ಚಾಮರಾಜನಗರ: ಬರ ಹಿನ್ನೆಲೆ ಹೊರ ರಾಜ್ಯಗಳಿಗೆ ಮೇವು ಮಾರಾಟ, ಸಾಗಾಟ ನಿಷೇಧ, ಕೆರಳಿದ ಕೇರಳಿಗರು
ಚಾಮರಾಜನಗರ, ಡಿಸೆಂಬರ್, 06: ಬರ ಹಿನ್ನೆಲೆ ಚಾಮರಾಜನಗರ ಜಿಲ್ಲಾಧಿಕಾರಿ ಕಳೆದ ನವೆಂಬರ್ 22ರಿಂದ ಅಂತರ ಜಿಲ್ಲೆ ಹಾಗೂ ಅಂತರ ರಾಜ್ಯಕ್ಕೆ ಮೇವು ಮಾರಾಟ, ಸಾಗಾಟ ನಿಷೇಧಿಸಿದ್ದಾರೆ. ಈ ಕ್ರಮ ಖಂಡಿಸಿ ಕೇರಳಿಗರು ಇಂದು ಪ್ರತಿಭಟನೆ ನಡೆಸಿದ್ದಾರೆ.
ಕರ್ನಾಟಕ ಹಾಗೂ ಕೇರಳ ಗಡಿಯಾದ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಗಡಿಯಲ್ಲಿ ಎಲ್‌ಡಿಎಫ್ ಅಧ್ಯಕ್ಷ ಜಯರಾಜನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಸುಲ್ತಾನ್ ಬತ್ತೇರಿಯ ಪೂಂಕುಳಿಯಿಂದ ಗುಂಡ್ಲುಪೇಟೆ ಮೂಲೆಹೊಳೆ ಚೆಕ್ ಪೋಸ್ಟ್‌ವರೆಗೆ ಪಾದಯಾತ್ರೆ ನಡೆಸಿರುವ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಸದಸ್ಯರು, ಹೈನುಗಾರರು ಮೇವು ಸಾಗಾಟ ನಿಷೇಧವನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕದ ಮೇವನ್ನೇ ಕೇರಳ ರೈತರು ಅವಲಂಬಿಸಿದ್ದು, ಮೇವು ಸರಬರಾಜು ಆಗದಿರುವುದರಿಂದ ಹಾಲಿನ ಉತ್ಪಾದನೆ ಕಡಿಮೆಯಾಗುತ್ತಿದೆ. ವೈನಾಡು ಸಂಸದ ರಾಹುಲ್ ಗಾಂಧಿ ಈ ಸಮಸ್ಯೆಯನ್ನ ಇತ್ಯರ್ಥಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬರದಿಂದ ಗಡಿಜಿಲ್ಲೆ ಜನರು ತತ್ತರ
ಬರ ಹಿನ್ನೆಲೆ ಚಾಮರಾಜನಗರದ ಎಲ್ಲಾ ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ನಮ್ಮಲ್ಲಿ ಈಗ 20 ವಾರಗಳಿಗೆ ಬೇಕಾಗುವಷ್ಟು ಮೇವು ಸಂಗ್ರಹವಿದ್ದು, ರೈತರು ಸಾಧ್ಯವಾದಷ್ಟು ಸಂಗ್ರಹ ಮಾಡಿಟ್ಟುಕೊಳ್ಳಬೇಕು. ಈಗಾಗಲೇ 3 ಸಾವಿರ ಮಂದಿ ರೈತರಿಗೆ ಮೇವಿನ ಬೀಜದ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ ಎಂದು ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ.ಹನುಮೇಗೌಡ ಮಾಹಿತಿ ನೀಡಿದ್ದಾರೆ.
ಅಂಬಿಗರಿಂದ ಪ್ರತಿಭಟನೆ
ಪ್ರಸಿದ್ಧ ಪ್ರವಾಸಿ ತಾಣವಾದ ಹನೂರು ತಾಲೂಕಿನ ಹೊಗೆನಕಲ್ ಫಾಲ್ಸ್‌ನಲ್ಲಿ ತೆಪ್ಪ ನಡೆಸಲು ಒಬ್ಬರಿಗೆ 1,200 ರೂಪಾಯಿ ನಿಗದಿ ಮಾಡುವಂತೆ ಒತ್ತಾಯಿಸಿ ಅಂಬಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕರ್ನಾಟಕದ ನಯಾಗರ ಫಾಲ್ಸ್ ಎಂದೇ ಪ್ರಸಿದ್ಧಿ ಪಡೆದಿರುವ ಹೊಗೆನಕಲ್ ಫಾಲ್ಸ್‌ಗೆ ವಾರಾಂತ್ಯದ ರಜಾ ದಿನಗಳು ಹಾಗೂ ಇನ್ನಿತರ ವಿಶೇಷ ದಿನಗಳಲ್ಲಿ ಫಾಲ್ಸ್‌ಗೆ ನೂರಾರು ಸಂಖ್ಯೆಯಲ್ಲಿ ಭೇಟಿ ನೀಡಿ ಫಾಲ್ಸ್ ವೀಕ್ಷಣೆ ಮಾಡುತ್ತಿದ್ದಾರೆ. ಆದರೆ ಹೊಗೆನಕಲ್ ಫಾಲ್ಸ್‌ಗೆ ಬರುವ ಪ್ರವಾಸಿಗರಿಗೆ ಅರಣ್ಯ ಇಲಾಖೆಯವರು ಒಬ್ಬರಿಗೆ 500 ನಿಗದಿ ಮಾಡಿದ್ದರು. ಇದರಲ್ಲಿ ಸರ್ಕಾರಕ್ಕೆ ನೂರು ರೂಪಾಯಿ ಹಾಗೂ ತೆಪ್ಪ ನಡೆಸುವವರಿಗೆ 400 ರೂಪಾಯಿ ನೀಡಲಾಗುತ್ತಿತ್ತು.
