ಚಾಮರಾಜನಗರ: ಚೊಂಬುಗಳ ಪಾರ್ಟಿ ಕಾಂಗ್ರೆಸ್: ಹೇಳಿದ್ಯಾರು?
ಚಾಮರಾಜನಗರ, ಏಪ್ರಿಲ್, 19: ಕರ್ನಾಟಕಕ್ಕೆ ಮೋದಿ ಕೊಟ್ಟ ಕೊಡುಗೆ ಚೊಂಬು ಎಂಬ ಕಾಂಗ್ರೆಸ್ ಜಾಹಿರಾತಿಗೆ ರಾಜ್ಯದ ಬಿಜೆಪಿ ನಾಯಕರು ಆಕ್ರೊಶ ಹೊರಹಾಕಿದ್ದಾರೆ. ಇದೀಗ ಕಾಂಗ್ರೆಸ್ ಸರ್ಕಾರವೇ ಚೊಂಬುಗಳ ಸರ್ಕಾರ ಎಂದು ಎಸ್. ಸುರೇಶ್ ಕುಮಾರ್ ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಚೊಂಬಿನ ಜಾಹಿರಾತು ಸಂಬಂಧ ಚಾಮರಾಜನಗರದಲ್ಲಿ ಮಾಧ್ಯಮವರೊಂದಿಗೆ ಅವರು ಮಾತನಾಡಿ, ಸಿಎಂ ಗೆ ಚೊಂಬು ಕೊಡಲು ಡಿಸಿಎಂ ಕಾಯುತ್ತಿದ್ದಾರೆ. ಡಿಸಿಎಂಗೆ ಚೊಂಬು ಕೊಡಲು ಸಿಎಂ ಕಾಯುತ್ತಿದ್ದಾರೆ. ಇವರಿಬ್ಬರಿಗೂ ಚೊಂಬು ಕೊಡಲು ಜನ ಕಾಯುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು.

ಚೊಂಬುಗಳ ಸರ್ಕಾರ ಎಂದರೆ ಅದು ಕಾಂಗ್ರೆಸ್, ಕಳೆದ 10 ತಿಂಗಳುಗಳಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಹಣವನ್ನು ಬಿಡುಗಡೆ ಮಾಡದಿರುವುದು ನಾಗರಿಕರಿಗೆ ನೀವು ಕೊಟ್ಟಿರುವ ಚೊಂಬು ಅಲ್ಲವೇ? ನಿರುದ್ಯೋಗಿ ಯುವಕರಿಗೆ 2,000 ರೂಪಾಯಿ ಕೊಡುತ್ತೇವೆಂದು ಭರವಸೆ ನೀಡಿ ಮತ ಪಡೆದು ಕಳೆದ 10 ತಿಂಗಳಲ್ಲಿ ಒಬ್ಬರಿಗೂ ನಿರುದ್ಯೋಗ ಭತ್ಯೆ ನೀಡದೆ ಚೊಂಬು ನೀಡಿರುವುದು ನೀವಲ್ಲವೇ? ಎಂದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದರು.
ಹಿಂದಿನ ಬಿಜೆಪಿ ಸರ್ಕಾರ ರಾಜ್ಯದ ಪ್ರತಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರ್ಷಕ್ಕೆ 4,000 ರೂಪಾಯಿ ಪ್ರಧಾನಮಂತ್ರಿ ಕಿಸಾನ್ ಸನ್ಮಾನ ಯೋಜನೆಯಡಿ ನೀಡಿ ತನ್ನ ಕಾಳಜಿ ತೋರಿತ್ತು. ಏನೂ ಕಾರಣ ನೀಡದೆ ಅದನ್ನು ನಿಲ್ಲಿಸಿ ಈ ಅನ್ನದಾತರಿಗೆ ಚೊಂಬು ನೀಡಿರುವುದು ನೀವೇ ಅಲ್ಲವೇ? ಹೀಗೆ ದೇಶದ ಚೊಂಬುಗಳ ಸರದಾರ ನೀವೇ ಆಗಿರುವಾಗ ಬೇರೆಯವರಿಗೆ ಯಾಕೆ ಆ ಪ್ರಶಸ್ತಿ? ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದರು.
ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಅವರು, ಈ ಕೊಲೆ ನಿಜಕ್ಕೂ ದುರಂತದ ಘಟನೆ. ನಾನು ಸಿಸಿಟಿವಿಯನ್ನು ನೋಡಿದ್ದೇನೆ, ಚಾಕು ಇರಿದಾಗ ಈ ಹುಡುಗಿಯ ನೋವು ಹೇಗಿರಬಹುದು? ಅದನ್ನು ನೋಡಿದ ತಂದೆ ಮತ್ತು ತಾಯಿಗೆ ಹೇಗೆ ಸಂಕಟ ಅಗಿರಬಹುದು. ಈ ಬಗ್ಗೆ ಯಾವ ದಾಕ್ಷಿಣ್ಯ ಇಟ್ಟುಕೊಳ್ಳದೇ ಮುಕ್ತವಾಗಿ ವಿಚಾರಣೆ ನಡೆಸಬೇಕು, ಒಂದೊಂದು ಜೀವವೂ ಕೂಡ ಅಮೂಲ್ಯ. ಈ ರೀತಿಯ ದುರುಳರಿಗೆ ಕಠಿಣ ಶಿಕ್ಷೆಯಾಗಬೇಕು, ಸರ್ಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಅಭ್ಯರ್ಥಿ ಬಾಲರಾಜ್‌ಗೆ ಇಲ್ಲಿ ಒಳ್ಳೆ ಬೆಂಬಲ ಇದೆ. ಬಾಲರಾಜ್ ಓರ್ವ ಸರಳ ಮತ್ತು ಸಜ್ಜನ ರಾಜಕಾರಣಿ. ಅತೀ ಹೆಚ್ಚಿನ ಮತಗಳ ಅಂತರದಲ್ಲಿ ಬಿಜೆಪಿ ಗೆಲ್ಲುವುದು ಖಚಿತ. ಮೋದಿ ಆಡಳಿತವನ್ನು ಜನ ಬಯಸಿದ್ದಾರೆ. ಹಾಗಾಗಿ ಈ ಬಾರಿಯು ಬಾಲರಾಜ್ ಗೆಲುವು ದಾಖಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications