ಪಕ್ಷದ ಮುಖಂಡನ ಕಾರಿಗೆ ಬೆಂಕಿ: ಕಣ್ಣೀರಿಟ್ಟ ಜೆಡಿಎಸ್ ಅಭ್ಯರ್ಥಿ ಎಂ.ಆರ್ ಮಂಜುನಾಥ್
ಚಾಮರಾಜನಗರ, ಏಪ್ರಿಲ್ 23: ಕೆಲ ತಿಂಗಳುಗಳ ಹಿಂದೆಯಷ್ಟೇ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದ ಮುಖಂಡನ ಕಾರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ತೆಳ್ಳನೂರು ಗ್ರಾಮದಲ್ಲಿ ನಡೆದಿದೆ.
ಹನೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ತೆಳ್ಳನೂರು ಗ್ರಾಮದ ರಮೇಶ್ ಕೆಲ ತಿಂಗಳುಗಳ ಹಿಂದೆಯಷ್ಟೇ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು. ರಮೇಶ್ ಅವರು ನಿಲ್ಲಿಸಿದ ಕಾರಿಗೆ ನಿನ್ನೆ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ರಮೇಶ್ ಅವರ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.
ಘಟನಾ ಸ್ಥಳಕ್ಕೆ ಹನೂರು ಜೆಡಿಎಸ್ ಅಭ್ಯರ್ಥಿ ಎಂ.ಆರ್.ಮಂಜುನಾಥ್ ಭೇಟಿ ಕೊಟ್ಟು ಕಾರಿನ ಸ್ಥಿತಿ ಕಂಡು ಕಣ್ಣೀರು ಹಾಕಿದ್ದು, ಬೆಂಕಿ ಇಟ್ಟವರು ಸಿಕ್ಕಿ ಹಾಕಿಕೊಳ್ಳುತ್ತಾರೆ ಎಂದು ಮುಖಂಡನಿಗೆ ರಮೇಶ್‌ಗೆ ಧೈರ್ಯ ತುಂಬಿ ಕಣ್ಣೀರು ಹಾಕಿದ್ದಾರೆ.

ಯಳಂದೂರು: ನಾಯಕರ ಬೀದಿಯ ನಿವಾಸಿಗಳಿಂದ ಚುನಾವಣಾ ಬಹಿಷ್ಕಾರ
ಯಳಂದೂರು ತಾಲೂಕಿನ ಬನ್ನಿಸಾರಿಗೆ ಗ್ರಾಮದ ನಾಯಕರ ಬೀದಿಯ ನಿವಾಸಿಗಳು ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬನ್ನಿಸಾರಿಗೆ ಗ್ರಾಮದ ನಾಯಕರ ಬೀದಿಯ ನಿವಾಸಿಗಳು ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆಗಳು ಎದುರಿಸುತ್ತಿದ್ದು ಈ ಬಗ್ಗೆ ಈವರೆಗೂ ನಿರ್ಲಕ್ಷ್ಯ ತೋರಿರುವ ಜನಪ್ರತಿನಿಧಿಗಳ ವಿರುದ್ಧ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.
ಗೌಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮದ ನಮ್ಮ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಒಟ್ಟು 400 ಕುಟುಂಬಗಳು ವಾಸವಾಗಿವೆ. ಇಲ್ಲಿ 800ಕ್ಕೂ ಹೆಚ್ಚು ಮತದಾರರಿದ್ದಾರೆ. ಇಡೀ ಗ್ರಾಮಕ್ಕೆ ಒಂದೇ ಕೊಳವೆ ಬಾವಿ ಇದ್ದು ಇದರಿಂದಲೇ ನೀರು ಪೂರೈಕೆಯಾಗಬೇಕು. ಆದರೆ ನಮ್ಮ ಬೀದಿಗೆ ನೀರು ಬರುವುದೇ ಇಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಕ್ರಮ ವಹಿಸಿಲ್ಲ ಎಂದು ಸ್ಥಳೀಯರು ಅಸಮಧಾನ ಹೊರಹಾಕಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಬೇಸಿಗೆ ಕಾಲದಲ್ಲಿ ನೀರಿಗೆ ಹಾಹಾಕಾರ ಹೆಚ್ಚಾಗುತ್ತದೆ. ಕುಡಿಯುವ ನೀರು ಸಂಗ್ರಹಿಸಲು ನಾವು ಪಕ್ಕದ ಕೊಳ್ಳೇಗಾಲ ತಾಲೂಕು ವ್ಯಾಪ್ತಿಯ ಕುಣಗಳ್ಳಿ ಗ್ರಾಮಕ್ಕೆ ತೆರಳುವ ಅನಿವಾರ್ಯತೆ ಇದೆ. ಚುನಾಯಿತ ಜನಪ್ರತಿನಿಧಿಗಳಿಗೂ ಹಲವು ಬಾರಿ ಈ ಸಮಸ್ಯೆ ನಿವಾರಣೆಗೆ ಮನವಿ ಮಾಡಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಹೀಗಾಗಿ ಈ ಚುನಾವಣೆಯನ್ನು ಬಹಿಷ್ಕಾರ ಮಾಡಲಾಗುವುದು ಎಂದು ಬನ್ನಿಸಾರಿಗೆ ಗ್ರಾಮದ ನಾಯಕರ ಬೀದಿಯ ನಿವಾಸಿಗಳು ಪಟ್ಟು ಹಿಡಿದಿದ್ದಾರೆ.












Click it and Unblock the Notifications