ಅತ್ಯಾಚಾರ ಪ್ರಕರಣ: ಇಬ್ಬರು ಆರೋಪಿಗಳಿಗೆ 20 ವರ್ಷ ಕಠಿಣ ಶಿಕ್ಷೆ, 55,000 ರೂಪಾಯಿ ದಂಡ
ಚಾಮರಾಜನಗರ, ಏಪ್ರಿಲ್, 18: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಹಿನ್ನೆಲೆ ಚಾಮರಾಜನಗರ ಅಧಿಕ ಜಿಲ್ಲಾ ಮತ್ತು ಸತ್ರ ಎಫ್ಟಿಎಸ್ಸಿ ವಿಶೇಷ ಪೋಕ್ಸೋ ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಗುರುವಾರ (ಏಪ್ರಿಲ್ 18) ಆದೇಶಿಸಿದೆ.
ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ಮಹೇಶ್ ಪ್ರಸಾದ್, ವೆಂಕಟಯ್ಯನಛತ್ರ ಗ್ರಾಮದ ಸಿದ್ದಮಲ್ಲು ಶಿಕ್ಷೆಗೊಳಗಾದ ಅಪರಾಧಿಗಳು. ಇವರಿಬ್ಬರು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಲೈಂಗಿಕ ದೌರ್ಜನ್ಯ ನೀಡಿದ್ದು, ಸಾಕ್ಷ್ಯಾಧಾರಗಳಿಂದ ಸಾಬೀತಾದ ಹಿನ್ನೆಲೆ ಚಾಮರಾಜನಗರ ಅಧಿಕ ಜಿಲ್ಲಾ ಮತ್ತು ಸತ್ರ ಎಫ್ಟಿಎಸ್ಸಿ ವಿಶೇಷ ಪೋಕ್ಸೋ ನ್ಯಾಯಾಧೀಶರಾದ ಎನ್.ಆರ್.ಲೋಕಪ್ಪ 20 ವರ್ಷ ಕಠಿಣ ಶಿಕ್ಷೆ, 55 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ಏನಿದು ಪ್ರಕರಣ?: ವರಸೆಯಲ್ಲಿ ಸ್ವಂತ ತಂಗಿ ಎಂದು ಗೊತ್ತಿದ್ದರೂ ಸಿದ್ದಮಲ್ಲು ಅಪ್ರಾಪ್ತೆಯನ್ನು ಅಪಹರಿಸಿ ಮದುವೆ ಮಾಡಿಕೊಳ್ಳುವೆ ಎಂದು ನಂಬಿಸಿ ಅತ್ಯಾಚಾರ ಎಸಗಿದ್ದಾನೆ. ಇದಕ್ಕೂ ಮುನ್ನ, ಇವರಿಬ್ಬರ ಪ್ರೀತಿ ವಿಚಾರ ತಿಳಿದಿದ್ದ ಮಹೇಶ್ ಪ್ರಸಾದ್ ಬಾಲಕಿಗೆ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಎಸಗಿದ್ದಾನೆ.
ಸಿದ್ದಮಲ್ಲು ಬಂಧಿಸಿದ ಬಳಿಕ, ಆಪ್ತ ಸಮಾಲೋಚನೆಯಲ್ಲಿ ನೊಂದ ಬಾಲಕಿಯು ಬ್ಲಾಕ್ ಮೇಲ್ ವಿಚಾರವನ್ನು ತಿಳಿಸಿದ ಬಳಿಕ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ. ಸದ್ಯ, ಇಬ್ಬರು ಅಪರಾಧಿಗಳಿಗೂ 20 ವರ್ಷ ಕಠಿಣ ಶಿಕ್ಷೆ ವಿಧಿಸಿ, ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ 4 ಲಕ್ಷ ರೂಪಾಯಿ ಪರಿಹಾರ ಕೊಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಾದ ಮಂಡಿಸಿದ್ದರು.
ನೀರು ಪಾಲಾದ ತಾಯಿ ಹಾಗೂ ಇಬ್ಬರು ಮಕ್ಕಳು: ಬಟ್ಟೆ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ಮೂವರು ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ತಾಲೂಕಿನ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುದೂರು ಗ್ರಾಮದ ಮೀನಾ (33), ಪವಿತ್ರ (13), ಕೀರ್ತಿ (11) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಘಟನೆ ವಿವರ: ಪುದೂರು ನಿವಾಸಿಗಳಾದ ಮೀನಾ ಪುತ್ರಿಯರಾದ ಪವಿತ್ರ, ಕೀರ್ತಿ, ಮಗ ಸುರೇಂದ್ರ ಶುಕ್ರವಾರ ಬೆಳಗ್ಗೆ ಗೋಪಿನಾಥಂ ಜಲಾಶಯಕ್ಕೆ ಬಟ್ಟೆ ತೊಳೆಯಲು ಹೋಗಿದ್ದಾರೆ. ಬಟ್ಟೆ ತೊಳೆದ ಬಳಿಕ ಬಟ್ಟೆಯನ್ನು ಹಿಂಡಲು ಹೋಗಿ ತಾಯಿ ಮೀನಾ ಆಕಸ್ಮಿಕವಾಗಿ ಕಾಲು ಜಾರಿಬಿದಿದ್ದಾರೆ. ತಕ್ಷಣ ಇಬ್ಬರೂ ಹೆಣ್ಣು ಮಕ್ಕಳಾದ ಕೀರ್ತಿ ಹಾಗೂ ಪವಿತ್ರ ತಾಯಿಯನ್ನು ರಕ್ಷಣೆ ಮಾಡಲು ಹೋಗಿ ಇವರು ಸಹ ನೀರಿನಲ್ಲಿ ಮುಳುಗಿದ್ದಾರೆ.
ಸ್ಥಳದಲ್ಲಿಯೇ ಇದ್ದ ಮಗ ಸುರೇಂದ್ರ ತಂದೆಯವರಿಗೆ ವಿಷಯ ತಿಳಿಸಿ ಕರೆದುಕೊಂಡು ಬರುವಷ್ಟರಲ್ಲಿ ಮೂವರು ನೀರು ಪಾಲಾಗಿದ್ದರು. ನಂತರ ಗ್ರಾಮಸ್ಥರ ಸಹಾಯದಿಂದ ಮೂವರನ್ನು ನೀರಿನಿಂದ ಹೊರ ತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಕಳುಹಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications