ಚಾಮರಾಜನಗರ: ಕೆರೆಯಲ್ಲಿ ಕೂಲ್.. ಕೂಲ್ ಆಗಿ ಮಲಗಿದ್ದ ಹುಲಿ ಕೆಣಕಿದ ಗಜರಾಜ-ಮುಂದೇನಾಯ್ತು?-ವಿಡಿಯೋ ವೈರಲ್
ಚಾಮರಾಜನಗರ, ಮೇ, 02: ರಾಜ್ಯದ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ಹಿನ್ನೆಲೆ ಬರೀ ಮನುಷ್ಯರಲ್ಲದೆ, ಪ್ರಾಣಿಗಳು ಕೂಡ ಬೇಸತ್ತು ಹೋಗಿವೆ. ಮನುಷ್ಯರು ದೇಹ ತಂಪಾಗಿಡಲು ತಂಪು ಪಾನೀಯಗಳು ಸೇರಿದಂತೆ ಇನ್ನು ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ. ಹಾಗೆಯೆ ಇದೀಗ ಕಾಡು ಪ್ರಾಣಿಗಳು ಕೂಡ ಎಲ್ಲಿ ನೀರು ಸಿಗುತ್ತದೆಯೋ ಅಲ್ಲೇ ನೆಲೆಯೂರಿಬಿಡುತ್ತವೆ. ಅಲ್ಲದೆ ಅವುಗಳ ನಡುವೆಯೇ ಯುದ್ಧಗಳು ಕೂಡ ಆರಂಭವಾಗುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿಬಿಟ್ಟಿದೆ. ಇಂತಹ ತುಂಬಾ ಘಟನೆಗಳು ನಡೆಯುವುದೇ ಚಾಮರಾಜನಗರ ಜಿಲ್ಲೆಯ ಭಾಗದಲ್ಲಿ.
ಏನ್ ಸೆಕೆ ಅಂಥಾ ಕೆರೆಯಲ್ಲಿ ಮಲಗಿ ಕೂಲ್ ಕೂಲ್ ಆಗುತ್ತಿದ್ದ ಹುಲಿಯು ಆನೆಯನ್ನು ಕಂಡು ಕಂಗೆಟ್ಟು ಓಡುವಂತೆ ಮಾಡಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಫಾರಿಯಲ್ಲಿ ಗುರುವಾರ (ಮೇ 02) ನಡೆದಿದ್ದು, ಸದ್ಯ ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಗಜರಾಜನ ಸವಾರಿಗೆ ಹುಲಿರಾಯ ಸ್ಥಳದಿಂದ ಕಾಲ್ಕಿತ್ತ ದೃಶ್ಯವನ್ನು ಕಂಡ ಸಫಾರಿಗರು ರೋಮಾಂಚಿತರಾಗಿದ್ದಾರೆ. ಬಿಸಿಲಿನ ಝಳದಿಂದ ಹುಲಿಯೊಂದು ಬಂಡೀಪುರದಲ್ಲಿ ಕೆರೆಗೆ ಇಳಿದು ರಿಲ್ಯಾಕ್ಸ್ ಮೂಡಿಗೆ ಜಾರಿತ್ತು. ದಾಹ ತಣಿಸಿಕೊಳ್ಳಲು ಬಂದ ಗಜರಾಜ ನೀರು ಕುಡಿದು ನಂತರ ಹುಲಿಯನ್ನು ಕಂಡಿದೆ. ಕೂಡಲೇ ಗಜರಾಜ ದಾಳಿ ಮಾಡಲು ಮುಂದಾದ ಹುಲಿಯು ಅಲ್ಲಿಂದ ಕಾಲ್ಕಿತ್ತಿದ್ದು, ಈ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.
ಜಿಂಕೆಯನ್ನು ಬೇಟೆಯಾಡಿದ ಹುಲಿ: ಬಂಡೀಪುರದಲ್ಲಿ ಸಫಾರಿಗೆ ತೆರಳಿದ್ದ ವಾಹನಗಳ ಸನಿಹದಲ್ಲೇ ಹುಲಿಯೊಂದು ಜಿಂಕೆಯನ್ನು ಬೇಟೆಯಾಡಿ ಎಳೆದೊಯ್ಯುತ್ತಿರುವ ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ಇತ್ತೀನ ದಿನಗಳಲ್ಲಿ ಕಾಡಿನ ಪ್ರಾಣಿಗಳು ನಾಡಿನೆಡೆಗೆ ಲಗ್ಗೆ ಇಡುವುದು ಹೆಚ್ಚಾಗಿಬಿಟ್ಟಿದೆ. ಇನ್ನು ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಸಪಾರಿಗೆ ತೆರಳುವವರಿಗೆ ಇತ್ತೀಚಿಗೆ ಎಲ್ಲೆಂದರಲ್ಲೇ ಹುಲಿ, ಚಿರತೆಗಳ ದರ್ಶನವಾಗುತ್ತಿದೆ. ಹಾಗೆಯೇ ಇಂದು ಅಚ್ಚರಿ ಮೂಡಿಸುವ ದೃಶ್ಯ ಪ್ರವಾಸಿಗರ ಕಣ್ಣೆದುರಲ್ಲೇ ಸಿಕ್ಕಿದ್ದು, ಸಪಾರಿಗೆ ತೆರಳಿದ್ದವರು ಫುಲ್ ಖುಷ್ ಆಗಿದ್ದಾರೆ.
