ಮಾದಪ್ಪನ ಬೆಟ್ಟದ ಕಾರ್ಯದರ್ಶಿ v/s ಇಬ್ಬರು ಶಾಸಕರು: ವರ್ಗಾವಣೆ ಕುಸ್ತಿ, ಹಕ್ಕುಚ್ಯುತಿ ಮಂಡನೆ!?
ಚಾಮರಾಜನಗರ, ನವೆಂಬರ್, 28: ಪ್ರಸಿದ್ಧ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಕಾರ್ಯದರ್ಶಿ ವರ್ಗಾವಣೆ ವಿಚಾರ ರಾಜಕೀಯಗೊಂಡಿದ್ದು, ಇಬ್ಬರು ಶಾಸಕರು ಕೆಂಡಾಮಂಡಲರಾದ ಘಟನೆ ನಡೆದಿದೆ.
ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರನ್ನು ವರ್ಗಾವಣೆ ಮಾಡುವಂತೆ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರೇ, ಹನೂರು ಶಾಸಕ ಮಂಜುನಾಥ್ ಹಕ್ಕುಚ್ಯುತಿ ಮಂಡಿಸಲು ಮುಂದಾಗಿದ್ದಾರೆ. ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ಸ್ಥಾನಕ್ಕೆ ತಮ್ಮ ಅಪ್ತರ ನೇಮಕಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಮುಂದಾಗಿದ್ದಾರೆ. ಜೆ.ಮಹೇಶ್ ಅವರನ್ನು ನೇಮಕ ಮಾಡುವಂತೆ ಸಿಎಂ ಅವರಿಗೆ ಪತ್ರ ಬರೆದಿದ್ದಾರೆ.

ಶಾಸಕರು ತಮಗೆ ಬೇಕಾದವರನ್ನು ಕಾರ್ಯದರ್ಶಿಯಾಗಿ ಮಾಡಲು ಮುಂದಾಗಿದ್ದಾರೆ. ಮಲೆ ಮಹದೇಶ್ವರ ಬೆಟ್ಟಕ್ಕೂ ಚಾಮರಾಜನಗರ ಶಾಸಕರಿಗೂ ಏನು ಸಂಬಂಧ.? ಮಹದೇಶ್ವರ ಬೆಟ್ಟದ ಆದಾಯ ಮೇಲೂ ಕಣ್ಣಿಡಲು ಶಾಸಕರು ಮುಂದಾಗಿದ್ದಾರೆ. ಈಗಿರುವ ಕಾರ್ಯದರ್ಶಿ ಸರಸ್ವತಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟಾಚಾರ ವಿರೋಧಿ ಆಡಳಿತ ನಡೆಸುತ್ತಿದ್ದಾರೆ. ಇದನ್ನೆಲ್ಲ ಸಹಿಸದೆ ಶಾಸಕರು ತಮ್ಮ ಆಪ್ತರನ್ನು ನೇಮಕ ಮಾಡಲು ಮುಂದಾಗಿದ್ದಾರೆ ಎಂದು ಕನ್ನಡಿಗರ ವಿಜಯಸೇನೆ ಜಿಲ್ಲಾಧ್ಯಕ್ಷ ನವೀನ್ ಕಿಡಿಕಾರಿದ್ದಾರೆ.
ಕಾರ್ಯದರ್ಶಿ ವಿರುದ್ಧ ಕೆಂಡಾಮಂಡಲ
ಇನ್ನು ಈ ಸಂಬಂದ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾಧ್ಯಮವರೊಟ್ಟಿಗೆ ಮಾತನಾಡಿ, ಸರಸ್ವತಿ ಅವರು ಮೊದಲು ಜಿಲ್ಲಾ ಉಪ ಕಾರ್ಯದರ್ಶಿಯಾಗಿ ಬಂದರು. ನಂತರ ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿಯಾದರು. ಅವರ ಬಗ್ಗೆ ಈಗಾಗಲೇ ಹನೂರು ಶಾಸಕ ಮಂಜುನಾಥ್ ಹಕ್ಕುಚ್ಯುತಿ ಮಂಡಿಸಿದ್ದಾರೆ. ಅಧಿಕಾರಿಯಾಗಿ ರಾಜಕೀಯ ಮಾಡಬಾರದು. ಕಾರ್ಯದರ್ಶಿ ಹುದ್ದೆ ಕೆಎಎಸ್ ಶ್ರೇಣಿಯದಾಗಿದ್ದು, ಅವರದು ಆ ಕೇಡರ್ ಅಲ್ಲ. ನಾನು ವರ್ಗಾವಣೆ ಮಾಡಿ ಎಂದ ಕೂಡಲೇ ವರ್ಗಾವಣೆ ಆಗಲ್ಲ, ರಾಜಕೀಯ ಮಾಡುವುದು ನಿಲ್ಲಿಸಲಿ ಎಂದು ಸಿಡಿಮಿಡಿಗೊಂಡರು.
ಇನ್ನು, ಹನೂರು ಶಾಸಕ ಮಂಜುನಾಥ್ ಅವರು ಶಿಷ್ಟಾಚಾರ ಪಾಲಿಸಿಲ್ಲ ಎಂದು ಹಕ್ಕುಚ್ಯುತಿ ಮಂಡಿಸಿದ್ದಾರೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಹನೂರು ಶಾಸಕ ಪ್ರತಿಕ್ರಿಯೆ ಕೊಡಲು ನಿರಾಕರಿಸಿದರು.
ಸರ್ಕಾರ ಅಕ್ಟೋಬರ್ 31ರಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಯಾಗಿದ್ದ, ಸರಸ್ವತಿ ಅವರನ್ನು ಮಾತೃ ಇಲಾಖೆ ಸಮಾಜ ಕಲ್ಯಾಣ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಈ ವೇಳೆ ಸರಸ್ವತಿ ಅವರು ಪ್ರಾಧಿಕಾರದ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆ ಮಾಡಬಾರದೆಂದು ಕೋರ್ಟ್ ಮೊರೆ ಹೋಗಿದ್ದರು.
ಈಗಾಗಲೇ ಡಿಸೆಂಬರ್ 20ರವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಕೋರ್ಟ್ ಆದೇಶ ನೀಡಿದೆ. ಆದ್ದರಿಂದ ಮುಖ್ಯಮಂತ್ರಿಗಳು ಸರಸ್ವತಿ ಅವರನ್ನೇ ಮುಂದುವರೆಸುವಂತೆ ಕನ್ನಡಪರ ಸಂಘಟನೆ ಹೋರಾಟಗಾರರು ಒತ್ತಾಯಿಸಿದ್ದಾರೆ. ಈ ನಡುವೆ ಶಾಸಕರು ಕಾರ್ಯದರ್ಶಿ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಮುಂದಾಗಿದ್ದಾರೆ.
ಒಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಇವರ ಕುರ್ಚಿ ಕಾದಾಟ ಶ್ರೀಕ್ಷೇತ್ರದ ಅಭಿವೃದ್ಧಿಗೆ ಮಾರಕ ಆಗದಿರಲಿ ಎಂಬುದು ಭಕ್ತರ ಒತ್ತಾಯ ಆಗಿದೆ.












Click it and Unblock the Notifications