ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮತ್ತೊಂದು ಲಾರಿ ಪಲ್ಟಿ
ಚಾಮರಾಜನಗರ, ಅಕ್ಟೋಬರ್, 05: ಇಷ್ಟು ದಿನ ತಗ್ಗಿದ್ದ ಅಪಘಾತ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ. ಇನ್ನು ಇದೀಗ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾದ ಘಟನೆ ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಶನಿವಾರ (ಅಕ್ಟೋಬರ್ 05) ಸಂಜೆ ನಡೆದಿದೆ.
ಕೇರಳದಿಂದ ಪ್ಲೇವುಡ್‌ಗಳನ್ನು ಹೊತ್ತು ಬರುತ್ತಿದ್ದ ಲಾರಿ ಇದಾಗಿದ್ದು, ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಲಾರಿ ಸಂಪೂರ್ಣ ಜಖಂ ಆಗಿದ್ದು, ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.

ಲಾರಿ ಪಲ್ಟಿ: ಇನ್ನು ಇಂದು ಬೆಳಗ್ಗೆಯಷ್ಟೇ ಇದೇ ಸ್ಥಳದಲ್ಲೇ ರಬ್ಬರ್ ತುಂಬಿಕೊಂಡು ಬಂದಿದ್ದ ಲಾರಿ ಪಲ್ಟಿಯಾಗಿ ಚಾಲಕ ತೀವ್ರವಾಗಿ ಗಾಯಗೊಂಡ ಘಟನೆ ನಡೆದಿತ್ತು. ತಮಿಳುನಾಡಿನಿಂದ ರಬ್ಬರ್ ತುಂಬಿಕೊಂಡು ಬರುತ್ತಿದ್ದ ಲಾರಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿಯಂತ್ರಣ ತಪ್ಪಿ ಉರುಳಿರುವ ಘಟನೆ ನಡೆದಿದೆ.
ಇನ್ನು ಲಾರಿಯಡಿಯಲ್ಲಿ ಸಿಲುಕಿದ್ದ ಚಾಲಕನನ್ನು ಹೊರಕ್ಕೆ ತಂದಿದ್ದು, ಚಾಲಕನಿಗೆ ಗಂಭೀರ ಗಾಯಗಳಾಗಿ ಚಾಮರಾಜನಗರ ಆಸ್ಪತ್ರೆಗೆ ರವಾನಿಸಿದ್ದಾರೆ. ಬಂಡೀಪುರದಿಂದ ಮೇಲುಕಾಮನಹಳ್ಳಿ ಕಡೆಗೆ ಬರುವ ಎಸ್ ಆಕಾರದ ತಿರುವಿದ್ದು, ಭಾರಿ ಲಾರಿಗಳು ನಿಯಂತ್ರಣ ತಪ್ಪಿ ಆಗಾಗ್ಗೆ ಅವಘಡಗಳು ಉಂಟಾಗುತ್ತಿರುತ್ತವೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಏರಿಕೆ ಆಗುತ್ತಲೇ ಇವೆ. ಹಾಗೆಯೇ ಇದೀಗ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 4ಲ್ಲಿ ಅಕ್ಟೋಬರ್ 3ರಂದು ನಡೆದಿತ್ತು.
ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಂಗಳೂರು ಕಡೆಯಿಂದ ದಾವಣಗೆರೆ ಕಡೆ ಹೋಗುವಾಗ ಹಿಂದಿನಿಂದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಅವರು ಇಂದು ಬೆಳಗ್ಗೆ 6 ಗಂಟೆ ವೇಳೆ ಕಾರು ಅಪಘತದಲ್ಲಿ ಮೃತಪಟ್ಟವರಾಗಿದ್ದು, ಇವರು ರಾಮನಗರ ಮೂಲದವರಾಗಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಚಂದ್ರಶೇಖರ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಓರ್ವ ಮಗನಿಗೆ ಮೆಡಿಕಲ್ ಸೀಟ್ ಸಿಕ್ಕಿದ್ದರಿಂದ ಇಂದು ಅವರನ್ನು ದಾವಣಗೆರೆ ಕಾಲೇಜಿಗೆ ಬಿಟ್ಟು ಬರಲು ಬರುತ್ತಿದ್ದರು. ಆಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ತಂದೆ-ತಾಯಿ ಮಗನನ್ನು ದಾವಣಗೆರೆ ಶಾಲೆಯೊಂದರಲ್ಲಿ ಪ್ರವೇಶ ಕೊಡಿಸಲು ಹೋಗುತ್ತಿದ್ದು. ಈ ವೇಳೆ ಕಾರು ಲಾರಿಗೆ ಡಿಕ್ಕಿ ಹೊಡೆದಿದ್ದು, ಈ ರಭಸಕ್ಕೆ ಕಾರು ಚಾಲಕ ಅಂದರೆ ಮಗನ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ತಾಯಿ-ಮಗ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಈ ಪ್ರಕರಣ ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎನ್ನಲಾಗುತ್ತಿದೆ.












Click it and Unblock the Notifications