ಬಿಳಿಗಿರಿರಂಗನ ಬೆಟ್ಟದಲ್ಲಿ 'ಕಾನು' ಗ್ರಂಥಾಲಯ ಆರಂಭಕ್ಕೆ ಕಾರಣ ಏನು? ಇಲ್ಲಿ ಯಾವೆಲ್ಲ ಪುಸ್ತಕಗಳು ಸಿಗಲಿವೆ?-ಇಲ್ಲಿದೆ ಮಾಹಿತಿ
ಚಾಮರಾಜನಗರ, ಆಗಸ್ಟ್, 25: ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಆದಿವಾಸಿಗಳ ಅಧ್ಯಯನ ಮಾಡಲು ಎದುರಾಗುವ ವಿಷಯ ವಸ್ತು ಕೊರತೆ ನೀಗಿಸಲು, ಆದಿವಾಸಿಗಳಲ್ಲಿ ಸಂಶೋಧನಾತ್ಮಕ ಲೇಖನ ಬರೆಯುವ ಸಂಸ್ಕೃತಿ ಹುಟ್ಟುಹಾಕಲು ಬಿಳಿಗಿರಿರಂಗನ ಬೆಟ್ಟದಲ್ಲಿ 'ಕಾನು' ಎಂಬ ಗ್ರಂಥಾಲಯವನ್ನು ಆರಂಭ ಮಾಡಲಾಗಿದೆ. ಹಾಗಾದರೆ ಇಲ್ಲಿ ಏನೆಲ್ಲಾ ಸೌಲಭ್ಯಗಳಿವೆ ಎಂದು ಇಲ್ಲಿ ತಿಳಿಯಿರಿ.
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಮಾರಿಗುಡಿ ಪಕ್ಕದ ಆದಿವಾಸಿ ಆರೋಗ್ಯ ಸಂಪನ್ಮೂಲ ಕೇಂದ್ರದ ಆವರಣದಲ್ಲಿ 'ಕಾನು' ಹೆಸರಿನಲ್ಲಿ ಗ್ರಂಥಾಲಯ ಸ್ಥಾಪನೆ ಮಾಡಲಾಗಿದೆ. ಆದಿವಾಸಿ ಸಮುದಾಯದ ಸಮಾನ ಮನಸ್ಕರು ಒಗ್ಗೂಡಿ ದಕ್ಷಿಣ ಭಾರತದ ಆದಿವಾಸಿ ಜ್ಞಾನ ಕೇಂದ್ರದ ಮೂಲಕ ಈ ಗ್ರಂಥಾಲಯವನ್ನು ಸ್ಥಾಪನೆ ಮಾಡಿದ್ದು, ಇಂದು ಇದು ಸ್ಥಳೀಯ ಆದಿವಾಸಿಗಳಿಂದ ಉದ್ಘಾಟನೆಯಾಗಿದೆ.

ಆದಿವಾಸಿಗಳು ಸಮಾಜದ ಪ್ರಾಚೀನ ಸಮುದಾಯ ಆಗಿದ್ದರೂ, ಶಿಕ್ಷಣದಿಂದ ವಂಚಿತರಾಗಿದ್ದಾರೆ. ಪ್ರಸ್ತುತ ಸಮಾಜದ ಕಟ್ಟಕಡೆಯ ಜನಾಂಗವಾಗಿ ಉಳಿದುಬಿಟ್ಟಿದ್ದಾರೆ. ಇವರ ಜೀವನ, ಸಂಸ್ಕೃತಿ, ಆಚಾರ, ವಿಚಾರಗಳು ವಿಭಿನ್ನವಾಗಿವೆ. ಅಧ್ಯಯನಕ್ಕೆ ಆಸಕ್ತಿದಾಯಕ ಆಗಿರುವ ಆದಿವಾಸಿಗಳ ಕುರಿತು ಸಂಶೋಧಕರಿಗೆ ರಾಜ್ಯದಲ್ಲಿ ಎಲ್ಲೂ ಸಹ ಒಂದೇ ಕಡೆ ವಿಷಯ ವಸ್ತುಗಳು ಸಿಗುವುದಿಲ್ಲ.
