ವಿ.ಸೋಮಣ್ಣಗೆ ಚಾಮರಾಜನಗರ ಮತ್ತು ವರುಣ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಘೋಷಣೆ: ಗುರು-ಶಿಷ್ಯರ ನಡುವೆ ಕಾದಾಟ
ಚಾಮರಾಜನಗರ, ಏಪ್ರಿಲ್, 12: ರಾಜ್ಯ ವಿಧಾನಸಭೆ ಚುನಾವಣ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಮತ್ತೊಂದೆಡೆ ಎಲ್ಲಾ ಕ್ಷೇತ್ರಗಳಲ್ಲೂ ರಾಜಕೀಯ ನಾಯಕರು ಗೆಲುವಿಗಾಗಿ ತೀವ್ರ ಕಸರತ್ತನ್ನು ನಡೆಸುತ್ತಿದ್ದಾರೆ. ಇದೀಗ ಬಿಜೆಪಿ ಅಭ್ಯರ್ಥಿಗಳ ಮೊದಲನೇ ಪಟ್ಟಿ ಬಿಡುಗಡೆಯಾಗಿದ್ದು, ಇದು ಚುನಾವಣೆ ಕಣವನ್ನು ಮತ್ತಷ್ಟು ರಂಗೇರುವಂತೆ ಮಾಡಿದೆ. ಹಾಗೆಯೇ ಎರಡು ಕ್ಷೇತ್ರಗಳ ಟಿಕೆಟ್ ಪಡೆದು ಡಬಲ್ ಹೊಣೆ ಹೊತ್ತಿರುವ ವಿ.ಸೋಮಣ್ಣ ಈ ಬಾರಿ ಚುನಾವಣೆಯಲ್ಲಿ ಗುರು-ಶಿಷ್ಯರ ನಡುವೆ ಕಾದಾಡಲಿದ್ದಾರೆ. ಹಾಗಾದರೆ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ.
ಹೀಗೆ ವಿ.ಸೋಮಣ್ಣ ಅವರವನ್ನು ಬಿಜೆಪಿ ಎರಡು ಕ್ಷೇತ್ರದಲ್ಲಿ ಅಖಾಡಕ್ಕಿಳಿಸಿದ್ದು, ಈ ಹಿನ್ನೆಲೆ ಇಲ್ಲಿ ವಿಧಾನಸಭಾ ರಣಕಣ ತೀವ್ರ ಕುತೂಹಲ ಕೆರಳಿಸಿದೆ. ವರುಣದಲ್ಲಿ ಸಿದ್ದರಾಮಯ್ಯ ವಿರುದ್ದ ಸ್ಪರ್ಧೆ ಮಾಡುವುದರ ಜೊತೆಗೆ ಚಾಮರಾಜನಗರದಲ್ಲಿ ಸಿದ್ದರಾಮಯ್ಯ ಕಟ್ಟಾ ಅನುಯಾಯಿ ಸಿ.ಪುಟ್ಟರಂಗಶೆಟ್ಟಿ ವಿರುದ್ಧವೂ ಹಣಾಹಣಿ ಏರ್ಪಡಲಿದೆ. ಎರಡೂ ಕೂಡ ಲಿಂಗಾಯತ ಪ್ರಾಬಲ್ಯ ಕ್ಷೇತ್ರಗಳಾಗಿದ್ದು, ಇಲ್ಲಿ ಮತ ಬ್ಯಾಂಕ್ ನಂಬಿ ಬಿಜೆಪಿ ಗೆಲುವಿನ ಲೆಕ್ಕಾಚಾರ ಹಾಕಿದೆ.

ರುದ್ರೇಶ್ ಸೇರಿದಂತೆ 12 ಮಂದಿ ಆಕಾಂಕ್ಷಿಗಳಿದ್ದರು
ಚಾಮರಾಜನಗರದಲ್ಲಿ ನಾಗಶ್ರೀ ಪ್ರತಾಪ್, ಎಂ.ರಾಮಚಂದ್ರು, ವಿಜಯೇಂದ್ರ ಆಪ್ತ ರುದ್ರೇಶ್ ಸೇರಿದಂತೆ 12 ಮಂದಿ ಆಕಾಂಕ್ಷಿಗಳಿದ್ದರು. ಕ್ಷೇತ್ರದಲ್ಲಿ ತುಂಬಾ ಬೆಳವಣಿಗೆ ಆಗಿದ್ದು, ಸೋಮಣ್ಣ ಕಣಕ್ಕಿಳಿಯುತ್ತಿದ್ದಾರೆ. ಮತ್ತೊಂದೆಡೆ ಆಕಾಂಕ್ಷಿಗಳ ಬೆಂಬಲಿಗರು ವಿ.ಸೋಮಣ್ಣನವರ ಜೊತೆ ಕೈ ಜೋಡಿಸುತ್ತಾರಾ ಇಲ್ಲವೇ ಕೈ ಕೊಡುತ್ತಾರೆ ಅನ್ನುವುದನ್ನು ಕಾದುನೋಡಬೇಕಿದೆ.
ಚಾಮರಾಜನಗರ ಜಿಲ್ಲೆಯಿಂದ ಸ್ಪರ್ಧಿಸಬೇಕೆಂಬ ವಸತಿ ಸಚಿವ ವಿ. ಸೋಮಣ್ಣ ಅವರ ಬಹುಕಾಲದ ಕನಸು ನನಸಾಗಿದ್ದು, ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರ ಬಿಟ್ಟುಕೊಟ್ಟು, ಗಡಿ ಚಾಮರಾಜನಗರ ಜಿಲ್ಲಾ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವರುಣಾ ಮತ್ತು ಚಾಮರಾಜನಗರ ಎರಡು ಕ್ಷೇತ್ರಗಳಿಂದಲೂ ಸ್ಪರ್ಧಿಸಲಿದ್ದಾರೆ.
ಈ ಮೂಲಕ ವಿ.ಸೋಮಣ್ಣನವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹ್ಯಾಟ್ರಿಕ್ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರನ್ನು ಒಮ್ಮೆಗೆ ಎದುರಿಸಲಿದ್ದಾರೆ. ಆದ್ದರಿಂದ ಸೋಮಣ್ಣ ಅವರಿಗೆ ಈ ಎರಡು ಕ್ಷೇತ್ರಗಳು ಪ್ರತಿಷ್ಠೆಯ ಕಣಗಳಾಗಿವೆ.

