ಬಂಡೀಪುರ ಕೇರಳಿಗರಿಗೆ ಕಸದ ತೊಟ್ಟಿಯೇ?
ಚಾಮರಾಜನಗರ, ಆಗಸ್ಟ್ 1: ಕೇರಳದಿಂದ ತ್ಯಾಜ್ಯವನ್ನು ತಂದು ಕರ್ನಾಟಕದ ರಸ್ತೆ ಬದಿ, ನಿರ್ಜನ ಪ್ರದೇಶ, ರೈತರ ಜಮೀನುಗಳ ಪಕ್ಕದಲ್ಲಿ ಸುರಿದು ಹೋಗುವುದು ಹೊಸತೇನಲ್ಲ. ಚಾಣಾಕ್ಷತನ ತೋರುವ ಕೇರಳಿಗರು ಈಗಾಗಲೇ ಕೊಡಗು, ಚಾಮರಾಜನಗರ, ಮೈಸೂರು ವ್ಯಾಪ್ತಿಯಲ್ಲಿ ಈ ಹಿಂದಿನಿಂದಲೂ ಕಸ ಸುರಿಯುವ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಈ ಸಂಬಂಧ ಹಲವು ಬಾರಿ ಸಿಕ್ಕಿ ಬಿದ್ದಿದ್ದಾರೆ. ಆದರೂ ಕರ್ನಾಟಕದೊಳಗೆ ಬರುವ ತ್ಯಾಜ್ಯವನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎನ್ನುವುದೇ ಅಚ್ಚರಿಗೆ ಕಾರಣವಾಗಿದೆ.
ಕಳೆದ ಹಲವು ಸಮಯಗಳಿಂದ ಕಸ ಸುರಿಯುವ ಪ್ರಕರಣಗಳು ಕಂಡು ಬಂದಿರಲಿಲ್ಲ. ಇದೀಗ ಮತ್ತೆ ಬಂಡೀಪುರ ಹುಲಿ ಯೋಜನೆ ವ್ಯಾಪ್ತಿಯ ಹೆದ್ದಾರಿ ಬದಿಯಲ್ಲಿ ಕಸ, ತ್ಯಾಜ್ಯಗಳನ್ನು ಸುರಿಯುವ ಕೆಲಸಕ್ಕೆ ಮುಂದಾಗಿರುವುದು ಪರಿಸರ ಪ್ರೇಮಿಗಳನ್ನು ಕೆರಳಿಸುವಂತೆ ಮಾಡಿದೆ.

ಕೇರಳ ರಾಜ್ಯಕ್ಕೆ ಹಾದುಹೋಗುವ ಮದ್ದೂರು ಹಾಗೂ ಮೂಲೆಹೊಳೆ ಅರಣ್ಯಪ್ರದೇಶದಲ್ಲಿ ಸುಮಾರು 20 ಕಿಲೋಮೀಟರ್ ಉದ್ದಕ್ಕೂ ಯಾವುದೇ ಕಣ್ಗಾವಲು ವ್ಯವಸ್ಥೆಗಳಿಲ್ಲದ ಕಾರಣದಿಂದ ಇಂತಹ ಘಟನೆಗಳು ನಡೆಯುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಈ ವ್ಯಾಪ್ತಿಯಲ್ಲಿ ಕಸ ಸುರಿಯುವುದು, ಪ್ಲಾಸ್ಟಿಕ್ ಬಾಟಲಿ ಎಸೆಯುವುದು, ವಾಹನಗಳನ್ನು ವೇಗವಾಗಿ ಓಡಿಸುವುದು, ವಾಹನ ನಿಲ್ಲಿಸಿ ಪಾರ್ಟಿ ಮಾಡುವುದು ಹೀಗೆ ಹಲವರು ಕಿರಿಕಿರಿ ಮಾಡುತ್ತಲೇ ಇರುತ್ತಾರೆ. ಇದು ಸ್ವಚ್ಛಂದವಾಗಿ ಓಡಾಡುವ ಪ್ರಾಣಿಗಳ ಮೇಲೆ ಭಾರೀ ಪರಿಣಾಮ ಬೀರುತ್ತಿದೆ.
ಈ ಹಿಂದೆ ಕಸಾಯಿಖಾನೆಗಳಿಂದ ಪ್ರಾಣಿಗಳ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿತ್ತು. ಅದನ್ನು ಈಗ ತಡೆಯಲಾಗಿದೆ. ಆದರೂ ಕಲ್ಲಂಗಡಿ, ಹುಲ್ಲುಗಳು, ಹೀಗೆ ಸಿಕ್ಕ ಸಿಕ್ಕ ವಸ್ತುಗಳನ್ನು ರಸ್ತೆ ಬದಿಯಲ್ಲಿ ಸುರಿಯುತ್ತಿರುವುದು ಕಂಡು ಬಂದಿದೆ.