ನೂರು ರೂಪಾಯಿಯನ್ನು ಪಡೆಯುವ ಅರಣ್ಯ ಇಲಾಖೆಯವರು ಬರುವಂತಹ ಪ್ರವಾಸಿಗರಿಗೆ ಯಾವುದೇ ವ್ಯವಸ್ಥೆಯನ್ನು ಮಾಡದೆ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಪ್ರವಾಸಿಗರಿಗೆ ಉತ್ತಮ ಶೌಚಾಲಯ ಪಾರ್ಕಿಂಗ್ ವ್ಯವಸ್ಥೆ ಹಾಗೂ ವಿಶ್ರಾಂತಿ ಪಡೆಯಲು ಯಾವುದೇ ವ್ಯವಸ್ಥೆ ಇಲ್ಲದೆ ಇರುವುದರಿಂದ ತೊಂದರೆಯಾಗುತ್ತಿದೆ. ಅರಣ್ಯ ಇಲಾಖೆಯವರು ಪಡೆಯುವ ನೂರು ರೂಪಾಯಿಯಲ್ಲಿ ಅಭಿವೃದ್ಧಿ ಮಾಡುತ್ತಿಲ್ಲ. ನಮಗೂ 400 ರೂಪಾಯಿ ಸಾಲುತ್ತಿಲ್ಲ ಎಂದು ತೆಪ್ಪ ನಡೆಸುವವರು ಆಕ್ರೋಶ ಹೊರಹಾಕಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದಿನನಿತ್ಯದ ಆಹಾರ ಪದಾರ್ಥಗಳ ಬೆಲೆ, ಪೆಟ್ರೋಲ್ ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಯಾಗಿರುವುದರಿಂದ ಜೀವನ ನಡೆಸಲು ಕಷ್ಟವಾಗುತ್ತಿದೆ. ನೆರೆಯ ತಮಿಳುನಾಡು ರಾಜ್ಯದವರು ತೆಪ್ಪ ನಡೆಸುವವರಿಗೆ 1,700 ನಿಗದಿ ಮಾಡಿದ್ದಾರೆ. ಅದರಂತೆ ಕರ್ನಾಟಕದಲ್ಲಿಯೂ 1,200 ರೂಪಾಯಿ ನಿಗದಿ ಮಾಡಬೇಕೆಂದು ಹಲವು ದಿನಗಳಿಂದ ಬೇಡಿಕೆ ಇಟ್ಟಿದ್ದರು. ಇವರ ಬೇಡಿಕೆ ಈಡೇರಿಸದೆ ಇರುವುದರಿಂದ ಅಂಬಿಗರು ಈ ಪ್ರತಿಭಟನೆ ಕೈಗೊಂಡಿದ್ದಾರೆ.
ಇನ್ನು, ಅಂಬಿಗರು ಮುಷ್ಕರ ಮಾಡುತ್ತಿರುವುದರಿಂದ ಹೊಗೆನಕಲ್ ಜಲಪಾತಕ್ಕೆ ತೆರಳಲು ಪ್ರವಾಸಿಗರಿಗೆ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ನಿರ್ಬಂಧ ಹೇರಿದ್ದಾರೆ. ಹೊಗೇನಕಲ್ ಫಾಲ್ಸ್‌ನಲ್ಲಿ ತೆಪ್ಪ ನಡೆಸುವವರಿಗೆ 800 ರೂಪಾಯಿ ನಿಗದಿ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಅನುಮೋದನೆ ನೀಡಿದ ನಂತರ ದರ ಹೆಚ್ಚಳ ಮಾಡಲಾಗುವುದು ಎಂದು ಅರಣ್ಯಾಧಿಕಾರಿ ಅಂಕರಾಜು ಮಾಹಿತಿ ನೀಡಿದ್ದಾರೆ.












Click it and Unblock the Notifications