ಕೊಳ್ಳೇಗಾಲ: ಮಟ.. ಮಟ.. ಮಧ್ಯಾಹ್ನವೇ ನಡುರಸ್ತೆಯಲ್ಲೇ ಹಸು ಕೊಂದ ಚಿರತೆ.!
ಚಾಮರಾಜನಗರ, ಆಗಸ್ಟ್, 14: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಗ್ರಾಮದ ಹೊರವಲಯದ ರಸ್ತೆಯಲ್ಲಿ ಚಿರತೆಯೊಂದು ಹಸುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿದ ಘಟನೆ ಬುಧವಾರ (ಆಗಸ್ಟ್ 14) ಮಟ.. ಮಟ.. ಮಧ್ಯಾಹ್ನ ನಡೆದಿದೆ. ಹಾಗಾದರೆ ಈ ಹಸು ಯಾರಿಗೆ ಸೇರಿದ್ದು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಸತ್ತೇಗಾಲ ಗ್ರಾಮದ ಕಲ್ಯಾಣಿ ಬಸವೇಶ್ವರ ದೇವಸ್ಥಾನದ ಸಮೀಪದಲ್ಲಿ ಬುಧವಾರ ಮಧ್ಯಾಹ್ನ ಚಿರತೆ ದಿಢೀರ್ ಹಸುವಿನ ಮೇಲೆ ದಾಳಿ ಮಾಡಿ ಹಸುವನ್ನು ಕೊಂದಿದೆ.

ಗ್ರಾಮದ ನಂಜುಂಡಸ್ವಾಮಿ ಎಂಬುವರಿಗೆ ಸೇರಿದ ಹಸು ಇದಾಗಿದ್ದು, ರೈತನ ಎದುರೇ ಮಧ್ಯಾಹ್ನ ನಡು ರಸ್ತೆಯಲ್ಲಿ ಚಿರತೆ ದಿಢೀರ್ ಹಸುವಿನ ಕುತ್ತಿಗೆಯನ್ನು ಹಿಡಿದು ರಕ್ತ ಕುಡಿಯುತ್ತಿತ್ತು. ಇದನ್ನು ಕಂಡ ರೈತರು ಜೋರಾಗಿ ಕೂಗಿ ದೊಣ್ಣೆಯನ್ನು ಎತ್ತಿಕೊಂಡು ಚಿರತೆಯ ಬಳಿ ಓಡಿ ಹೋದಾಗ ಗಾಬರಿಗೊಂಡ ಚಿರತೆ ಹಸುವಿನ ಕುತ್ತಿಗೆಯನ್ನು ಬಿಟ್ಟು ಜಮೀನ ಕಡೆ ಓಡಿಹೋಯಿತು.
"ನಮ್ಮ ಹಸು ಸಾವಿಗೆ ಅರಣ್ಯ ಇಲಾಖೆಯವರೇ ಕಾರಣ. ಚಿರತೆ ಇದೆ ಎಂದು ಎಷ್ಟೇ ಮಾಹಿತಿ ನೀಡಿದರೂ ಸಹ ಯಾರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಅನಾಹುತ ಆದರೆ ಅರಣ್ಯ ಇಲಾಖೆಯವರೇ ನೇರ ಹೊಣೆಗಾರರಾಗುತ್ತಾರೆ," ಎಂದು ರೈತ ಮುಖಂಡ ಶೈಲೇಂದ್ರ, ಭಾಸ್ಕರ್ ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಅಕ್ಕಪಕ್ಕದ ಪ್ರದೇಶದಲ್ಲಿ ಬೋನನ್ನು ಇಟ್ಟಿದ್ದಾರೆ. ರಾತ್ರಿಯಿಡೀ ಚಿರತೆಗಾಗಿ ಕಾಯುತ್ತೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಜರಾಜನ ಹಾವಳಿಗೆ ಬೆದರಿದ ಜನ: ಬಂಡೀಪುರ ವ್ಯಾಪ್ತಿಯಲ್ಲಿ ಪ್ರಾಣಿಗಳ ಓಡಾಟದ ದೃಶ್ಯ ಪ್ರವಾಸಿಗರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿ, ಅವುಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆದ ಘಟನೆಗಳು ನಡೆದಿವೆ. ಇನ್ನು ಅಗಸ್ಟ್ 12ರಂದು ವಿಶ್ವ ಆನೆ ದಿನವಾಗಿದ್ದು, ಇಂದೇ ರೋಡಿಗಿಳಿದ ಗಜರಾಜ ವಾಹನ ಸವಾರರನ್ನು ಪರದಾಡುವಂತೆ ಮಾಡಿರುವ ಘಟನೆ ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ಆಸನೂರು ಬಳಿ ನಡೆದಿದೆ.
ಕಬ್ಬು ತುಂಬಿದ ಲಾರಿಗಳ ಮೇಲೆ ದಾಳಿ ಮಾಡಲು ರಸ್ತೆಗಿಳಿದ ಆನೆ ಕಬ್ಬು ತಿಂದ ಬಳಿಕ ರಸ್ತೆಯಲ್ಲಿ ಸುತ್ತಾಡಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧ ತಾಸು ಸಂಚಾರ ಅಸ್ತವ್ಯಸ್ತವಾಗಿತ್ತು. ಬಳಿಕ, ವಾಹನಗಳ ಶಬ್ಧದಿಂದ ಅರಣ್ಯಕ್ಕೆ ಆನೆ ತೆರಳಿದ್ದು, ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.












Click it and Unblock the Notifications