ದಕ್ಷಿಣ ಭಾರತದಲ್ಲಿ ಆದಿವಾಸಿಗಳ ಕುರಿತು ಅಧ್ಯಯನ ನಡೆದಿರುವುದು ಮತ್ತು ಆದಿವಾಸಿಗಳಲ್ಲಿರುವ ಬೆರಳೆಣಿಕೆಯಷ್ಟು ಬರಹಗಾರರನ್ನು ಪ್ರೋತ್ಸಾಹಿಸಿ ಲೇಖನಗಳನ್ನು ಬರೆಸಿರುವುದೂ ಕಡಿಮೆ. ಈ ಕೊರಗನ್ನು ನೀಗಿಸಲು ಮತ್ತು ಆದಿವಾಸಿಗಳಲ್ಲಿ ಅಕ್ಷರ ಸಂಸ್ಕೃತಿಯನ್ನು ಉತ್ತೇಜಿಸಲು ಬಿಳಿಗಿರಿರಂಗನಬೆಟ್ಟದಲ್ಲಿ ಕಾನು ಗ್ರಂಥಾಲಯವನ್ನು ಸ್ಥಾಪನೆ ಮಾಡಲಾಗಿದೆ.
1,200ಕ್ಕೂ ಹೆಚ್ಚು ಪುಸ್ತಕಗಳ ಲಭ್ಯ: ಕಾನು ಹೆಸರಿನ ಗ್ರಂಥಾಲಯದಲ್ಲಿ ದಕ್ಷಿಣ ಭಾರತದ ಆದಿವಾಸಿಗಳ ಕುರಿತು ಅಧ್ಯಯನ ಮಾಡುವವರಿಗೆ ಸಂಶೋಧನಾತ್ಮಕ ಲೇಖನಗಳು, ಪುಸ್ತಕಗಳು ಸಿಗಲಿವೆ. ಶಿಕ್ಷಣ, ಆರೋಗ್ಯ, ಅರಣ್ಯ, ಅರಣ್ಯ ಕಾಯ್ದೆ, ಜೀವನ ನಿರ್ವಹಣೆ, ಸಂಸ್ಕೃತಿ, ಭಾಷೆ ಇನ್ನಿತರೆ ವಿಷಯಗಳ ಕುರಿತು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು.
ಅಲ್ಲದೇ ಬೇರೆ ಕಡೆ ಸಂಗ್ರಹಿಸಿರುವ ಲೇಖನಗಳನ್ನೂ ಸಹ ಆನ್‌ಲೈನ್ ಮೂಲಕ ಇಲ್ಲಿ ಪಡೆಯಬಹುದು. ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿರುವ ಆದಿವಾಸಿಗಳ ಇತಿಹಾಸ ಮತ್ತು ವಾಸ್ತವವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿದ ವಿಮರ್ಶಾತ್ಮಕ ಟಿಪ್ಪಣಿಗಳು 1,200ಕ್ಕೂ ಹೆಚ್ಚಿನ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಇಡಲಾಗಿದೆ. ಲೇಖನಗಳು, ಬ್ಲಾಗ್‌ಗಳನ್ನೂ ಸಹ ಗ್ರಂಥಾಲಯದಲ್ಲಿ ನೋಡಬಹುದು.
ಇವೆಲ್ಲವೂ ಭಾಗಶಃ ಇಂಗ್ಲೀಷ್‌ನಲ್ಲಿ ಇರಲಿವೆ. ಆದಿವಾಸಿಗಳ ಕುರಿತು ಅಧ್ಯಯನ ಮಾಡುವ ಸಂಶೋಧಕರಿಗೆ ಕಾನು ಗ್ರಂಥಾಲಯ ಜ್ಞಾನದ ಮೂಲವಾಗಲಿದೆ. ಇನ್ನು ಕಾನು ಎಂದರೆ ಕಾಡು, ಅರಣ್ಯ ಎಂಬ ಅರ್ಥ ಬರಲಿದ್ದು, ಅರಣ್ಯವಾಸಿಗಳ ಬದುಕು-ಬವಣೆ ತಿಳಿಯಲು, ಸಂಸ್ಕೃತಿ ಸಂಶೋಧನೆಗೆ ಈ ಗ್ರಂಥಾಲಯ ನೆರವಾಗಲಿದೆ.












Click it and Unblock the Notifications