ಏಪ್ರಿಲ್ 28ರ ಬೆಳಗ್ಗೆ ಹುಲಿಯೊಂದು ಜಿಂಕೆಯನ್ನು ಭೇಟೆಯಾಡಿ ಎಳೆದೊಯ್ಯುತ್ತಿರುವ ದೃಶ್ಯ ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿಸು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ಭಾರೀ ವೈರಲ್ ಆಗುತ್ತಿದೆ. ಇನ್ನು ಹುಲಿಯ ಬಾಯಿಗೆ ಸಿಕ್ಕ ಜಿಂಕೆಯ ನರಳಾಟವಂತೂ ನೋಡುಗರ ಕಣ್ಣಲ್ಲಿ ಕಣ್ಣೀರು ತರಿಸುವಂತಿದೆ.
ಮರಿ ಆನೆ ಸಾವು: ಹುಲಿ ದಾಳಿಯಿಂದ ಮರಿ ಆನೆ ಸಾವಿಗೀಡಾದ ಘಟನೆ ಬಂಡೀಪುರ ಅರಣ್ಯದಲ್ಲಿ ಇತ್ತೀಚೆಗಷ್ಟೇ ನಡೆದಿದಿದೆ. ಇನ್ನು ತಾಯಿ ಆನೆಯು ಸಾವನ್ನಪ್ಪಿದ ಮರಿ ಆನೆಯ ಶವ ಬಿಟ್ಟು ಕದಲದೇ ಕಾದು ಕುಳಿತ್ತಿದ್ದು, ಈ ದೃಶ್ಯ ಮನಕಲಕುವಂತಿದೆ.
ಸಾಮಾನ್ಯವಾಗಿ ತಾಯಂದಿರು ತಮ್ಮ ಮಕ್ಕಳು ಹೇಗೆ ಇರಲಿ ಅವರ ಮೇಲೆ ತಮ್ಮ ಜೀವವನ್ನೇ ಇಟ್ಟುಕೊಂಡಿರುತ್ತಾರೆ. ಹಾಗೆಯೇ ಕೆಲವೊಂದು ಪ್ರಾಣಿಗಳು ಕೂಡ ತಮ್ಮ ಮರಿಗಳ ರಕ್ಷಣೆ ಮಾಡುತ್ತವೆ. ಇನ್ನು ಆನೆಗಳ ವಿಚಾರಕ್ಕೆ ಬಂದರೆ, ತನ್ನ ಮರಿಗಳೇನಾದರೂ ಕಾಣಲಿಲ್ಲ ಅಂದರೆ ಅವುಗಳ ವರ್ತನೆಯಲ್ಲಿ ಗಾಬರಿಯ ಲಕ್ಷಣಗಳು ಕಂಡು ಬರುತ್ತವೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹುಲಿ ದಾಳಿಯಿಂದ ಮರಿ ಆನೆ ಸಾವನ್ನಪ್ಪಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ತಾಯಿ ಆನೆ ತನ್ನ ಮರಿಯ ಶವವನ್ನು ಬಿಟ್ಟು ಕದಲದೆ ಕಣ್ಣೀರಾಕುತ್ತಾ ಕುಳಿತಿರುವ ಮನಕಲಕುವ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನು ಇದನ್ನು ಕಂಡ ಸಾವಿರಾರು ಪ್ರಯಾಣಿಕರು, ಅಲ್ಲಿ ನೆರೆದಿದ್ದ ಜನರು ಕೂಡ ಕಣ್ಣಿರಿಟ್ಟ ಘಟನೆ ನಡೆದಿದೆ.
ಮತ್ತೊಂದೆಡೆ ರಸ್ತೆ ಪಕ್ಕದಲ್ಲೇ ಆನೆ ಮರಿ ಸಾವನ್ನಪ್ಪಿರುವ ಹಿನ್ನೆಲೆ ಬಂಡೀಪುರ ಅರಣ್ಯ ವ್ಯಾಪ್ತಿಯ ಮೈಸೂರು ಊಟಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ವಾಹನಗಳು ಕಿಲೋಮೀಟರ್ ಗಟ್ಟಲೇ ಸಾಲುಗಟ್ಟಿ ನಿಂತಿರುವ ಘಟನೆ ಜರುಗಿದೆ. ಇನ್ನು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಅರಣ್ಯಾಧಿಕಾರಿಗಳು ಹರಸಾಹಸಪಟ್ಟಿದ್ದಾರೆ.












Click it and Unblock the Notifications