ಪ್ರವಾಸಿಗರ ಪುಂಡಾಟ: ಭರಚುಕ್ಕಿ ಜಲಪಾತದ ತುತ್ತ ತುದಿಯಲ್ಲಿ ನಿಂತು ಫೋಟೋ ಶೂಟ್
ಚಾಮರಾಜನಗರ, ಜುಲೈ, 13: ಮುಂಗಾರು ಮಳೆ ಚುರುಕು ಪಡೆದ ಹಿನ್ನೆಲ ರಾಜ್ಯದಲ್ಲಿನ ಹಲವು ಜಲಾಶಯಗಳ ನೀರಿನ ಮಟ್ಟ ಏರಿಕೆ ಆಗುತ್ತಿದೆ. ಅಲ್ಲದೆ ಜಲಾಪಾತಗಳಲ್ಲಿಯೂ ನೀರಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಈದೃಶ್ಯವನ್ನು ಸವಿಯಲು ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಹಾಗೆಯೇ ಕಾವೇರಿ ನದಿ ಕವಲಾಗಿ ಧುಮ್ಮಿಕ್ಕುವ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತದಲ್ಲಿ ಪ್ರವಾಸಿಗರು ಫೋಟೋಗಾಗಿ ಪ್ರಾಣವನ್ನೇ ಪಣಕ್ಕಿಡುವ ಮೂಲಕ ಪುಂಡಾಟ ಪ್ರದರ್ಶನ ಮಾಡುತ್ತಿದ್ದಾರೆ.
ಕಳ್ಳ ಮಾರ್ಗ ಹಿಡಿದು ಜಲಪಾತದ ತುತ್ತ ತುದಿ ಮೇಲೆ ನಿಂತು ಪ್ರವಾಸಿಗರು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಸ್ವಲ್ಪ ಯಾಮಾರಿದರೂ ಪ್ರಪಾತಕ್ಕೆ ಬೀಳುವ ಅಪಾಯವಿದ್ದರೂ ಕೂಡ ಪ್ರವಾಸಿಗರು ಮಾತ್ರ ತಮಗರಿವಿಲ್ಲದಂತೆ ಪುಂಡಾಟ ಪ್ರದರ್ಶನ ಮಾಡುತಿದ್ದಾರೆ. ಇನ್ನು ನಿಷೇಧಿತ ಪ್ರದೇಶದಲ್ಲಿ ಪ್ರವಾಸಿಗರು ತೆರಳಿದರೂ ಕೂಡ ಅರಣ್ಯ ಮತ್ತು ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವಾಗಿದೆ.

ಅಪಾಯ ಸಂಭವಿಸುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಪುಂಡರ ಅಟ್ಟಹಾಸಕ್ಕೆ ಕಡಿವಾಣ ಹಾಕಬೇಕು ಎಂದು ಇಲ್ಲಿನ ಸ್ಥಳೀಯರು ಒತ್ತಾಯಿಸಿದ್ದಾರೆ.
ರಸ್ತೆಯಲ್ಲೇ ಪುಂಡಾಟ ಮೆರೆದ ಪ್ರವಾಸಿಗರು
ಅದರಲ್ಲೂ ಜಿನುಗು ಮಳೆ ನಡುವೆ ಕಾಫಿನಾಡಿನ ಪ್ರವಾಸಿ ತಾಣಗಳತ್ತ ಪ್ರತಿನಿತ್ಯವೂ ಸಾಗರೋಪಾದಿಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಪ್ರವಾಸಿಗರು ರಸ್ತೆಗಳ ಮಧ್ಯೆ ವಾಹನಗಳನ್ನು ನಿಲ್ಲಿಸಿಕೊಂಡು ಹುಚ್ಚಾಟ ಮೆರೆಯುತ್ತಿದ್ದಾರೆ. ಇಂತಹದ್ದೇ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಡಿ ಘಾಟ್‌ನಲ್ಲೂ ಇತ್ತೀಚೆಗಷ್ಟೇ ನಡೆದಿತ್ತು.
