ಗೃಹಲಕ್ಷ್ಮೀ ಯೋಜನೆ ಚಾಲನೆಗೆ 1 ಲಕ್ಷಕ್ಕೂ ಅಧಿಕ ಮಹಿಳೆಯರು ಆಗಮಿಸಲಿದ್ದಾರೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಚಾಮರಾಜನಗರ, ಆಗಸ್ಟ್, 28: ಮೈಸೂರಿನಲ್ಲಿ ನಡೆಯಲಿರುವ ಗೃಹಲಕ್ಷ್ಮೀ ಯೋಜನೆ ಚಾಲನೆಗೆ ಒಂದರಿಂದ ಒಂದೂವರೆ ಲಕ್ಷ ಮಂದಿ ಮಹಿಳೆಯರು ಆಗಮಿಸಲಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಚಾಮರಾಜನಗರದಲ್ಲಿ ಮಾಧ್ಯಮವರೊಟ್ಟಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆ ನಿರಂತರವಾಗಿ ಇರಲಿದೆ, ಹಬ್ಬದ ವಾತಾವರಣವನ್ನ ನಮ್ಮ ಮಹಿಳೆಯರು ಸೃಷ್ಟಿಸಿದ್ದಾರೆ. 5 ಗ್ಯಾರಂಟಿಗಳಲ್ಲಿ ಬಹಳಷ್ಟು ಸದ್ದು ಮಾಡುತ್ತಾ ಇರೊದು ಗೃಹಲಕ್ಷ್ಮಿ ಯೋಜನೆಯಾಗಿದ್ದು, ರಾಜ್ಯದ 13 ಸಾವಿರ ಕಡೆ ಈ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಹೇಳಿದರು.

ಆಗಸ್ಟ್ 30ರಂದು ಮೈಸೂರಿನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡುತ್ತಿದ್ದೇವೆ. ಮೈಸೂರಿನ ಕಾರ್ಯಕ್ರಮಕ್ಕೆ ಒಂದೂವರೆ ಲಕ್ಷ ಜನ ಸೇರುವ ಸಾಧ್ಯತೆ ಇದೆ, ರಾಜ್ಯದ ಎಲ್ಲ ಮಹಿಳೆಯರು ಅತ್ಯುತ್ಸಾಹದಿಂದ ಯೋಜನೆಯಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯಾದ್ಯಂತ 1.11 ಕೋಟಿ ಜನ ಗೃಹಲಕ್ಷ್ಮಿಗೆ ಅರ್ಜಿ ನೋಂದಣಿ ಆಗಿದೆ. ಅರ್ಜಿ ಸಲ್ಲಿಸಲು ಟೈಮ್ ಲಿಮಿಟ್ ಇಲ್ಲ. ಮುಂದಿನ ಬಾರಿಯೂ ನಮ್ಮ ಸರ್ಕಾರ ಬಂದರೆ ಯೋಜನೆ ಮುಂದುವರೆಯಲಿದೆ ಎಂದು ಹೇಳಿದರು.
ಇದೇ ವೇಳೆ ಆಪರೇಷನ್ ಹಸ್ತ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಯಾರು ಯಾರಿಗೆ ನಮ್ಮ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತದ ಮೇಲೆ ನಂಬಿಕೆ ಇದೆಯೋ ವಿಶ್ವಾಸ ಇದೆಯೋ ಅಂತಹವರು ಬರುತ್ತಾರೆ. ಜನಪರ ಕಾರ್ಯಕ್ರಮ ಕೊಡುತ್ತಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಪಕ್ಷ ಸೇರುತ್ತಿದ್ದಾರೆ, ಯಾವುದೇ ಕಂಡಿಷನ್ ಇಲ್ಲದೆ ಸೇರುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಸಿಎಂ ಸಿದ್ದರಾಮಯ್ಯ ಹೇಳಿದ್ದೇನು
ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ವಿಚಾರವನ್ನು ಸಿಎಂ ಸಿದ್ದರಾಮಯ್ಯ ತಳ್ಳಿ ಹಾಕಿದರು.
ಮೈಸೂರು ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋಡ ಬಿತ್ತನೆ ಯಾವ ಕಾಲದಲ್ಲೂ ಯಶಸ್ವಿಯಾಗಿಲ್ಲ. ಮೋಡ ಬಿತ್ತನೆಯಿಂದ ಯಾವುದೇ ಪ್ರಯೋಜನವಿಲ್ಲ. ಬರ ಪರಿಸ್ಥಿತಿ ಎದುರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಬರಪೀಡಿತ ಪ್ರದೇಶ ಘೋಷಣೆಯಾದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಬಿಜೆಪಿ ದಿವಾಳಿಯಾಗಿದೆ
ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬಂದು 3 ತಿಂಗಳು ಆಗಿದೆ. ಆದರೆ ಬಿಜೆಪಿಯವರು ವಿಪಕ್ಷ ನಾಯಕರ ಆಯ್ಕೆ ಮಾಡಿಲ್ಲ, ರಾಜ್ಯದಲ್ಲಿ ಬಿಜೆಪಿ ದಿವಾಳಿಯಾಗಿದೆ ಎಂದರು. ಇನ್ನು ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬಂದರು ಸ್ವಾಗತ ಮಾಡುತ್ತೇವೆ. ಆದರೆ ಪಕ್ಷದ ಸಿದ್ದಾಂತ, ತತ್ವ ಒಪ್ಪಿ ಬರುವವರಿಗೆ ಆದ್ಯತೆ ನೀಡುತ್ತೇವೆ. ಇಂದಿನಿಂದ 3 ದಿನಗಳ ಕಾಲ ಮೈಸೂರು ಪ್ರವಾಸ ಮಾಡಿದ್ದೇನೆ. ದೇಶದಲ್ಲೇ ಗೃಹಲಕ್ಷ್ಮಿ ಯೋಜನೆ ದೊಡ್ಡ ಕಾರ್ಯಕ್ರಮವಾಗಿದೆ. ಈ ವರ್ಷ 18 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತೇವೆ. ಒಂದು ಕೋಟಿ 33 ಲಕ್ಷ ಕುಟುಂಬಕ್ಕೆ 2 ಸಾವಿರ ರೂಪಾಯಿ ಕೊಡ್ತೀವಿ. 'ಗೃಹಲಕ್ಷ್ಮಿ' ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಬರಲಿದ್ದಾರೆ ಎಂದರು.
ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಯೋಜನೆ ನಾಡಿದ್ದು ಅನುಷ್ಠಾನಗೊಳ್ಳಲಿದೆ. ರಾಜ್ಯದಾದ್ಯಂತ 1:30 ಕೋಟಿ ಕುಟುಂಬದ ಯಜಮಾನಿಯರು ಇದರ ಫಲಾನುಭವಿಗಳು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ನಾಡಿದ್ದು ಅನುಷ್ಠಾನಗೊಳ್ಳಲಿದೆ. ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡಂತೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ನಾಲ್ಕು ಜಿಲ್ಲೆಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮವನ್ನು ಬೆಳಗಾವಿಯಿಂದ ಮೈಸೂರಿಗೆ ಸ್ಥಳಾಂತರ ಮಾಡಿರುವುದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಮಹಿಳೆಯರು ಈ ಹಣವನ್ನು ವಿವಿಧ ಉದ್ದೇಶಗಳಿಗೆ ಬಳಕೆ ಮಾಡುವುದರಿಂದ ಸರ್ಕಾರಕ್ಕೂ ಆದಾಯ ಬರಲಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಆಗಲಿದೆ ಎಂದು ಹೇಳಿದರು.












Click it and Unblock the Notifications