ಸಿದ್ದರಾಮೋತ್ಸವ ನಡೆಸಿದರೂ ರಾಜಕೀಯ ಅಲೆಮಾರಿಯಾಗಿರುವ ಸಿದ್ದರಾಮಯ್ಯ: ಶ್ರೀನಿವಾಸ್ ಪ್ರಸಾದ್ ವ್ಯಂಗ್ಯ
ಚಾಮರಾಜನಗರ, ಆಗಸ್ಟ್ 26: ಎಂಟು ಲಕ್ಷ ಮಂದಿಯನ್ನು ಸೇರಿಸಿ ಸಿದ್ದರಾಮೋತ್ಸವ ಮಾಡಿದ ಮೇಲೂ ಕ್ಷೇತ್ರ ಸಿಗದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಅಲೆಮಾರಿಯಾಗಿದ್ದಾರೆಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಲೇವಡಿ ಮಾಡಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, "ನನಗೆ ನಗು ಬರುತ್ತದೆ. ದಾವಣಗೆರೆಯಲ್ಲಿ 6-8 ಲಕ್ಷ ಜನ ಸೇರಿಸಿ ಮೈಸೂರು ಪಾಕ್ ತಿಂದ್ರಿ, ಜನರು ಟಾನಿಕ್ ಕೊಟ್ಟಿದ್ದಾರೆ ಎಂದರು. ಆದರೆ ಚಾಮುಂಡೇಶ್ವರಿಯಲ್ಲಿ ಚುನಾವಣೆಗೆ ನಿಲ್ಲಲು ಧೈರ್ಯ ಬಂದಿದ್ಯಾ ಸಿದ್ದರಾಮಯ್ಯರಿಗೆ..? ಧೈರ್ಯ ಇದ್ದರೆ ತಾನು ಚಾಮುಂಡೇಶ್ವರಿಯಲ್ಲಿ ನಿಲ್ಲುತ್ತೇನೆಂದು ಹೇಳಲಿ ಎಂದ ಅವರು ಸಿದ್ದರಾಮತ್ತ ಈಗಲೂ ರಾಜಕೀಯ ಅಲೆಮಾರಿಯಾಗಿ ಕ್ಷೇತ್ರ ಹುಡುಕಾಡುತ್ತಿದ್ದಾರೆ," ಎಂದು ವ್ಯಂಗ್ಯ ಮಾಡಿದರು.
ಕೆಲಸ ಮಾಡಿ ಇಲ್ಲಾ ನಡೀರಿ ಎಂಬ ಕಾಂಗ್ರೆಸ್ ಘೋಷಣೆಗೆ ಪ್ರತಿಕ್ರಿಯಿಸಿ, ಯಾರು ಆಡಳಿತ ನಡೆಸಬೇಕೆಂದು ತೀರ್ಮಾನ ಮಾಡಬೇಕಾದವರು ಜನರು, ಅವರ ಬಂಡವಾಳ ಅರಿತು ಮಾತನಾಡಲಿ. 28 ಲೋಕಸಭಾ ಕ್ಷೇತ್ರದಲ್ಲಿ ಯಾಕೆ ಅವರು ಒಂದು ಸ್ಥಾನ ಗೆದ್ದರು, ಆಡಳಿತದಲ್ಲಿದ್ದವರನ್ನು ಯಾಕೆ ವಿಪಕ್ಷದಲ್ಲಿ ಕೂರಿಸಿದರು, ರಾಜ್ಯದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ಬಂದಿದೆ, ಅವಲೋಕಿಸಿ ಮಾತನಾಡಿ ಎಂದು ಕೈ ಪಡೆ ವಿರುದ್ಧ ಕಿಡಿಕಾರಿದರು.

ಶೇ 40ರಷ್ಟು ಕಮಿಷನ್ ರಾಜಕೀಯ ಪ್ರೇರಿತ
ಸರ್ಕಾರದ ಇಲಾಖೆಗಳಲ್ಲಿ ಯಾವುದೇ ಕೆಲಸ ಆಗಲು ಶೇ 40ರಷ್ಟು ಕಮಿಷನ್ ನೀಡಬೇಕು ಎಂಬ ಆರೋಪ ರಾಜಕೀಯ ಪ್ರೇರಿತ . ಸರಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆಯೇ ವಿನಃ, ಅದಕ್ಕೆ ಯಾವುದೇ ದಾಖಲೆಗಳನ್ನು ನೀಡುತ್ತಿಲ್ಲ. ಈಗಾಗಲೇ, ಈ ವಿಚಾರ ಸಚಿವ ಸಂಪುಟ ಸಭೆಯಲ್ಲೂ ಚರ್ಚೆ ಮಾಡಲಾಗಿದೆ. ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ, ಅನ್ನಭಾಗ್ಯ ಯೋಜನೆ ಕಡಿತಗೊಳ್ಳಲಿದೆ. ಸರ್ಕಾರದ ಬಳಿ ಹಣವಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಉತ್ತರಿಸಿ, ಸಿದ್ದರಾಮಯ್ಯ ಏನು ಜ್ಯೋತಿಷಿನಾ..?, ಮಾಜಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಯೋಚಿಸಿ ಮಾತನಾಡಲಿ ಎಂದರು.
ಸಿದ್ದರಾಮಯ್ಯ ವಿರುದ್ಧ ಸಿಎಂ ಕಿಡಿ
ಬಿಜೆಪಿ ಸರಕಾರ 40 % ಕಮಿಷನ್ ತೆಗೆದುಕೊಳ್ಳದಿದ್ದರೆ ನ್ಯಾಯಾಂಗ ತನಿಖೆ ನಡೆಸಲು ಸಮಸ್ಯೆ ಏನು ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಗುರುವಾರ ಹಾವೇರಿಯಲ್ಲಿ ಮಾತನಾಡಿದ ಬೊಮ್ಮಾಯಿ "ಸಿದ್ದರಾಮಯ್ಯ ಸತ್ಯಹರಿಶ್ಚಂದ್ರರೇ ಈ ಹಿಂದೆ ಭ್ರಷ್ಟಾಚಾರ ಆಗಿತ್ತೂ ಎಂದು ಅವರು ಹೇಳುತ್ತಾರೆ. ಹಾಗಾದರೆ ಇಷ್ಟು ದಿನ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡಿದ್ದರಾ? ಎಂದು ಪ್ರಶ್ನಿಸಿದ ಅವರು, ಕೆಂಪಣ್ಣ ಒಂದು ವರ್ಷದಿಂದ ಆರೋಪ ಮಾಡುತ್ತಲೇ ಬಂದಿದ್ದರು. ನಿಖರವಾಗಿ ಯಾವೊಬ್ಬ ಸಚಿವರ ಮೇಲೂ ಆರೋಪಿಸಿಲ್ಲ, ಇದೀಗ ಮುನಿರತ್ನರ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರ ಆರೋಪಕ್ಕೆ ಸಾಕ್ಷ್ಯಾಧಾರಗಳಿಲ್ಲ, ಇದೆಲ್ಲವೂ ರಾಜಕೀಯ ಪ್ರೇರಿತ ಎಂದು ಆರೋಪಿಸಿದರು.












Click it and Unblock the Notifications