Male Mahadeshwara Hill: ಮಲೆ ಮಾದಪ್ಪನ ಬೆಟ್ಟದಲ್ಲಿ ಶ್ರಾವಣ ಸಂಭ್ರಮ: 108 ಕುಂಭೋತ್ಸವ
ಚಾಮರಾಜನಗರ, ಆಗಸ್ಟ್, 05: ಇಂದು (ಆಗಸ್ಟ್ 05) ಶ್ರಾವಣ ಮೊದಲ ಸೋಮವಾರ ಹಿನ್ನೆಲೆ ರಾಜ್ಯದ ಬಹುತೇಕ ಜಿಲ್ಲೆಗಳ ದೇವಸ್ಥಾನಗಳಲ್ಲಿ ಭರ್ಜರಿ ಪೂಜೆ ನಡೆಯುತ್ತಿದೆ. ಹಾಗೆಯೇ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಬೇಡಗಂಪಣ ಅರ್ಚಕರು ಶ್ರಾವಣ ಮಾಸದ 108 ಕುಂಭೋತ್ಸವ ಸೇವೆ ಸೋಮವಾರ (ಆಗಸ್ಟ್ 05) ಭಕ್ತರು ಶ್ರದ್ಧಾಭಕ್ತಿಯಿಂದ ನೆರೆವೇರಿಸಿದರು.
ಶ್ರೀ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠಾಧ್ಯಕ್ಷರಾದ ಪಟ್ಟದ ಶ್ರೀ ಶಾಂತ ಮಲ್ಲಿಕಾರ್ಜುನಸ್ವಾಮಿಗಳವರ ನೇತೃತ್ವದಲ್ಲಿ ಬೇಡಗಂಪಣ ಅರ್ಚಕರು ಮಜ್ಜನಬಾವಿಯಿಂದ 108 ಕುಂಭಗಳನ್ನು ಹೊತ್ತು ತಂದು ಹೋಮ ನೆರವೇರಿಸಿ ಸ್ವಾಮಿಗೆ ಅಭಿಷೇಕ ನೆರವೇರಿಸಿದರು.

ಜೊತೆಗೆ, 108 ಎಳನೀರುಗಳಿಂದಲೂ ಅಭಿಷೇಕ ಮಾಡುವ ಮೂಲಕ ಶ್ರಾವಣ ಮಾಸದ ವಿಶೇಷ ಪೂಜೆ ನೆರವೇರಿತು. ದೇವಾಲಯದಲ್ಲಿ ಮೊದಲಪೂಜೆ ಆರಂಭವಾಗಿದ್ದು, ಇದರ ಜೊತೆಗೆ ದೇವಾಲಯದ ರಾಜಗೋಪುರದ ಮುಂದೆ ಮಜ್ಜನ ಬಾವಿಗೆ ತೆರಳಿ ಗಂಗೆ ಪೂಜೆ ಸೇರಿ, ವಿಶೇಷ ಪೂಜೆ ಕೈಗೊಂಡರು. ಬಳಿಕ ವಾದ್ಯಮೇಳ, ಛತ್ರಿ, ಚಾಮರದೊಂದಿದೆ 108 ಅರ್ಚಕರು ಕುಂಭ ಹೊತ್ತು ದೇವಾಲಯದ ಹೊರ ಹಾಗೂ ಒಳ ಆವರಣದಲ್ಲಿ ಮೆರವಣಿಗೆ ಮಾಡಿ ಗರ್ಭಗುಡಿ ಸುತ್ತ ಪ್ರದಕ್ಷಿಣೆ ಹಾಕಿದರು.
ಪೂಜೆ ನಡೆದ ನಂತರ ಕುಂಬಾಭಿಷೇಕ ನೆರವೇರಿತು. ಪ್ರತಿದಿನ ದೇವರಿಗೆ 12 ಕುಂಬಾಭಿಷೇಕ, ಲಕ್ಷಬಿಲ್ವಾರ್ಚನೆ ಪೂಜೆ ಸಲ್ಲಿಕೆಯಾಗಲಿದೆ. ಶ್ರಾವಣ ಮಾಸದ ಕೊನೆಯ ದಿನ ಮತ್ತೆ 108 ಕುಂಬಾಭಿಷೇಕ ಜರುಗಲಿದೆ. ದೇವಾಲಯದಲ್ಲಿ ತ್ರಿಕಾಲ ಪೂಜೆ ಪ್ರಾರಂಭವಾಗಿದ್ದು, ಬೆಳಿಗ್ಗೆ 4ರಿಂದ ಬೆಳಗ್ಗೆ 6ರವರೆಗೆ ಮೊದಲ ಪೂಜೆ, ಅಭಿಷೇಕ, ಬಿಲ್ವಾರ್ಚನೆ, ಆರತಿ, 10:30ಕ್ಕೆ ಎರಡನೇ ಪೂಜೆ, ಸಂಜೆ 6:30ರಿಂದ ರಾತ್ರಿ 8:30ರವರೆಗೆ ಮೂರನೇ ಪೂಜೆ ಜರುಗುತ್ತಿದೆ.
ಶ್ರೀ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮೊದಲ ದಿನವಾದ ಬೇಡಗಂಪಣ ಅರ್ಚಕರಿಂದ ಶ್ರೀ ಸ್ವಾಮಿಗೆ 108 ಕುಂಭಾಭಿಷೇಕ ಪ್ರಯುಕ್ತ ಗಂಗಾಪೂಜೆ, ಗಣಪತಿಪೂಜೆ ಪುಣ್ಯಾಹ, ಪಂಚ ಕಳಶ, ನವಗ್ರಹ ಸಮೇತ ಮಹಾಮೃತ್ಯುಂಜಯ, ಅಷ್ಟದಿಕ್ಷಾಲಕರು, ಸಪ್ತ ಸಭಾ ದೇವತೆಗಳು ಕಳಸ ಉಮಾಮಹೇಶ್ವರ ಕಳಸ ಆವಾಹನೆ, ಹೋಮಹವನ ಪೂಜೆಯನ್ನು ಮಾಡಲಾಯಿತು.
ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ರಘು ಅವರ ನೇತೃತ್ವದಲ್ಲಿ, ಬೇಡಗಂಪಣ ಅರ್ಚಕರ ವತಿಯಿಂದ ಶ್ರೀ ಮಲೆ ಮಹದೇಶ್ವರ ಸ್ವಾಮಿ ಸನ್ನಿಧಾನದ ಆಗಮಿಕರಾದ ಕರವೀರಸ್ವಾಮಿ ಮತ್ತು ಗುಂಡೆಗಾಲದ ಮಲ್ಲಿಕಾರ್ಜುನ ಸ್ವಾಮೀಜಿಯವರ ಸಾನಿತ್ಯದಲ್ಲಿ 108 ಕುಂಭಗಳ ಉತ್ಸವ ಮತ್ತು ಶ್ರೀ ಸ್ವಾಮಿಗೆ ಅಭಿಷೇಕಗಳೊಂದಿಗೆ ಶ್ರಾವಣ ಮಾಸದ ಪೂಜೆ ವಿಜೃಂಭಣೆಯಿಂದ ನಡೆಯಿತು.












Click it and Unblock the Notifications