ಜಲಪಾತಗಳ ಬಳಿಯ ರಸ್ತೆಗಳ ಮಧ್ಯೆ ಕಾರ್ ನಿಲ್ಲಿಸಿಕೊಂಡು ಪ್ರವಾಸಿಗರು ಡ್ಯಾನ್ಸ್ ಮಾಡುವ ಮೂಲಕ ಪುಂಡಾಟ ಮೆರೆಯುತ್ತಿದ್ದಾರೆ. ಆದರೆ ಪ್ರವಾಸಿಗರ ಈ ಹುಚ್ಚಾಟವನ್ನು ಹೇಳೋರಿಲ್ಲ-ಕೇಳೋರಿಲ್ಲ ಎನ್ನುವಂತಾಂಗಿದೆ.
ಚಿಕ್ಕಮಗಳೂರು-ದಕ್ಷಿಣಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಡಿ ಘಾಟ್‌ನಲ್ಲಿ ಪ್ರವಾಸಿಗರು ಪ್ರತಿನಿತ್ಯವೂ ಹುಚ್ಚಾಟವನ್ನು ಮೆರೆಯುತ್ತಲೇ ಇದ್ದಾರೆ. ಈ ಭಾಗದಲ್ಲಿ ಮೊದಲೇ ಕಿರಿದಾದ ರಸ್ತೆಗಳು ಇದ್ದು, ವಾಹನ ಸವಾರರಿಗೆ ಇಕ್ಕಟ್ಟು ಆದಂತಾಗಿದೆ. ಇಂತಹದ್ದರಲ್ಲೂ ಕೆಲವರು ರಸ್ತೆ ಮಧ್ಯೆಯೆ ಕಾರ್‌ಗಳನ್ನು ನಿಲ್ಲಿಸಿ ಪುಂಡಾಟ ಮೆರೆಯುವ ಮೂಲಕ ಇನ್ನುಳಿದ ವಾಹನ ಸವಾರರಿಗೂ ಕಿರಿಕಿರಿ ಆಗುವಂತೆ ಮಾಡುತ್ತಿದ್ದಾರೆ.
ದಟ್ಟ ಮಂಜು ಕವಿದ ದಾರಿಯಲ್ಲಿ ವಾಹನ ಪಾರ್ಕಿಂಗ್ ಮಾಡಿ ಡ್ಯಾನ್ಸ್ ಮಾಡುವ ಭರದಲ್ಲಿ ಇನ್ನುಳಿದ ವಾಹನಗಳಿಗೂ ಅಡ್ಡಲಾಗಿ ನಿಲ್ಲುತ್ತಿದ್ದಾರೆ. ಇದರಿಂದ ಅಪಾಘಾತ, ಟ್ರಾಫಿಕ್ ಜಾಮ್‌ಗೂ ಆಹ್ವಾನ ನೀಡಿದಂತಾಗಿದೆ. ಅಷ್ಟೇ ಅಲ್ಲದೆ ಜಲಪಾತಗಳ ಮೇಲೆ ಹತ್ತುವ ದುಸ್ಸಾಹಸಕ್ಕೂ ಕೂಡ ಕೆಲವು ಪ್ರವಾಸಿಗರು ಮುಂದಾಗುತ್ತಿದ್ದಾರೆ. ಈ ಹುಚ್ಚಾಟದಿಂದ ಬೇಸತ್ತ ಸ್ಥಳೀಯರು ಜಲಪಾತಗಳ ಬಳಿ ಪೊಲೀಸರು ಬೀಟ್ ಹಾಕುವಂತೆ ಮನವಿ ಮಾಡಿದ್ದಾರೆ.
