ಉಪಸಭಾಪತಿ ಹುದ್ದೆ ಸ್ವೀಕರಿಸಲು ನಾನ್ ರೆಡಿ: ಸಿ.ಪುಟ್ಟರಂಗಶೆಟ್ಟಿ ಯೂ ಟರ್ನ್ ಆಗಿದ್ದೇಕೆ?, ಇಲ್ಲಿದೆ ಮಾಹಿತಿ
ಚಾಮರಾಜನಗರ, ಜೂನ್, 08: ಕಾಂಗ್ರೆಸ್ ಸರ್ಕಾರದ ಸಂಪುಟ ರಚನೆ ವೇಳೆ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿಗೆ ಉಪಸಭಾಪತಿ ಸ್ಥಾನ ನೀಡಲಾಗಿತ್ತು. ಈ ವೇಳೆ ಅವರು ನನಗೆ ಇದನ್ನು ನಿಭಾಯಿಸಲು ಕಷ್ಟ ಆಗುತ್ತದೆ. ಅದ್ದರಿಂದ ಈ ಸ್ಥಾನವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಪುಟ್ಟರಂಗಶೆಟ್ಟಿ ತಿಳಿಸಿದ್ದರು. ಆದರೆ ಇದೀಗ ಅವರು ಯೂ ಟರ್ನ್ ಹೊಡೆದಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಪುಟ್ಟರಂಗಶೆಟ್ಟಿ ಅವರು. ನಾನು ಉಪಸಭಾಪತಿ ಸ್ಥಾನವನ್ನು ಒಪ್ಪಿಕೊಂಡಿದ್ದೇನೆ. ಒಂದು ವರ್ಷದ ನಂತರ ಕಾಂಗ್ರೆಸ್ ವರಿಷ್ಠರು ಸಚಿವ ಸ್ಥಾನ ಕೊಡುವ ಬಗ್ಗೆ ಮಾತು ಕೊಟ್ಟಿದ್ದಾರೆ. ಹಾಗಾಗಿ ಈ ಸ್ಥಾನವನ್ನು ಒಪ್ಪಿಕೊಂಡಿದ್ದೇನೆ. ನಾನು ಕಾಂಗ್ರೆಸ್ ಪಕ್ಷದ ಕಟ್ಟಾಳಾಗಿದ್ದು, ವರಿಷ್ಠರು ಹೇಳಿದ್ದನ್ನು ಒಪ್ಪೊಕೊಳ್ಳಲೇಬೇಕು ಎಂದರು.

ಸಚಿವ ಸ್ಥಾನ ತಪ್ಪಿದ್ದರಿಂದ ಬೇಸರ ಆದರೂ ಅದನ್ನು ಹೇಳಿಕೊಳ್ಳಲು ಆಗುವುದಿಲ್ಲ. ಹೈಕಮಾಂಡ್ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸ್ತೇನೆ. ಒಂದು ವರ್ಷ ಕೆಲಸ ಮಾಡು, ನಂತರ ಸಚಿವ ಸ್ಥಾನ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಕೂಡ ತಿಳಿಸಿದ್ದಾರೆ ಎಂದರು.
ಉಪಸಭಾಪತಿ ಹುದ್ದೆ ತಿರಸ್ಕರಿಸಿದ್ದ ಪುಟ್ಟರಂಗಶೆಟ್ಟಿ
ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಸಂಪುದಲ್ಲಿ ಸಚಿವರಾಗಿ 24 ಜನ ಪ್ರಮಾಣ ವಚನ ಸ್ವೀಕರಿಸಿದ್ದು, ಮತ್ತೊಂದೆದೆ ಸಚಿವ ಸ್ಥಾನ ಸಿಗದಿದ್ದಕ್ಕೆ ಕಾಂಗ್ರೆಸ್‌ನಲ್ಲಿ ಹಲವರು ಮುನಿಸಿಕೊಂಡಿದ್ದರು. ಆಗ ಅಸಮಾಧಾನಗೊಂಡಿದ್ದ ಸಿ.ಪುಟ್ಟರಂಗಶೆಟ್ಟಿಗೆ ಉಪಸಭಾಧ್ಯಕ್ಷ ಹುದ್ದೆಯನ್ನು ನೀಡಲಾಗಿತ್ತು. ಆದರೆ ಅವರು ನನಗೆ ಈ ಹುದ್ದೆ ಬೇಡ ಎಂದು ತಿಸ್ಕರಿಸಿದ್ದರು.
ಡೆಪ್ಯುಟಿ ಸ್ಪೀಕರ್ ಸ್ಥಾನ ನನಗೆ ಬೇಡ, ಶಾಸಕನಾಗಿಯೇ ಮುಂದುವರಿಯುತ್ತೇನೆ ಎನ್ನುವ ಮೂಲಕ ಶಾಸಕ ಸಿ.ಪುಟ್ಟರಂಗಶೆಟ್ಟಿ ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ತಿರಸ್ಕರಿಸಿದ್ದರು.
ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಶಾಸಕ ಪುಟ್ಟರಂಗಶೆಟ್ಟಿ, ಈ ಮೊದಲು ನನಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಕೈ ತಪ್ಪಿದೆ. ಇದಕ್ಕೆ ಕಾರಣ ಏನೆಂದು ಗೊತ್ತಿಲ್ಲ. ಸಚಿವ ಸ್ಥಾನ ನೀಡದ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ಡೆಪ್ಯುಟಿ ಸ್ಪೀಕರ್ ಸ್ಥಾನ ನೀಡಿದೆ. ಆ ಹುದ್ದೆ ನನಗೆ ಬೇಡ. ಡೆಪ್ಯುಟಿ ಸ್ಪೀಕರ್ ಸ್ಥಾನ ಕಾರ್ಯಭಾರದ ಒತ್ತಡದಿಂದ ಕ್ಷೇತ್ರದ ಕೆಲಸ ಮಾಡಲು ಕಷ್ಟವಾಗುತ್ತದೆ ಎಂದಿದ್ದರು.
ಡೆಪ್ಯುಟಿ ಸ್ಪೀಕರ್ ಆದರೆ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಲು ಆಗುವುದಿಲ್ಲ. ಆದ್ದರಿಂದ ಡೆಪ್ಯುಟಿ ಸ್ಪೀಕರ್ ಸ್ಥಾನ ಬೇಡ ಎಂಬುದು ಕ್ಷೇತ್ರದ ಮತದಾರರು ಹಾಗೂ ಬೆಂಬಲಿಗರ ಒತ್ತಾಯ ಆಗಿದೆ. ನಾನು ಉಪ್ಪಾರ ಸಮಾಜದ ಏಕೈಕ ಶಾಸಕ. ಯಾವಾಗಲೂ ಜನರ ಜೊತೆ ಬೆರೆತು ಕೆಲಸ ಮಾಡುವವನು ಆಗಿದ್ದೇನೆ. ಡೆಪ್ಯುಟಿ ಸ್ಪೀಕರ್ ಸ್ಥಾನ ಒಪ್ಪಿಕೊಳ್ಳುವಂತೆ ಸಿದ್ದರಾಮಯ್ಯ ಹಾಗೂ ಜಮೀರ್ ಅಹಮ್ಮದ್ ನನಗೆ ಒತ್ತಾಯಿಸಿದ್ದರು. ಆದರೆ ನಾನು ನಯವಾಗಿಯೇ ಆ ಹುದ್ದೆಯನ್ನು ತಿರಸ್ಕರಿಸಿದ್ದೆ ಎಂದು ತಿಳಿಸಿದ್ದರು.












Click it and Unblock the Notifications