V Somanna: ಜೆಡಿಎಸ್ ಅಭ್ಯರ್ಥಿಗೆ ಬಂಪರ್ ಆಫರ್ ನೀಡಿದ ಸಚಿವ ವಿ.ಸೋಮಣ್ಣ: ಆಡಿಯೋ ವೈರಲ್
ಚಾಮರಾಜನಗರ, ಏಪ್ರಿಲ್ 25: ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣಗೆ ಆರಂಭವಾಗಿದ್ದು, ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನಾಂಕ ಕೂಡ ಮುಗಿದು ಹೋಗಿದೆ. ಈ ಮಧ್ಯೆ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ನಾಮಪತ್ರ ವಾಪಸ್ ಪಡೆಯುವಂತೆ ಬಿಜೆಪಿ ಮುಖಂಡರು ಒತ್ತಡ ಹಾಕಿರುವ ಆರೋಪ ಕೇಳಿಬಂದಿದೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನಸ್ವಾಮಿಗೆ ( ಮಲ್ಲು) ಎನ್ನುವವರಿಗೆ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹಾಗೂ ಬೆಂಬಲಿಗರು ಕೆಲವು ಆಮಿಷಗಳನ್ನೊಡ್ಡಿ ನಾಮಪತ್ರ ಹಿಂಪಡೆಯುವಂತೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.

ವಿ.ಸೋಮಣ್ಣ ಹಾಗೂ ಬೆಂಬಲಿಗರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗುತ್ತಿದ್ದು, ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನಸ್ವಾಮಿಗೆ ಒಂದು ಗೂಟದ ಕಾರು ಹಾಗೂ ಮುಂದಿನ ದಿನಗಳಲ್ಲಿ ಐವತ್ತು ಲಕ್ಷ ನೀಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಮೊದಲು ವಿ.ಸೋಮಣ್ಣ ಬೆಂಬಲಿಗರು ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ನಮ್ಮ ಸರ್ಕಾರ ಬರುತ್ತದೆ ಜೆಡಿಎಸ್ ಪಕ್ಷ ಇರುವುದಿಲ್ಲ ಇಲ್ಲ. ಯಾರಿಗೆ ಗೊತ್ತಾಗದ ರೀತಿ ನಾಮಪತ್ರ ವಾಪಸ್ ಪಡೆಯಿರಿ. ಸೋಮಣ್ಣ ಅವರು ಮಾತು ಕೊಟ್ಟ ಮೇಲೆ ತಪ್ಪಲ್ಲ. ನಾವೆಲ್ಲಾ ಸಾಕ್ಷಿ ಇದ್ದೇವೆ. ನಮ್ಮ ಸೋಮಣ್ಣ ಸುಳ್ಳು ಹೇಳುವ ಮನುಷ್ಯ ಅಲ್ಲ. ದೇವರ ಮುಂದೆ ನಿಂತು ನಿಮಗೆ ಈ ರೀತಿ ಮಾತು ನೀಡಿದ್ದಾರೆ ಎಂದು ಹೇಳಿದ್ದಾರೆ.

ಮಲ್ಲಿಕಾರ್ಜುನಸ್ವಾಮಿ ಈ ಬೇಡಿಕೆ ಉತ್ತರಿಸಿದ್ದು, ಈ ಬಗ್ಗೆ ಕುಮಾರಸ್ವಾಮಿ ಜೊತೆ ಮಾತನಾಡುತ್ತೇನೆ. ಇದು ಪಕ್ಷದಿಂದ ಮಾಡಿರುವ ತೀರ್ಮಾನ ನಾನು ಹೀಗೆ ಏಕಾಏಕಿ ನಾಮಪತ್ರ ವಾಪಸ್ ಪಡೆಯಲು ಆಗುವುದಿಲ್ಲ. ಆದರೆ ಕ್ಷೇತ್ರದಲ್ಲಿ ಏನು ಮಾಡದೇ ನೂಟ್ರಲ್ ಆಗಿರುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇನ್ನು ನೇರವಾಗಿ ವಿ.ಸೋಮಣ್ಣ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ನಾಮಪತ್ರ ವಾಪಸ್ ತಗೋ ಮುಂದಿದ್ದು ಏನು ಬೇಕೋ ಅದನ್ನು ನಾನು ಮಾಡುತ್ತೇನೆ. ನೀನು ನನಗೆ ಹಳೆ ಸ್ನೇಹಿತ ಅವನ್ಯಾರೋ ಹೇಳುವ ಮಾತು ಕೇಳ ಬೇಡ. ನಿನಗೆ ಬದುಕಲು ಏನು ಬೇಕು ಎಲ್ಲಾ ನಾನು ಮಾಡಿಕೊಡುತ್ತೇನೆ. ಮೊದಲು ವಾಪಸ್ ತಗೋ ಆಮೇಲೆ ಉಳಿದನ್ನು ನಾನು ನೋಡಿಕೊಳ್ಳುತ್ತೇನೆ. ನಿನ್ನ ಹಿತ ಕಾಪಾಡುವುದು ನನ್ನ ಜವಾಬ್ದಾರಿ, ನಿನ್ನನ್ನು ತೆಗೆದುಕೊಂಡು ಹೋಗಿ ಎಲ್ಲಿ ಬಿಡಬೇಕೋ ಅಲ್ಲಿ ನಿಲ್ಲಿಸುತ್ತೇನೆ. ದೇವರ ಮುಂದೆ ನಿಂತು ಮಾತನಾಡುತ್ತಿದ್ದೇನೆ. ಮೊದಲು ಆ ಕೆಲಸ ಮಾಡು ಕೈ ಮುಗಿಯುತ್ತೇನೆ. ಜಿ.ಟಿ ದೇವೇಗೌಡರ ಬಳಿ ಹೇಳಿಸುತ್ತೇವೆ ಎಂದು ಹೇಳಿದ್ದಾರೆ. ಸದ್ಯ ವಿ.ಸೋಮಣ್ಣ ಹಾಗೂ ಬೆಂಬಲಿಗರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.












Click it and Unblock the Notifications