌ಆರ್‌ಟಿಸಿ ಬಸ್: ಆಯತಪ್ಪಿ ಬಿದ್ದು ಮಹಿಳೆ ಸಾವು
ಚಾಮರಾಜನಗರ, ಆಗಸ್ಟ್ 29: ಕೆಎಸ್‌ಆರ್‌ಟಿಸಿ ಬಸ್‌ನಿಂದ ಆಯತಪ್ಪಿ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ತಾಳುಬೆಟ್ಟ ಸಮೀಪದ 2ನೇ ತಿರುವಿನಲ್ಲಿ ನಡೆದಿದೆ. ಮದ್ದೂರು ತಾಲೂಕಿನ ಕರಡಿಕೆರೆ ಗ್ರಾಮದ ವಿನೋದಾ (45) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಮೃತ ವಿನೋದಾ ಕರಡಿಕೆರೆಯಿಂದ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದು, ಬೆಟ್ಟದಿಂದ ಹನೂರಿಗೆ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ವಿನೋದಾ ಕೆಎಸ್‌ಆರ್‌ಟಿಸಿ ಬಸ್‌ನ ಬಾಗಿಲು ಹತ್ತಿರದ ಸೀಟ್‌ನಲ್ಲಿ ಕುಳಿತಿದ್ದರು. ಹಿಂಬದಿ ಬಾಗಿಲು ಇಲ್ಲದ ಕಾರಣ ತಾಳುಬೆಟ್ಟ ಸಮೀಪದ 2ನೇ ತಿರುವಿನಲ್ಲಿ ಬಸ್ ಜೋರಾಗಿ ವಾಲಿದ್ದು, ಮಹಿಳೆ ಆಯತಪ್ಪಿ ಬಸ್‌ನಿಂದ ಕೆಳಗೆ ಬಿದ್ದಿದ್ದಾರೆ.
ಘಟನೆಯಲ್ಲಿ ಮಹಿಳೆಯ ತಲೆಗೆ ಬಲವಾದ ಪೆಟ್ಟುಬಿದ್ದಿದ್ದು, ದುರಾದೃಷ್ಟವಶಾತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಕೆಎಸ್‌ಆರ್‌ಟಿಸಿ ಬಸ್-ಕಾರು ಅಪಘಾತ: ಆರು ಮಂದಿ ಸ್ಥಳದಲ್ಲೇ ಸಾವು
ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕನಕಪುರ ತಾಲೂಕಿನ ಸಾತನೂರು ಬಳಿಯ ಕೆಮ್ಮಾಳೆ ಗೇಟ್ ಬಳಿ ಸೋಮವಾರ ಸಂಜೆ ನಡೆದಿದೆ.
ಸಾತನೂರು ಕಡೆಯಿಂದ ಮೈಸೂರು ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮತ್ತು ಕ್ವಾಲೀಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿಯಾಗಿವೆ. ಬೆಂಗಳೂರಿನ ಚಂದಾಪುರ ನಿವಾಸಿಗಳಾದ ನಾಗೇಶ್, ಪುಟ್ಟರಾಜು, ಜೋತಿರ್ಲಿಂಗಪ್ಪ (ಕಾರು ಮಾಲೀಕ), ಗೋವಿಂದ, ಕುಮಾರ್ ಮೃತ ದುರ್ದೈವಿಗಳಾಗಿದ್ದು, ಕ್ವಾಲೀಸ್ ವಾಹನದಲ್ಲಿದ್ದ 6 ಮಂದಿಯೂ ಸಹ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನು ಕೆಎಸ್‌ಆರ್‌ಟಿಸಿ ಬಸ್‌ನ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications