ಸತ್ಯಮಂಗಲ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿರ್ಬಂಧ; ಪ್ರತಿಭಟನೆ
ಚಾಮರಾಜನಗರ, ಫೆಬ್ರವರಿ 10; ದಿಂಡಿಗಲ್- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನಗಳ ಸಂಚಾರ ಬಂದ್ ಮಾಡಿರುವ ಆದೇಶವನ್ನು ವಿರೋಧಿಸಿ ತಮಿಳುನಾಡು ಮತ್ತು ಕರ್ನಾಟಕ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸಲಾಗಿದೆ.
ತಮಿಳುನಾಡಿನ ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ 948ರಲ್ಲಿ ತಮಿಳುನಾಡಿನ ನಿವಾಸಿಗಳು ಪ್ರತಿಭಟನೆ ನಡೆಸಿದ್ದರಿಂದ ಕೆಲ ಕಾಲ ಕರ್ನಾಟಕ-ತಮಿಳುನಾಡು ನಡುವೆ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಬಣ್ಣಾರಿ ಚೆಕ್ ಪೋಸ್ಟ್ ಎದುರು ರಸ್ತೆಯನ್ನು ತಡೆದು ನೂರಾರು ಜನರು ಪ್ರತಿಭಟನೆ ನಡೆಸಿದರು. ಪುಣಜನೂರು ಚೆಕ್ ಪೋಸ್ಟ್ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದ ರೈತ ಸಂಘ ಹಾಗೂ ಭಾರಿ ಮಾಲೀಕರ ಸಂಘದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ದಿಂಬಂ ನಿಂದ ಬಣ್ಣಾರಿ ತನಕ ರಾತ್ರಿ ಸಂಚಾರ ಬಂದ್ ಮಾಡಿರುವುದನ್ನು ವಿರೋಧಿಸಿದರು. ಫೆಬ್ರವರಿ 10ರಿಂದ ರಾತ್ರಿ 9 ಗಂಟೆಯಿಂದ ಫೆಬ್ರವರಿ 11ರ ಬೆಳಗ್ಗೆ 6 ಗಂಟೆಯ ತನಕ ಸಂಚಾರ ಬಂದ್ ಮಾಡಲು ಮದ್ರಾಸ್ ಹೈ ಕೋರ್ಟ್ ಸೂಚನೆ ಮೇರೆಗೆ ಕ್ರಮಕ್ಕೆ ಮುಂದಾಗಿರುವ ಈರೋಡ್ ಜಿಲ್ಲಾಡಳಿತದ ಕ್ರಮಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಈರೋಡ್ ಜಿಲ್ಲಾಧಿಕಾರಿಗಳಿಂದ ದಿಂಬಂ ನಿಂದ ಬಣ್ಣಾರಿ ತನಕದ 9 ಕಿ. ಮೀ. ರಸ್ತೆ ರಾತ್ರಿ ವೇಳೆ ಸಂಚಾರಕ್ಕೆ ಬಂದ್‌ಗೆ ಆದೇಶ ಹೊರಡಿಸಲಾಗಿದೆ. ಮದ್ರಾಸ್ ಹೈಕೋರ್ಟ್ ಆದೇಶದಂತೆ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ. ಆದರೆ ಇದರಿಂದ ಬೇಸತ್ತ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಆದೇಶ ಖಂಡಿಸಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ರಾತ್ರಿ ವಾಹನಗಳ ಸಂಚಾರ ಬಂದ್
ವಾಹನಗಳ ರಾತ್ರಿ ಸಂಚಾರವನ್ನು ನಿಷೇಧಿಸಿರುವುದನ್ನು ಖಂಡಿಸಿ ರೈತ ಸಂಘ ಹಾಗೂ ಲಾರಿ ಮಾಲೀಕರ ಸಂಘದ ವತಿಯಿಂದ ಚಾಮರಾಜನಗರ ತಾಲೂಕಿನ ಗಡಿಭಾಗ ಪುಣಜನೂರು ಚೆಕ್‌ಪೋಸ್ಟ್ ಬಳಿ ಹೆದ್ದಾರಿ ನಡೆದು ಪ್ರತಿಭಟನೆ ನಡೆಸಲಾಯಿತು.
ರಾಷ್ಟ್ರೀಯ ಹೆದ್ದಾರಿ 948 (ಹಳೆಯ ಸಂಖ್ಯೆ 209) ಬೆಂಗಳೂರು ಹಾಗೂ ತಮಿಳುನಾಡಿನ ದಿಂಡಿಗಲ್ ಸಂಪರ್ಕಿಸುತ್ತದೆ. ಒಟ್ಟು 323 ಕಿ. ಮೀ. ದೂರದ ಹೆದ್ದಾರಿ ಬೆಂಗಳೂರು, ಕನಕಪುರ, ಸಾತನೂರು, ಮಳವಳ್ಳಿ, ಕೊಳ್ಳೇಗಾಲ, ಚಾಮರಾಜನಗರ ಮೂಲಕ ತಮಿಳುನಾಡಿನ ಹಾಸನೂರು, ದಿಂಬಂ ಘಟ್ಟ, ಸತ್ಯಮಂಗಲ, ಕೊಯಮತ್ತೂರು, ದಿಂಡಿಗಲ್ ಅನ್ನು ಸೇರುತ್ತದೆ.

ರೈತ ಸಂಘದ ಜಿಲ್ಲಾಧ್ಯಕ್ಷರು ಹೇಳಿದ್ದೇನು?
ಪ್ರತಿಭಟನೆ ಹಿನ್ನಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, "ವನ್ಯಜೀವಿಗಳ ರಕ್ಷಣೆಗಾಗಿ ತಮಿಳುನಾಡು ಹೈಕೋರ್ಟ್ ದಿಂಬಂ ಘಾಟಿಯಲ್ಲಿ ರಾತ್ರಿ ಸಂಚಾರ ನಿರ್ಬಂಧಿಸಿರುವುದು ಸರಿಯಲ್ಲ. ಶೇ 90 ರಷ್ಟು ತರಕಾರಿಗಳು ಈ ರಸ್ತೆ ಮೂಲಕ ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ಹೋಗುತ್ತದೆ. ಬೆಳಗಿನ ಜಾವ ತರಕಾರಿ ಕಟಾವು ಮಾಡಿ ಲೋಡ್ ಮಾಡುವ ತನಕ ಸಂಜೆಯಾಗುತ್ತದೆ. ಆಗ ರಸ್ತೆ ಬಂದ್ ಆದರೆ ಮಾರನೆಯ ದಿನಕ್ಕೆ ತರಕಾರಿಗಳು ಕೆಟ್ಟು ಹೋಗುತ್ತವೆ, ಹಾಳಾದ ತರಕಾರಿಗಳನ್ನು ಯಾರು ಖರೀದಿ ಮಾಡುವುದಿಲ್ಲ. ಆದ್ದರಿಂದ ಮದ್ರಾಸ್ ಹೈಕೋರ್ಟ್ ಆದೇಶದ ಮೊದಲು ಸಾರ್ವಜನಿಕರ ಹಿತರಕ್ಷಣೆ ದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಬೇಕಿತ್ತು" ಎಂದರು.

ಸಾಲುಗಟ್ಟಿನಿಂತ ವಾಹನಗಳು
ಸುಮಾರು 45 ನಿಮಿಷಕ್ಕೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕಿ. ಮೀ. ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ಇದಕ್ಕೆ ಜಗ್ಗದಿದ್ದಾಗ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಮುಂಜಾಗ್ರತಾ ಕ್ರಮಕ್ಕೆ ಡಿಸಿ ಮನವಿ
ನ್ಯಾಯಾಲಯದ ಆದೇಶ ಜಾರಿಯಾಗಿರುವ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಜಿಲ್ಲೆಯ ಮೀಸಲು ಅರಣ್ಯ ಪ್ರದೇಶವಾದ ಬಿ. ಆರ್. ಟಿ ಹುಲಿ ಸಂರಕ್ಷಿತ ಅರಣ್ಯದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 209ರ ಚಾಮರಾಜನಗರ-ಪುಣಜನೂರು-ಸತ್ಯಮಂಗಲಂ ಮಾರ್ಗ ಮುಖೇನ ಸಂಚರಿಸುವ ಮತ್ತು ತಮಿಳುನಾಡು ಗಡಿ ಪ್ರದೇಶವನ್ನು ಪ್ರವೇಶಿಸುವ ಎಲ್ಲಾ ಭಾರಿ ವಾಹನಗಳು ಸಂಜೆ 6 ಗಂಟೆಯೊಳಗೆ ಹಾಗೂ ಇತರೆ ವಾಹನಗಳು ರಾತ್ರಿ 9 ಗಂಟೆಯೊಳಗೆ ತಮಿಳುನಾಡು ರಾಜ್ಯವನ್ನು ಪ್ರವೇಶಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ಅರಣ್ಯ ಪ್ರದೇಶದಲ್ಲಿ ನಿಲುಗಡೆ ಮಾಡುವುದರಿಂದ ವನ್ಯಜೀವಿಗಳಿಂದ ಆಗಬಹುದಾದ ತೊಂದರೆಗಳನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.












Click it and Unblock the Notifications