ಹಣ್ಣು ತರಕಾರಿಗಳ ತ್ಯಾಜ್ಯವನ್ನು ರಸ್ತೆ ಬದಿ ಸುರಿಯುವುದರಿಂದ ಅದನ್ನು ತಿನ್ನಲು ಬಂದು ಕೋತಿ, ಜಿಂಕೆಯಂತಹ ಪ್ರಾಣಿಗಳು ವಾಹನಗಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿವೆ. ಇನ್ನು ಈ ತ್ಯಾಜ್ಯಗಳನ್ನು ತಿಂದರೆ ಪ್ರಾಣಿಗಳ ಜೀವಕ್ಕೆ ಆಪತ್ತು ಎದುರಾಗುವ ಸಾಧ್ಯತೆಯೂ ಇಲ್ಲದಿಲ್ಲ. ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಹೆಚ್ಚಾಗಿರುವ ಕಾರಣದಿಂದಾಗಿ ಎಲ್ಲಡೆ ಗಸ್ತು ತಿರುಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಲ್ಲಿ ಒಂದಲ್ಲ ಒಂದು ರೀತಿಯ ಕಿರಿಕಿರಿ ಇದ್ದೇ ಇರುತ್ತದೆ.
ಈ ನಡುವೆ ಕೇರಳದ ಕಸಾಯಿಖಾನೆಗಳಿಗೆ ಜಾನುವಾರುಗಳನ್ನು ವಾಹನಗಳಲ್ಲಿ ತುಂಬಿ ಕಳ್ಳಸಾಗಾಣಿಕೆ ಮಾಡುತ್ತಿದ್ದು, ಮೇಲ್ನೋಟಕ್ಕೆ ಹಣ್ಣು, ಹುಲ್ಲು ಸಾಗಾಟ ಮಾಡುತ್ತಿರುವಂತೆ ತೋರಿಸಲಾಗುತ್ತದೆ. ಜಾನುವಾರುಗಳು ಉಸಿರುಗಟ್ಟಿ ಸತ್ತರೆ ರಸ್ತೆ ಬದಿಯಲ್ಲಿ ಎಸೆದು ಹೋಗುತ್ತಾರೆ. ಇನ್ನು ಕೊಳೆತ ಹಣ್ಣು, ತರಕಾರಿಗಳನ್ನು ಕೂಡ ಹೀಗೆಯೇ ಎಸೆದು ಹೋಗುವುದು ಮಾಮೂಲಾಗಿದೆ.
ಇನ್ನಾದರೂ ಅರಣ್ಯ ಇಲಾಖೆ ಈ ವ್ಯಾಪ್ತಿಯಲ್ಲಿ ಹೆಚ್ಚಿನ ನಿಗಾ ವಹಿಸಿ ಕೇರಳದಿಂದ ಕರ್ನಾಟಕದತ್ತ ಬರುವ ವಾಹನಗಳ ಮೇಲೆ ನಿಗಾ ವಹಿಸಬೇಕಿದೆ. ಇಲ್ಲದೆ ಹೋದರೆ ವನ್ಯಪ್ರಾಣಿಗಳಿಗೆ ಅಪಾಯ ತಪ್ಪಿದಲ್ಲ.












Click it and Unblock the Notifications