ನಾನು ಡೈರೆಕ್ಟ್ ರಾಜಕಾರಣಿ, ಕಾಂಗ್ರೆಸ್ ಸೇರ್ಪಡೆ ವಿಚಾರ ಮುಗಿದುಹೋದ ಅಧ್ಯಾಯ: ಸೋಮಣ್ಣ ಸ್ಪಷ್ಟನೆ
ವಿ.ಸೋಮಣ್ಣ ಕಾಂಗ್ರೆಸ್‌ಗೆ ಸೇರುತ್ತಾರೆ ಎನ್ನುವ ಪೋಸ್ಟ್ ಹರಿದಾಡುತ್ತಿತ್ತು. ಇದಕ್ಕೆ ಇಂದು ಸೋಮಣ್ಣ ಸ್ಪಷ್ಟನೆ ನೀಡಿದ್ದು, ನಾನು ಡೈರೆಕ್ಟ್ ರಾಜಕಾರಣಿ, ಅವೆಲ್ಲಾ ಮುಗಿದ ಅಧ್ಯಾಯ ಎಂದು ಹೇಳಿದ್ದಾರೆ.
ಚಾಮರಾಜನಗರ, ಮಾರ್ಚ್, 20: ಮಾರ್ಚ್ 27ಕ್ಕೆ ವಿ.ಸೋಮಣ್ಣ ಕಾಂಗ್ರೆಸ್‌ಗೆ ಸೇರುತ್ತಾರೆ ಎನ್ನುವ ಪೋಸ್ಟ್ ಹರಿದಾಡುತ್ತಿತ್ತು. ಇದಕ್ಕೆ ಇಂದು ಸೋಮಣ್ಣ ಸ್ಪಷ್ಟನೆ ನೀಡಿದ್ದು, ನಾನು ಡೈರೆಕ್ಟ್ ರಾಜಕಾರಣಿ, ಅವೆಲ್ಲಾ ಮುಗಿದ ಅಧ್ಯಾಯ ಎಂದು ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ತಿಂಗಳಿನಿಂದ ನನ್ನನ್ನು ಉಜ್ಜುತ್ತಿದ್ದೀರಾ, ಇನ್ನು ಎಷ್ಟು ಬೇಕಾದರೂ ಹಾಕಿಕೊಳ್ಳಿ. ಅವೆಲ್ಲಾ ನನ್ನ ತಲೆಯಲ್ಲೇ ಇಲ್ಲಾ, ನಾನೋರ್ವ ಡೈರೆಕ್ಟ್ ರಾಜಕಾರಣಿ. ನೇರವಾಗಿ ಮಾತನಾಡುತ್ತೇನೆ. ಈಗಾಗಲೇ ಅದರ ಬಗ್ಗೆ ಹೇಳುವುದನ್ನೆಲ್ಲಾ ಹೇಳಿದ್ದೇನೆ. ಅವೆಲ್ಲಾ ಮುಗಿದ ಅಧ್ಯಾಯ, ಇನ್ನು ಈ ವಿಚಾರಗಳಿಗೆ ಉತ್ತರಿಸುವುದಿಲ್ಲ ಎಂದರು.

ಹಲವಾರು ಕ್ಷೇತ್ರಗಳ ಪರಿಚಯ ಇದೆ
ಇನ್ನು ಚಾಮರಾಜನಗರ ಜಿಲ್ಲೆಯಲ್ಲಿ ಸ್ಪರ್ಧೆ ಮಾಡುವಿರಾ ಎಂಬ ಪ್ರಶ್ನೆಗೆ ಉತ್ತರಿಸಿ, ರಾಜ್ಯದ 224 ಕ್ಷೇತ್ರಗಳಲ್ಲಿ ಸೋಮಣ್ಣಗೆ ಹಲವಾರು ಕ್ಷೇತ್ರಗಳ ಪರಿಚಯ ಇದೆ. ಚಿಕ್ಕಂದಿನಿಂದಲೂ ಚಾಮರಾಜನಗರದ ಬಗ್ಗೆ ವಿಶೇಷ ಪ್ರೀತಿ ಅಷ್ಟೇ, ಎಲ್ಲವೂ ಪಾರ್ಟಿಯ ತೀರ್ಮಾನ ಎಂದರು.
ಹಾಗೆಯೇ ಕೊಳ್ಳೇಗಾಲದಲ್ಲಿ ಕಳೆದ ಐದೂವರೆ ವರ್ಷಗಳಿಂದ ನಡೆಯುತ್ತಿದ್ದ ಹೈಟೆಕ್ ಬಸ್ ನಿಲ್ದಾಣವನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉದ್ಘಾಟನೆ ಮಾಡಿದ್ದಾರೆ. ಕಾಮಗಾರಿ ಅಪೂರ್ಣವಾಗಿದ್ದರೂ ಉದ್ಘಾಟನೆ ಮಾಡಿದ್ದಾರೆ ಎನ್ನುವುದು ನಗರಸಭೆ ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ಇನ್ನಿತರ ಸದಸ್ಯರ ಆರೋಪವಾಗಿದೆ.

