ಬಂಡೀಪುರದಲ್ಲಿ ಹುಲಿ ದಾಳಿಯಿಂದ ಪಾರಾದ ಆರ್.ಎಫ್.ಒ
ಚಾಮರಾಜನಗರ, ಜುಲೈ 1: ಹುಲಿ ದಾಳಿ ನಡೆಸಿದ ಪರಿಣಾಮ ಅರಣ್ಯಾಧಿಕಾರಿಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕಾಡಂಚಿನಲ್ಲಿ ನಡೆದಿದೆ.
ಆರ್.ಎಫ್.ಓ ರಾಘವೇಂದ್ರ ಅಗಸೆ ಎಂಬುವರೇ ಹುಲಿ ದಾಳಿಯಿಂದ ಗಾಯಗೊಂಡವರು. ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕಾಡಂಚಿನ ರೈತರ ಜಮೀನಿನಲ್ಲಿ ಹುಲಿ ಕಾಣಿಸಿಕೊಂಡಿದೆ ಎಂಬ ಮಾಹಿತಿ ಮೇರೆಗೆ ಸ್ಥಳ ಪರಿಶೀಲನೆಗೆ ಇವರು ತೆರಳಿದ್ದ ವೇಳೆ ಘಟನೆ ನಡೆದಿದೆ. ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಂಡೀಪುರ ಹುಲಿ ಯೋಜನೆಯ ಗೋಪಾಲಸ್ವಾಮಿ ಬೆಟ್ಟ ವಲಯದ ಕಾಡಂಚಿನ ಕಳ್ಳೀಪುರ ಗ್ರಾಮದ ಶ್ರೀನಿವಾಸ್ ಎಂಬುವರ ಸೂರ್ಯಕಾಂತಿ ಜಮೀನಿನಲ್ಲಿ ಹುಲಿಯೊಂದು ಕಾಣಿಸಿಕೊಂಡ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಆರ್.ಎಫ್.ಓ ರಾಘವೇಂದ್ರ ಅವರು ಸಿಬ್ಬಂದಿಯೊಡನೆ ಸ್ಥಳಕ್ಕೆ ತೆರಳಿ ಹುಲಿಯ ಹೆಜ್ಜೆ ಗುರುತುಗಳನ್ನು ಪರಿಶೀಲಿಸುತ್ತಿದ್ದರು. ಈ ವೇಳೆ ಹಳ್ಳದಲ್ಲಿ ಅಡಗಿದ್ದ ಹುಲಿ ಏಕಾಏಕಿ ಅವರ ಮೇಲೆ ದಾಳಿ ನಡೆಸಿದೆ. ತಕ್ಷಣ ಸ್ಥಳದಲ್ಲಿದ್ದ ಅರಣ್ಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಜೋರಾಗಿ ಕಿರುಚಿಕೊಂಡಿದ್ದರಿಂದ ಹುಲಿ ಹೆದರಿ ಕಾಡಿನೊಳಗೆ ನುಗ್ಗಿ ಪರಾರಿಯಾಗಿದೆ.

ಹುಲಿ ದಾಳಿ ನಡೆಸಿದ ಪರಿಣಾಮ ರಾಘವೇಂದ್ರ ಅವರ ಕೈಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ತಕ್ಷಣ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಇದೀಗ ಹುಲಿ ಇರುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಹುಲಿ ಸೆರೆಗೆ ಬೋನು ಅಳವಡಿಸುವುದಾಗಿ ಬಂಡೀಪುರ ಉಪವಿಭಾಗದ ಎಸಿಎಫ್ ಎಂ.ಎಸ್.ರವಿಕುಮಾರ್ ಹೇಳಿದ್ದಾರೆ.
ಈ ಘಟನೆಯಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ರೈತರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಅರಣ್ಯ ಇಲಾಖೆ ಹುಲಿಯನ್ನು ಸೆರೆ ಹಿಡಿಯುವವರೆಗೆ ಈ ವ್ಯಾಪ್ತಿಯ ಜನರಿಗೆ ನೆಮ್ಮದಿಯಿಲ್ಲದಂತಾಗಿದೆ.












Click it and Unblock the Notifications