ಹನೂರು: ಕಾಡುಗಳ್ಳ ವೀರಪ್ಪನ್‌ನ ಸಹಚರ ಹಾಗೂ ಪಾಲಾರ್ ಬಾಂಬ್ ಸ್ಫೋಟದ ಅಪರಾಧಿ ನಿಧನ
ಚಾಮರಾಜನಗರ, ಡಿಸೆಂಬರ್, 15: ಕಾಡುಗಳ್ಳ ವೀರಪ್ಪನ್‌ನ ಸಹಚರ, ಪಾಲಾರ್ ಬಾಂಬ್ ಸ್ಫೋಟದ ಅಪರಾಧಿ ಜ್ಞಾನಪ್ರಕಾಶ್ (69) ಶುಕ್ರವಾರ ಕ್ಯಾನ್ಸರ್‌ನಿಂದ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.
ಹನೂರು ತಾಲೂಕಿನ ಸಂದನಪಾಳ್ಯ ಗ್ರಾಮದಲ್ಲಿ ವಾಸವಿದ್ದ ಜ್ಞಾನಪ್ರಕಾಶ್ ಮೃತಪಟ್ಟಿದ್ದಾರೆ. ಈತ ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿ ಗಲ್ಲು ಶಿಕ್ಷೆಗೆ ಒಳಗಾಗಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ವಿನವಿ ಸಲ್ಲಿಸಲಾಗಿ 2014ರಲ್ಲಿ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನನಾಗಿ ಬದಲಿಸಿತ್ತು.

29 ವರ್ಷ ಜೈಲಿನಲ್ಲಿದ್ದು ಕಳೆದ ವರ್ಷ ಮನೆಗೆ
29 ವರ್ಷ ಸೆರೆವಾಸ ಅನುಭವಿಸಿದ್ದ ಜ್ಞಾನಪ್ರಕಾಶ್ ಶ್ವಾಸಕೋಶದ ಕ್ಯಾನ್ಸರ್‌ಗೆ ಬಾಧೆಗೆ ಒಳಗಾಗಿದ್ದರು. ಮಾನವೀಯತೆ ಆಧಾರದಲ್ಲಿ 2022ರ ಡಿಸೆಂಬರ್ 20ರಂದು ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಲಾಗಿ ಜೀವನ ಅಂತ್ಯದಲ್ಲಿ ಮನೆ ಸೇರಿಕೊಂಡಿದ್ದರು. ಸದ್ಯ, ಜ್ಞಾನಪ್ರಕಾಶ್ ಇಂದು ನಿಧನರಾಗಿದ್ದು, ಪತ್ನಿ, ಮಕ್ಕಳನ್ನು ಅಗಲಿದ್ದಾರೆ. ಪಾಲಾರ್ ಬಾಂಬ್ ಪ್ರಕರಣದಲ್ಲಿ ಭಾಗಿಯಾಗಿದ್ದ ಸೈಮನ್, ಬಿಲ್ವೇಂದ್ರನ್ ಈಗಾಗಲೇ ಮೃತಪಟ್ಟಿದ್ದು, ವೀರಪ್ಪನ್ ಕೂಡ 2004ರ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ.
ಪಾಲಾರ್ ಬಾಂಬ್ ಸ್ಫೋಟದ ಹಿನ್ನೆಲೆ
ಮಹದೇಶ್ವರ ಬೆಟ್ಟಕ್ಕೆ ಹೊಂದಿಕೊಂಡಿರುವ ಗ್ರಾಮ ಪಾಲಾರ್. ಇದರ ಸುತ್ತಮುತ್ತ ಸುಮಾರು 50 ಕಿಲೋ ಮೀಟರ್ ವ್ಯಾಪ್ತಿಯನ್ನು ವೀರಪ್ಪನ್ ಆಕ್ರಮಿಸಿಕೊಂಡಿದ್ದ. 1993ರ ಏಪ್ರಿಲ್ 9ರಂದು ತಮಿಳುನಾಡಿನ ಅಂದಿನ ಎಸ್‌ಟಿಎಫ್ ಮುಖ್ಯಸ್ಥರಾಗಿದ್ದ ಗೋಪಾಲಕೃಷ್ಣ ಮತ್ತು ಅವರ ತಂಡದ ಮೇಲೆ ವೀರಪ್ಪನ್ ಸಹಚರರು ದಾಳಿ ನಡೆಸಲು ಸಂಚು ರೂಪಿಸಿದ್ದರು.
ಸಾಕಷ್ಟು ಬಾಂಬ್‌ಗಳನ್ನು ಸಂಗ್ರಹಿಸಿಟ್ಟಿದ್ದ ವೀರಪ್ಪನ್ ಸಹಚರರು ಪಾಲಾರ್ ಸಮೀಪದ ಸೊರೆಕಾಯಿಪಟ್ಟಿ ಬಳಿ ನೆಲಬಾಂಬ್ ಹೂತಿಟ್ಟಿದ್ದರು. ಗೋಪಾಲ್‌ಕೃಷ್ಣ ಅವರನ್ನು ಒಳಗೊಂಡ ವಿಶೇಷ ತಂಡ ಮಾಹಿತಿದಾರರ ಜೊತೆ ತಮಿಳುನಾಡು ಗಡಿ ಭಾಗದಲ್ಲಿರುವ ಪಾಲಾರ್‌ನತ್ತ ಹೊರಟಿತು. ಸೈಮನ್ ಸಿಡಿಸಿದ ನೆಲಬಾಂಬ್‌ನಿಂದ 22 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಘಟನೆ ಸಂಬಂಧ ವೀರಪ್ಪನ್ ಸೇರಿ 124 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು.
9 ಏಪ್ರಿಲ್ 1993ರಂದು ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವ ಪಾಲಾರ್‌ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ 22 ಪೊಲೀಸರನ್ನು ಕೊಂದು ಅನೇಕರನ್ನು ಗಾಯಗೊಳಿಸಿದ್ದಕ್ಕಾಗಿ ಜ್ಞಾನಪ್ರಕಾಶ್ ಮತ್ತು ಸೈಮನ್ ಅಂತೋನಿಯಪ್ಪ, ಮೀಸೆಕರ ಮಾದಯ್ಯ ಮತ್ತು ಬಿಲವೇಂದ್ರನ್ ಅವರನ್ನು ಬಂಧಿಸಲಾಯಿತು. 1994ರಲ್ಲಿ ಭಯೋತ್ಪಾದಕ ಮತ್ತು ವಿಚ್ಛಿದ್ರಕಾರಕ ಚಟುವಟಿಕೆಗಳ (ಟಾಡಾ) ತಡೆ ಕಾಯಿದೆಯಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ 124 ವ್ಯಕ್ತಿಗಳಲ್ಲಿ ನಾಲ್ವರು ಭಾಗವಾಗಿದ್ದರು. ಈ ಪೈಕಿ 117 ಮಂದಿಯನ್ನು ಖುಲಾಸೆಗೊಳಿಸಿದರೆ, 7 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ ನಾಲ್ವರನ್ನು 2004ರಲ್ಲಿ ಎಸ್‌ಸಿ ಗಲ್ಲು ಶಿಕ್ಷೆ ವಿಧಿಸಿದ ಬಳಿಕ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಆದಾಗ್ಯೂ 2014ರಲ್ಲಿ, ಸುಪ್ರೀಂ ಕೋರ್ಟ್ ಅವರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತು.












Click it and Unblock the Notifications