ನಿರಂಜನ್ ಕುಮಾರ್‌ಗೆ ಒಲಿದ ಟಿಕೆಟ್
ಇನ್ಮು, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಹಾಲಿ ಬಿಜೆಪಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಮತ್ತು ಚಾಮುಲ್ ನಿರ್ದೇಶಕ ಎಂ.ಪಿ. ಸುನೀಲ್ ಟಿಕೆಟ್‌ಗಾಗಿ ಫೈಟ್ ನಡೆಸಿದ್ದರು. ಆದರೆ ಕೊನೆಗೆ ನಿರಂಜನ್‌ಕುಮಾರ್ ಅವರಿಗೆ 5ನೇ ಬಾರಿಗೆ ಟಿಕೆಟ್ ಒಲಿದಿದೆ. ಇನ್ನು ಕೊಳ್ಳೇಗಾಲದಿಂದ ಹಾಲಿ ಶಾಸಕ ಎನ್.ಮಹೇಶ್ ಮತ್ತು ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕಿನಕಹಳ್ಳಿ ರಾಚಯ್ಯ ನಡುವೆ ಟಿಕೆಟ್ ಬಯಸಿದ್ದರು.
ಕಳೆದ ಬಾರಿ ಬಿಎಸ್ಪಿಯಿಂದ ಆಯ್ಕೆಯಾಗಿ ಬಿಜೆಪಿ ಸೇರಿದ್ದ ಎನ್.ಮಹೇಶ್ ಅವರಿಗೆ ಟಿಕೆಟ್ ನೀಡಲಾಗಿದೆ. ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಅವರು ಚುನಾವಣೆ ಘೋಷಣೆ ಆಗುವ ಮುನ್ನವೇ ಕಾಂಗ್ರೆಸ್ ಸೇರ್ಪಡೆ ಆಗಿದ್ದರಿಂದ, ಮಹೇಶ್ ಟಿಕೆಟ್ ಘೋಷಣೆಗೂ ಮುನ್ನ ಪ್ರಚಾರ ಆರಂಭಿಸಿದ್ದರು.
ನಾಗಪ್ಪ ಕುಟುಂಬಕ್ಕೆ ಹೈಕಮಾಂಡ್ ಮಣೆ
ಹಾಗೆಯೇ ಹನೂರಿನಿಂದ ಮಾಜಿ ಸಚಿವ ಎಚ್.ನಾಗಪ್ಪ ಮತ್ತು ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರ ಪುತ್ರ ಡಾ. ಪ್ರೀತನ್ ಅವರಿಗೆ ಎರಡನೇ ಬಾರಿಗೆ ಬಿಜೆಪಿ ಟಿಕೆಟ್ ಒಲಿದಿದೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಕಡಿಮೆ ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು. ಅಲ್ಲದೇ ಡಾ.ಪ್ರೀತನ್, ಡಾ. ದತ್ತೇಶ್ ಕುಮಾರ್, ಜನದ್ವನಿ ಬಿ. ವೆಂಕಟೇಶ್ ಮತ್ತು ನಿಶಾಂತ್ ಟಿಕೆಟ್ ಬಯಸಿದ್ದರೂ, ಎರಡನೇ ಬಾರಿಗೆ ಡಾ.ಪ್ರೀತನ್‌ಗೆ ಟಿಕೆಟ್ ಸಿಕ್ಕಿದೆ.
ಹನೂರು ಕ್ಷೇತ್ರದ ಇಷ್ಟು ಚುನಾವಣೆಗಳಲ್ಲೂ ನಾಗಪ್ಪ ಹಾಗೂ ರಾಜೂಗೌಡ ಕುಟುಂಬದ ನಡುವೆಯೇ ಫೈಟ್ ನಡೆದಿದ್ದು, ಇದು ಈ ಬಾರಿಯೂ ಮುಂದುವರೆಯಲಿದೆ.












Click it and Unblock the Notifications