ಯುವತಿಯರ ಭರ್ಜರಿ ಡ್ಯಾನ್ಸ್
ಮತ್ತೊಂದೆಡೆ ಮುಂಗಾರು ಮಳೆ ಚುರುಕಾದ ಹಿನ್ನೆಲೆ ಈಗಾಗಲೇ ರಾಜ್ಯದ ಬಹುತೇಕ ಜಲಾಶಯಗಳ ನೀರಿನ ಮಟ್ಟ ಏರಿಕೆ ಆಗುತ್ತಿದ್ದು, ಈ ದೃಶ್ಯವನ್ನು ಸವಿಯಲು ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಅದೇ ರೀತಿ ಜೋಗದ ಸಿರಿಯ ಮಡಿಲಿನಲ್ಲಿ ಯುವತಿಯರು ಸಕತ್ ಸ್ಟೆಪ್ಸ್ ಹಾಕಿ ಗಮನ ಸೆಳೆದಿದ್ದಾರೆ. ಹಾಲ್ನೊರೆಯಂತೆ ಕಂಗೊಳಿಸುವ ಜೋಗ್ ಫಾಲ್ಸ್ ಮುಂದೆ ಯುವತಿಯರು ಹೆಜ್ಜೆ ಹಾಕಿದ್ದಾರೆ.
ರಾಜ, ರಾಣಿ, ರೋರರ್, ರಾಕೇಟ್ ಮುಂದೆ ಯುವತಿಯರು ರೀಲ್ಸ್ ಮಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಹೌದು.. ಇತ್ತೀಚಿಗೆ ಈ ರೀಲ್ಸ್ ಟ್ರೆಂಡ್ ಆಗಿದ್ದು, ಇದಕ್ಕಾಗಿ, ವಿಶ್ವವಿಖ್ಯಾತ ಜೋಗ ಜಲಪಾತದ ಮುಂದೆ ರೀಲ್ಸ್ ಮೊರೆ ಹೋದ ಯುವತಿಯರು, ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.
ಫಾಲ್ಸ್ ನೋಡಲು ಆಗಮಸಿದ ಪ್ರವಾಸಿಗರ ದಂಡು
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತದ ಆಸುಪಾಸಿನಲ್ಲಿ ಕಳೆದೊಂದು ವಾರದಿಂದ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಇದರಿಂದ ಇದೀಗ ಜೋಗ ಜಲಪಾತದ ಕಳೆಯೂ ಹೆಚ್ಚಾಗಿದೆ. ಅಲ್ಲದೆ ನಿರಂತರ ವರ್ಷಧಾರೆಯಿಂದಾಗಿ ಕಂಗೊಳಿಸುತ್ತಿದೆ. ಈ ಜೋಗ ಜಲಪಾತದ ವಯ್ಯಾರವನ್ನು ನೋಡಲು ಪ್ರತಿನಿತ್ಯ ಪ್ರವಾಸಿಗರು ಸಾಗಾರೋಪಾದಿಯಲ್ಲಿ ಹರಿದುಬರುತ್ತಿದ್ದಾರೆ.
ಇನ್ನು ವಾರಾಂತ್ಯದ ಪ್ರವಾಸಕ್ಕೆ ಬಂದಂತಹ ನೂರಾರು ಪ್ರವಾಸಿಗರು ಜೋಗ್ ಫಾಲ್ಸ್ ಸದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಜೋಗ-ಕಾರ್ಗಲ್ ಶರಾವತಿ ಹಿನ್ನೀರ ಪ್ರದೇಶದಲ್ಲಿ ನಿರಂತರ ವರ್ಷಧಾರೆ ಹಿನ್ನೆಲೆಯಲ್ಲಿ ಜಲಪಾತದಲ್ಲಿ ಯಥೇಚ್ಛ ನೀರು ಜಲಪಾತವಾಗಿ ಹೊರಹೋಗುತ್ತಿದ್ದು, ಇದನ್ನು ಅಸ್ವಾದಿಸುವುದೇ ಕಣ್ಣಿಗೆ ಹಬ್ಬವಾದಂತಾಗಿದೆ.












Click it and Unblock the Notifications