ಚಾಮರಾಜನಗರ ಅರಣ್ಯ ವ್ಯಾಪ್ತಿಯಲ್ಲಿ ಬೇಟೆಗಾರರ ಅಟ್ಟಹಾಸ: ಆರೋಪಿಗಳು ಸಿಕ್ಕಿಬಿದ್ದೇಗೆ?
ಚಾಮರಾಜನಗರ, ಫೆಬ್ರವರಿ 26: ಅರಣ್ಯ ಇಲಾಖೆ ಎಷ್ಟೇ ಹದ್ದಿನ ಕಣ್ಣಿಟ್ಟು ಕಾದರೂ ಅರಣ್ಯದೊಳಗೆ ಮತ್ತು ಅರಣ್ಯದಂಚಿನಲ್ಲಿ ವನ್ಯ ಪ್ರಾಣಿಗಳನ್ನು ಬೇಟೆಗಾರರನ್ನು ಹತ್ತಿಕ್ಕುವುದು ಕಷ್ಟವಾಗುತ್ತಿದೆ. ಸಮಯ ಸಾಧಿಸಿ ಬೇರೆ ಬೇರೆ ಮಾರ್ಗಗಳಲ್ಲಿ ಪ್ರಾಣಿಗಳನ್ನು ಬೇಟೆಯಾಡುತ್ತಲೇ ಇರುತ್ತಾರೆ. ಇದೀಗ ಪ್ರತ್ಯೇಕ ಪ್ರಕರಣಗಳಲ್ಲಿ ಮೊಲವನ್ನು ಬೇಟೆಯಾಡಿದ್ದ ಆರೋಪಿ ಮತ್ತು ಕಾಡುಹಂದಿಯನ್ನು ಬೇಟೆಯಾಡಲು ನಾಡಾ ಬಾಂಬ್ ಇಟ್ಟಿದ್ದ ಇಬ್ಬರು ಸೇರಿ ಮೂವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನು ಐವರು ಮಂದಿ ತಲೆಮರೆಸಿಕೊಂಡಿದ್ದು ಅವರ ಪತ್ತೆಗೆ ಬಲೆ ಬೀಸಲಾಗಿದೆ.
ಇದೀಗ ಬೇಸಿಗೆ ಕಾಲವಾಗಿರುವುದರಿಂದ ಅರಣ್ಯದಿಂದ ನೀರು ಮತ್ತು ಆಹಾರ ಅರಸಿಕೊಂಡು ನಾಡಿನತ್ತ ಬರುವುದು ಮಾಮೂಲಿಯಾಗಿದೆ. ಇಂತಹ ಸಂದರ್ಭದಲ್ಲಿ ಹೊಂಚು ಹಾಕಿ ಅವುಗಳನ್ನು ಬೇಟೆಯಾಡುವ ಬೇಟೆಗಾರರು ಬಹಳಷ್ಟು ಮಂದಿಯಿದ್ದಾರೆ. ಇವರನ್ನು ಹೆಡೆಮುರಿ ಕಟ್ಟುವ ಕೆಲಸ ನಡೆಯುತ್ತಿದ್ದರೂ ಕಣ್ತಪ್ಪಿಸಿ ಬೇಟೆಗಾರರು ಬೇಟೆಯಾಡುತ್ತಿದ್ದಾರೆ.

ಇಂತಹ ಪ್ರಕರಣಗಳ ಪೈಕಿ ಇದೀಗ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಯಳಂದೂರು ವನ್ಯಜೀವಿ ವಲಯದ ಹಾವುರಾಣಿಗುಡ್ಡ ಅರಣ್ಯ ಪ್ರದೇಶದಲ್ಲಿ ಕಾಡು ಮೊಲವನ್ನು ಬೇಟೆಯಾಡಿದ್ದ ಆರೋಪಿ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಕೃಷ್ಣಾಪುರ ಗ್ರಾಮದ ಮಾದಶೆಟ್ಟಿ(48) ಎಂಬಾತನನ್ನು ಬಂಧಿಸಲಾಗಿದೆ. ಈತನೊಂದಿಗೆ ಇದ್ದ ಮತ್ತೊಬ್ಬ ಅದೇ ಗ್ರಾಮದ ನಿವಾಸಿ ಶಿವರಾಜು ಸೇರಿದಂತೆ ಇಬ್ಬರು ಪರಾರಿಯಾಗಿದ್ದಾರೆ.
