ಚಾಮರಾಜನಗರ: ಜಿಲ್ಲೆಯ ಈ ಊರಿನಲ್ಲಿ ವರ್ಷದ ಮೊದಲ ಜಾತ್ರೆ ಸಂಪನ್ನ
ಚಾಮರಾಜನಗರ, ಜನವರಿ, 15: ವರ್ಷದ ಮೊದಲ ಜಾತ್ರಾ ಮಹೋತ್ಸವವಾದ ಗುಂಡ್ಲುಪೇಟೆ ತಾಲೂಕಿನ ಹುಲುಗನ ಮುರುಡಿ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ತೆರಕಣಾಂಬಿ ಸಮೀಪವಿರುವ ಹುಲುಗಿನ ಮುರುಡಿ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ಮಧ್ಯಾಹ್ನ 1:20ರ ಸುಮಾರಿಗೆ ಗರುಡ ಪಕ್ಷಿ ರಥ ಹಾಗೂ ಗೋಪುರದ ಮೇಲೆ ಹಾರಾಟ ನಡೆಸಿದ ನಂತರ ತಹಶೀಲ್ದಾರ್ ಟಿ.ರಮೇಶ್ ಬಾಬು ತೆಂಗಿನ ಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಗುಂಡ್ಲುಪೇಟೆ ತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ನಂಜನಗೂಡು, ಚಾಮರಾಜನಗರ, ಯಳಂದೂರು ತಾಲೂಕುಗಳಿಂದ ಸಾವಿರಾರು ಮಂದಿ ಭಕ್ತಾದಿಗಳು ರಥೋತ್ಸದಲ್ಲಿ ಭಾಗವಹಿಸಿ ವೆಂಕಟರಮಣ, ಗೋವಿಂದ, ಗೋವಿಂದ ಎಂದು ಜಯ ಘೋಷಣೆ ಕೂಗುತ್ತ ರಥವನ್ನು ದೇವಸ್ಥಾನದ ಒಂದು ಸುತ್ತು ಎಳೆದರು.
ಆಷಾಢ ಮಾಸ ಮುಗಿದ ಹಿನ್ನೆಲೆ ನೂರಾರು ಮಂದಿ ನವ ಜೋಡಿಗಳು ಹಾಗೂ ಭಕ್ತಾದಿಗಳು ತೇರಿಗೆ ಹಣ್ಣು-ಜವನ ಎಸೆದು ಭಕ್ತಿ ಸಮರ್ಪಿಸಿದರು. ಬೆಟ್ಟದ ತಪ್ಪಲು ಸೇರಿದಂತೆ ಬೆಟ್ಟದ ಮೇಲೆ ಹರಕೆ ಹೊತ್ತ ಭಕ್ತರು ಉಪಹಾರ ಹಾಗೂ ಪಾನಕ, ಮಜ್ಜಿಗೆಯನ್ನು ಬಂದ ಭಕ್ತ ಸಮೂಹಕ್ಕೆ ವಿತರಿಸಿದರು.
ಸಾರಿಗೆ ಬಸ್‍ನಲ್ಲಿ ಜನರು ಬೆಟ್ಟಕ್ಕೆ ಬಂದರೆ ಇನ್ನು ಕೆಲ ಹರಕೆ ಹೊತ್ತ ಸಾವಿರಾರು ಮಂದಿ ಭಕ್ತರು ನೆರೆಯ ಗ್ರಾಮ ಹಾಗೂ ತಪ್ಪಲಿನಿಂದ ಕಾಲು ದಾರಿಯಲ್ಲಿ ನಡೆದುಕೊಂಡು ಬೆಟ್ಟ ಏರಿ ಬಂದರು. ಖಾಸಗಿ ವಾಹನಗಳಿಗೆ ಬೆಟ್ಟದ ತಪ್ಪಲಲ್ಲೇ ನಿರ್ಬಂಧ ಹೇರಿದ್ದ ಕಾರಣ ಬೆಟ್ಟಕ್ಕೆ ಸಾರಿಗೆ ಬಸ್‍ನಲ್ಲಿಯೇ ಸಾವಿರಾರು ಭಕ್ತರು ತೆರಳಿದರು. ಜೊತೆಗೆ ಕಾರು ಮತ್ತು ಬೈಕ್‍ಗಳಿಗೂ ಸಹ ತಪ್ಪಲಿನಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಅಧಿಕ ಮಹಿಳೆಯರು ಭಾಗಿ: ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಸಾರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಇರುವ ಕಾರಣ ತಾಲೂಕಿನ ಜಿಲ್ಲೆ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಮಂದಿ ಆಗಮಿಸಿ ರಥೋತ್ಸವದಲ್ಲಿ ಭಾಗವಹಿಸಿ, ಪೂಜೆ ಸಲ್ಲಿಕೆ ಮಾಡಿದರು.












Click it and Unblock the Notifications