ಬಿಜೆಪಿಗರಿಗೆ 40ರ ಮೇಲೆ ಬಲು ಪ್ರೀತಿ, ಹಾಗಾಗಿ 40 ಸ್ಥಾನಗಳನ್ನು ಕೊಡಿ- ರಾಹುಲ್ ಗಾಂಧಿ ವ್ಯಂಗ್ಯ
ಚಾಮರಾಜನಗರ, ಮೇ 2: ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಸೋಮವಾರ ಚಾಮರಾಜನಗರದಲ್ಲಿ ಜೋರು ಮಳೆ ನಡುವೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆಗೈದರು.
ಚಾಮರಾಜನಗರದಲ್ಲಿ ಮಾತನಾಡಿದ ಅವರು, ಬಿಜೆಪಿಗರಿಗೆ 40 ಎಂಬ ಸಂಖ್ಯೆ ಮೇಲೆ ಬಲು ಪ್ರೀತಿ, 40 ಅಂದರೆ ಇಷ್ಟ ಆದ್ದರಿಂದ 40 ಸ್ಥಾನಗಳನ್ನು ಮಾತ್ರ ಈ ಚುನಾವಣೆಯಲ್ಲಿ ಅವರಿಗೆ ಕೊಡಿ, ನಮಗೆ 150 ಸ್ಥಾನ ಕೊಡಿ. ಅಲ್ಪ ಬಹುಮತದ ಸರ್ಕಾರ ಬಂದರೆ 40% ಹಣದಿಂದ ಕಳ್ಳತನದಿಂದ ಅಧಿಕಾರ ಹಿಡಿಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಈ ಚುನಾವಣೆ ನರೇಂದ್ರ ಮೋದಿ ಅವರ ಮೇಲಿನ ಚುನಾವಣೆಯಲ್ಲ, ಕರ್ನಾಟಕದ ಯುವ ಸಮುದಾಯ, ಮಕ್ಕಳು,ಮಹಿಳೆಯರು, ರೈತರ ಚುನಾವಣೆ, 40% ಬಗ್ಗೆ ಇದುವರೆಗೆ ಪಿಎಂ ಚಕಾರ ಎತ್ತಿಲ್ಲ, ಯಾವುದೇ ತನಿಖೆಯೂ ಆಗಿಲ್ಲ, ಕರ್ನಾಕಟದ ಜನರಿಗೆ ಗೊತ್ತಾಗಲಿ 40% ಬಗ್ಗೆಯೂ ಮಾತನಾಡಿ ಎಂದು ಪಿಎಂ ವಿರುದ್ಧ ಕಿಡಿಕಾರಿದರು.
ಮೋದಿ ತಮ್ಮ ಬಗ್ಗೆ ಮಾತನಾಡುವುದು ಬಿಡಲಿ
ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದಾಗಲೆಲ್ಲಾ ಅವರ ಬಗ್ಗೆಯೇ ಮಾತನಾಡುತ್ತಾರೆ. ಅವರ ಬಗ್ಗೆ ಮಾತನಾಡುವುದನ್ನು ಬಿಟ್ಟು ಜನರ ಬಗ್ಗೆ ಮಾತಾಡುವುದನ್ನು ಆರಂಭಿಸಿ, ಚುನಾವಣಾ ಅರ್ಧ ಪ್ರಚಾರ ಮುಗಿಯುತ್ತಿದೆ, ಈಗಲಾದರೂ ಕರ್ನಾಟಕದ ಬಗ್ಗೆ ಮಾತನಾಡಿ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ನಮ್ಮ ಪಕ್ಷದ ಎಲ್ಲಾ ನಾಯಕರನ್ನು ಗೌರವಿಸುತ್ತೇನೆ, ಆದರಿಸುತ್ತೇನೆ. ಮೋದಿ ಅವರೇ ನೀವೆಕೆ ಯಾರಾ ಹೆಸರನ್ನು ತೆಗೆದುಕೊಳ್ಳಲ್ಲ, ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಹೆಸರನ್ನೂ ತೆಗೆದುಕೊಳ್ಳಲ್ಲ, ಏಕೆ..? 40% ಪರಿಣಾಮ, ನಿಮ್ಮ ನಾಯಕರು ಎಷ್ಟು ಭ್ರಷ್ಟರು ಅದಕ್ಕಾ..? ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ, ಕಾಂಗ್ರೆಸ್ ಇಷ್ಟು ಬಾರಿ ನನ್ನನ್ನು ಆಕ್ರಮಣ ಮಾಡಿತೆಂದು ಮೋದಿ ಅವರು ಪಟ್ಟಿ ಮಾಡಿಕೊಂಡಿದ್ದಾರೆ, ನಿಮ್ಮ ಬಗ್ಗೆ ಮಾತಾಡುವುದನ್ನು ಕಡಿಮೆ ಮಾಡಿ, ಜನರ ಬಗ್ಗೆ ಮಾತನಾಡಿ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು.

ಕಾಂಗ್ರೆಸ್ ಗ್ಯಾರಂಟಿಗಳನ್ನು ನಮ್ಮ ಸರ್ಕಾರದ ಮೊದಲ ಸಚಿವ ಸಂಪುಟದಲ್ಲೇ ಮಂಜೂರು ಮಾಡುತ್ತೇವೆ. ನೀವು ಏನು ಮಾಡುತ್ತೀರಾ ಈಗಲಾದರೂ ಹೇಳಿ..? ನಮ್ಮ ಸರ್ಕಾರ ಬಂದ ಬಳಿಕ ಬಿಜೆಪಿ ಲೂಟಿ ಮಾಡಿರುವ ಹಣವನ್ನು ಜನರಿಗೆ ಕೊಡುತ್ತೇವೆ. ಈಗಿರುವ ಬಿಜೆಪಿ ಸರ್ಕಾರ ಪ್ರಜಾತಂತ್ರದ ಸರ್ಕಾರವಲ್ಲ, ಕಳ್ಳತನದಿಂದ ಹಿಡಿದಿರುವ ಸರ್ಕಾರ, ಖರೀದಿ ಮಾಡಿರುವ ಸರ್ಕಾರ, 40% ಲೂಟಿ ಮಾಡಿರುವ ಸರ್ಕಾರ, ನಮಗೆ ಜನರ ಭವಿಷ್ಯವನ್ನು ಉತ್ತಮಗೊಳಿಸುವ ಆಸೆ ಇದೆ ಎಂದರು.
ಚಾಮರಾಜನಗರದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ 2 ಗಂಟೆ ತಡವಾಗಿ ಆರಂಭಗೊಂಡು 20 ನಿಮಿಷದಲ್ಲಿ ಮುಗಿಯಿತು. 10 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಮಳೆ ನಡುವೆಯೂ ಕಾದು ಭಾಗಿಯಾಗಿದ್ದರು.












Click it and Unblock the Notifications