ಪ್ರಸಾದಕ್ಕೆ ವಿಷ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ: ಪರಮೇಶ್ವರ್
ಚಾಮರಾಜನಗರ, ಡಿಸೆಂಬರ್ 15: ಜಿಲ್ಲೆಯ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಪ್ರಸಾದದಲ್ಲಿ ವಿಷ ಬೆರೆಸಿ ಹನ್ನೊಂದು ಪ್ರಾಣಗಳ ಜೀವಕ್ಕೆ ಎರವಾದ ಪ್ರಕರಣದಲ್ಲಿ ಚಾಮರಾಜನಗರ ಪೊಲೀಸರು ಇಬ್ಬರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಗೃಹಮಂತ್ರಿಗಳು ಮಾಹಿತಿ ನೀಡಿದ್ದು, ಇದೊಂದು ನೀಚ ಕೃತ್ಯ. ಈ ಕಾರ್ಯ ಎಸಗಿದ ಯಾರೇ ಆಗಲಿ ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ತನಿಖೆ ಈಗಾಗಲೇ ನಡೆಯುತ್ತಿದ್ದು, ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ತನಿಖೆ ಪ್ರಾಥಮಿಕ ಹಂತದಲ್ಲಿರುವ ಕಾರಣ ವಶಕ್ಕೆ ಪಡೆದವರ ಹೆಸರುಗಳನ್ನು ಪ್ರಕಟಿಸಲು ಪೊಲೀಸರು ನಿರಾಕರಿಸಿದ್ದಾರೆ. ಆದರೆ ವಶಪಡಿಸಿಕೊಂಡಿರುವ ಇಬ್ಬರಲ್ಲಿ ಒಬ್ಬರು ದೇವಾಲಯದ ಪ್ರಧಾನ ಪೂಜಾರಿ ಹಾಗೂ ಮತ್ತೊಬ್ಬರು ಪ್ರಸಾದದ ಅಡುಗೆ ಮಾಡಿದ ವ್ಯಕ್ತಿ ಎಂದು ಹೇಳಲಾಗಿದೆ.

ದೇವಾಲಯದ ಆಡಳಿತದ ಸಂಬಂಧ ದ್ವೇಷದಿಂದಲೇ ಈ ಕೃತ್ಯ ನಡೆದಿದೆ ಎಂದು ಸ್ಥಳೀಯರು ಹೇಳುತ್ತಿದ್ದು, ದೇವಾಲಯದ ಆಡಳಿತಕ್ಕೆ ಸಂಬಂಧಿಸಿದಂತೆ ಕೇಸು ದಾಖಲಿಸಿ ಸೋತು, ಹತಾಶೆ ಅನುಭವಿಸಿದ್ದ ತಮಿಳುನಾಡು ಮೂಲದ ಕಾಳಪ್ಪ ಎಂಬುವರೇ ಈ ಕೃತ್ಯ ಮಾಡಿದ್ದಾರೆ ಎಂದು ಸ್ಥಳೀಯರು ಬಲವಾದ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದ ಸಂಬಂಧ ಉನ್ನತ ಮಟ್ಟದ ತನಿಖೆ ಮಾಡಲಾಗುತ್ತದೆ ಎಂದು ಸಿಎಂ ಈಗಾಗಲೇ ಹೇಳಿದ್ದಾರೆ. ಗೃಹ ಸಚಿವರು ಸಹ ಅದನ್ನೇ ಹೇಳಿದ್ದಾರೆ. ಅದರಂತೆ ಇಂದು ಬೆಳಿಗ್ಗೆ ಗುಪ್ತಚರ ಇಲಾಖೆ ಅಧಿಕಾರಿಗಳು ದೇವಾಲಯಕ್ಕೆ ಬಂದು ಬಹು ಸಮಯ ಪರಿಶೀಲನೆ ನಡೆಸಿ, ಸ್ಥಳೀಯರೊಂದಿಗೂ ಮಾಹಿತಿ ಪಡೆದುಕೊಂಡರು.












Click it and Unblock the Notifications