ಮೂವರು ಅಕ್ರಮವಾಗಿ ಯಳಂದೂರು ವನ್ಯಜೀವಿ ವಲಯದ ಪುರಾಣಿ ಶಾಖೆಯ ಬೇತಾಳಕಟ್ಟೆ ಗಸ್ತಿನ ಹಾವುರಾಣಿಗುಡ್ಡ ಅರಣ್ಯ ಪ್ರದೇಶಕ್ಕೆ ತೆರಳಿ ಮೊಲವನ್ನು ಬೇಟೆಯಾಡಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳಾದ ಆರ್ಎಫ್ಒ ಎಚ್.ಎನ್.ನಾಗೇಂದ್ರ ನಾಯಕ, ಡಿಆರ್ ಎಫ್ ಒ ಮಧು, ಸಿಬ್ಬಂದಿ ಸಂಗಪ್ಪ ಸಿ ಗೆಣ್ಣೂರ, ಶ್ರೀಕಂಠ, ಪ್ರಭುಸ್ವಾಮಿ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದು ಈ ಸಂದರ್ಭ ಮಾದಶೆಟ್ಟಿ ಎಂಬಾತ ಸಿಕ್ಕಿಬಿದ್ದಿದ್ದು ಮತ್ತಿಬ್ಬರು ಪರಾರಿಯಾಗಿದ್ದಾರೆ. ತಲೆ ಮರೆಸಿಕೊಂಡಿರುವ ಇಬ್ಬರ ಬಂಧನಕ್ಕೆ ಕ್ರಮವಹಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ನಾಡಬಾಂಬ್ ಗಳನ್ನಿಟ್ಟು ಕಾಡುಹಂದಿಗಳನ್ನು ಬೇಟೆಯಾಡುತ್ತಿದ್ದ ಕುಣಗಳ್ಳಿ ಗ್ರಾಮದ ರಾಮಶೆಟ್ಟಿ(45), ಸೋಮಣ್ಣ(45) ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಹಂದಿಯನ್ನು ಬೇಟೆಯಾಡುವ ಸಲುವಾಗಿ ನಾಡಬಾಂಬ್ ಗಳನ್ನು ತಯಾರಿಸಿ ಅವುಗಳನ್ನು ಪ್ರಾಣಿಗಳು ಬರುವ ಸ್ಥಳದಲ್ಲಿಟ್ಟು ಬೇಟೆಯಾಡುತ್ತಿದ್ದರು. ಇವರು ಮಾಡಿದ ಕೃತ್ಯಕ್ಕೆ ಜಾನುವಾರುಗಳ ಬಾಯಿ ಛಿದ್ರವಾಗಿತ್ತು. ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು. ಈ ಸಂಬಂಧ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೇಟೆಗೆ ನಾಡಾಬಾಂಬ್‌ಗಳ ತಯಾರಿ
ಕಾಡುಹಂದಿಗಳನ್ನು ಬೇಟೆಯಾಡಲು ಸ್ಫೋಟಕ ಗುಂಡುಗಳನ್ನು ತಯಾರಿಸಿ ಮುಸುಕಿನ ಜೋಳದ ಸಂಡು ಹಾಗೂ ಮೇವಿನ ಜೊತೆ ಪಾಳು ಜಮೀನು ಅಥವಾ ಖಾಲಿ ಸ್ಥಳದಲ್ಲಿಡುತ್ತಿದ್ದರು. ಮೇವನ್ನು ಅರಸಿ ಬರುವ ಜಾನುವಾರುಗಳು ಇವುಗಳನ್ನು ಮೇವು ಎಂದು ತಿನ್ನುವ ಸಮಯದಲ್ಲಿ ಅದು ಸ್ಫೋಟಗೊಂಡು ಜಾನುವಾರುಗಳ ಬಾಯಿ ಹಾಗೂ ಮುಖ ಛಿದ್ರವಾಗಿ ಗಾಯಗೊಂಡು ಮೃತಪಡುತ್ತಿದ್ದವು. ಈ ನಡುವೆ ಕಾಡುಪ್ರಾಣಿಗಳ ಬದಲಿಗೆ ಜಾನುವಾರುಗಳು ತಿಂದು ಗಾಯಗೊಂಡ, ಸಾವನ್ನಪ್ಪಿದ ಘಟನೆಗಳು ನಡೆದಿದ್ದವು. ಈ ಬಗ್ಗೆ 4 ಪೊಲೀಸ್ ಠಾಣೆಗಳಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿತ್ತು.
ಈ ನಡುವೆ ಫೆ.19 ರಂದು ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಯ್ಯನಹಳ್ಳಿ ಗ್ರಾಮದಲ್ಲಿ ನಾಡಾಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರವಾಗಿ ಆ ಹಸು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ರಚನೆ ಮಾಡಲಾಗಿತ್ತು. ಈ ಸಂಬಂಧ ಪ್ರಕರಣದ ತನಿಖೆ ನಡೆಸಿದಾಗ ಕುಣಗಳ್ಳಿ ಗ್ರಾಮದ ರಾಮಶೆಟ್ಟಿ, ಸೋಮಣ್ಣ ಸಿಕ್ಕಿಬಿದ್ದಿದ್ದು ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿಚಾರಣೆ ವೇಳೆ ಕೃತ್ಯದಲ್ಲಿ ಭಾಗಿಯಾಗುತ್ತಿದ್ದ ಮೂವರು ಆರೋಪಿಗಳ ಹೆಸರನ್ನು ಬಂಧಿತ ಆರೋಪಿಗಳು ಹೇಳಿದ್ದು ಅವರು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೂ ಕ್ರಮವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications