ಚಾಮರಾಜನಗರ: ಅಪಾಯಕಾರಿ ಸೇತುವೆ ಮೇಲೆ ಪ್ರಯಾಣಿಕರ ಸರ್ಕಸ್!
ಚಾಮರಾಜನಗರ, ಜನವರಿ 06: ಗುಂಡ್ಲುಪೇಟೆ ಪಟ್ಟಣದ ಬಳಿಯ ಶಿಂಡನಪುರ ಹಾಗೂ ದೊಡ್ಡತುಪ್ಪೂರು ನಡುವೆ ಹಾದು ಹೋಗುವ ರಸ್ತೆಯಲ್ಲಿರುವ ಶಿಥಿಲಾವಸ್ಥೆಯ ಸೇತುವೆಯನ್ನು ತೆರವುಗೊಳಿಸಿ ನೂತನ ಸೇತುವೆ ನಿರ್ಮಾಣ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈಗಾಗಲೇ ಹೊಸ ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದರೂ ಕಾಮಗಾರಿ ನಡೆಸದೆ ಮೌನಕ್ಕೆ ಶರಣಾಗಿರುವುದಕ್ಕೆ ಲೋಕೋಪಯೋಗಿ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಂಡನಪುರ ಹಾಗೂ ದೊಡ್ಡತುಪ್ಪೂರು ನಡುವೆ ಇರುವ ಅಡ್ಡಹಳ್ಳಕ್ಕೆ ಈ ಹಿಂದೆ ನಿರ್ಮಿಸಲಾಗಿರುವ ಸೇತುವೆಯು ಶಿಥಿಲವಾಗಿ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಇದರ ಮೇಲೆ ಪ್ರತಿದಿನವೂ ನೂರಾರು ಬಸ್ಸು ಲಾರಿ ಸೇರಿದಂತೆ ಹಲವು ವಾಹನಗಳು ಸಂಚರಿಸುತ್ತಿವೆ. ಇದು ಹೀಗೆ ಮುಂದುವರೆದರೆ ವಾಹನಗಳ ಭಾರವನ್ನು ತಡೆಯಲಾಗದೆ ಕುಸಿದು ಬಿದ್ದರೂ ಅಚ್ಚರಿಪಡಬೇಕಾಗಿಲ್ಲ.

ಕಳೆದ ಆರು ತಿಂಗಳಿನಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಇಕ್ಕಟ್ಟಾದ ರಸ್ತೆಯ ಅರ್ಧಭಾಗದಲ್ಲಿಯೇ ಸಂಚರಿಸುತ್ತಿದ್ದು, ಒಂದು ಕೋಟಿ ರೂ. ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾ ಬಂದಿದ್ದರೂ ಇನ್ನೂ ಕಾಮಗಾರಿ ಪ್ರಾರಂಭವಾಗಿಲ್ಲದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಅಪಾಯಕಾರಿ ಸೇತುವೆ ಮೇಲೆ ಜನರು ಇನ್ನೆಷ್ಟು ದಿನ ಸರ್ಕಸ್ ಮಾಡಬೇಕೋ ದೇವರೇ ಬಲ್ಲ!












Click it and Unblock the Notifications