ಗೆಲ್ಲಲೇಬೇಕೆಂಬ ಪಣತೊಟ್ಟ ಬಿಜೆಪಿ
ಬಿಜೆಪಿ ಸರ್ಕಾರ ಹಳೇ ಮೈಸೂರು ಪ್ರಾಂತ್ಯದ ಮೇಲೆ ಕಣ್ಣಿಟ್ಟಿದ್ದು, ಈ ಬಾರಿ ಇಲ್ಲಿ ಶತಾಯಗತಾಯ ಹೆಚ್ಚಿನ ಸ್ಧಾನ ಗೆಲ್ಲಲೇಬೇಕು ಎನ್ನುವ ಪಣತೊಟ್ಟು ನಿಂತಿದೆ. ಆದರೆ, ಈವರಗೆ ಮಾಡಿದ ತಂತ್ರಗಳು ಕೈ ಹಿಡಿದಿಲ್ಲ. ಹಾಗೆಯೇ ಸಾರಥ್ಯ ವಹಿಸಿಕೊಳ್ಳಲು ಯಾವ ನಾಯಕರು ಮುಂದೆಬರುತ್ತಿಲ್ಲ.
ಇದೀಗ ಬಿಜೆಪಿಯೊಂದಿಗಿನ ವಸತಿ ಸಚಿವ ವಿ. ಸೋಮಣ್ಣ ಅವರ ಮುನಿಸು ಶಮನವಾಗಿದ್ದು, ಹಳೇ ಮೈಸೂರು ಪ್ರಾಂತ್ಯದಲ್ಲಿ, ಅದರಲ್ಲೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅವರಿಗೆ ಉಸ್ತುವಾರಿ ನೀಡಲು ಹೈಕಮಾಂಡ್ ಒಲವು ತೋರಿದೆ. ಬಿಜೆಪಿ ಉನ್ನತ ಮೂಲಗಳ ಪ್ರಕಾರ ಸೋಮಣ್ಣ ಮುನಿಸಿಗೆ ಸಾರಥ್ಯ ವಹಿಸಿಕೊಡುವ ಮುಲಾಮು ಹಚ್ಚಿದೆ ಎನ್ನಲಾಗಿದೆ.
ನಾಲ್ಕು ದಶಕಗಳ ಸುಧೀರ್ಘ ರಾಜಕಾರಣದಲ್ಲಿ ಸೋಮಣ್ಣನವರು ಚಾಮರಾಜನಗರ ಜಿಲ್ಲೆಯೊಂದಿಗೆ ಎರಡು ದಶಕಗಳ ಒಡನಾಟ ಹೊಂದಿದ್ದಾರೆ. ಸೋಮಣ್ಣ ಎರಡು ಬಾರಿ ಚಾಮರಾಜನಗರ, ಒಮ್ಮೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ, ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷದಲ್ಲೂ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದರು. ಈ ಹಿಂದೆ ಚಾಮುಂಡೇಶ್ವರಿ ಮತ್ತು ನಂಜನಗೂಡು ಉಪ ಚುನಾವಣೆಯಲ್ಲೂ ಕೆಲಸ ಮಾಡಿದ್ದಾರೆ. ಆದರೆ, ಈ ಭಾಗದ ಚುನಾವಣಾ ಸಾರಥ್ಯ ಮಾತ್ರ ಸಿಕ್ಕಿರಲಿಲ್ಲ.
ಈ ಭಾಗದಲ್ಲಿ ನಾಯಕತ್ವದ ಕೊರತೆಯಿಂದಾಗಿ ಬಿಜೆಪಿ ಅಲೆ ಇದ್ದ ಕಾಲದಲ್ಲೂ ಒಂದು -ಎರಡು ಸ್ಧಾನಕಷ್ಟೇ ಬಿಜೆಪಿ ತೃಪ್ತಿಪಟ್ಟಿಕೊಳ್ಳುತ್ತಿತ್ತು. ಬಿಜೆಪಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಾಬಲ್ಯವಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಬಾರಿಯ ಹೆಚ್ಚಿನ ಸ್ಧಾನ ಗೆಲ್ಲಲೇಬೇಕು ಎನ್ನವ ಹಠಕ್ಕೆ ಬಿದ್ದಿದೆ.
ಬಿಜೆಪಿ ಹೈಕಮಾಂಡ್‌ನ ನಿಲುವೇನು?
ಈ ಭಾಗದ ಉಸ್ತುವಾರಿ ಸಚಿವರಾಗಿ ಅನುಭವ ಹೊಂದಿರುವ ವಿ. ಸೋಮಣ್ಣನವರಿಗೆ ಸಾರಥ್ಯ ನೀಡಲು ಹೈಕಮಾಂಡ್ ಅಳೆದು ತೂಗಿ ನಿರ್ಧಾರ ಕೈಗೊಂಡಿದೆ. ಇದರೊಟ್ಟಿಗೆ, ಸೋಮಣ್ಣಗೆ ಹಿಡಿತವಿರುವ ಚಾಮರಾಜನಗರ ಭಾಗದಲ್ಲಿ ಸಾರಥ್ಯ ಕೊಟ್ಟಂತೆಯೂ ಆಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.












Click it and Unblock the Notifications