ಹಿಮ ಮಳೆಯ ಗೋಪಾಲಸ್ವಾಮಿ ಬೆಟ್ಟದಲ್ಲಿ ಜಾತ್ರಾ ಸಂಭ್ರಮ: ಇಲ್ಲಿದೆ ಪೂಜಾ ಕೈಂಕಾರ್ಯ ಗಳ ಸಂಪೂರ್ಣ ವಿವರ
ಮಾರ್ಚ್ 16ರಿಂದ ಆರಂಭವಾಗಿರುವ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನ ಜಾತ್ರೆ ಮಾರ್ಚ್21ರಂದು ಸಮಾರೋಪಗೊಳ್ಳಲಿದೆ. ಅಲ್ಲಿಯವರೆಗೆ ಜಾತ್ರೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಬಗ್ಗೆ ಇಲ್ಲಿದೆ ಮಾಹಿತಿ
ಚಾಮರಾಜನಗರ, ಮಾರ್ಚ್ 18: ಹಿಮಮಳೆ ಸುರಿಸುವ ಬೆಟ್ಟವೆಂದೇ ಹೆಸರುವಾಸಿಯಾಗಿರುವ ಪ್ರಕೃತಿ ಸುಂದರ ಪ್ರವಾಸಿ ತಾಣ ಮತ್ತು ಪವಿತ್ರ ಯಾತ್ರಾ ಸ್ಥಳವೂ ಆಗಿರುವ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲೀಗ ಜಾತ್ರಾ ಸಂಭ್ರಮ ಮನೆಮಾಡಿದೆ.
ಆರು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ದೇವರ ವಿವಿಧ ಪೂಜಾ ಕೈಂಕರ್ಯಗಳು ನಡೆದರೂ ರಥೋತ್ಸವ ಬಹು ಮುಖ್ಯ ಮತ್ತು ಆಕರ್ಷಣೀಯವಾಗಿದೆ. ರಥೋತ್ಸವ ಶನಿವಾರ (ಮಾ.18) ನಡೆಯುತ್ತಿದ್ದು ರಥೋತ್ಸವವನ್ನು ಕಣ್ತುಂಬಿಸಿಕೊಳ್ಳಲು ಭಕ್ತರ ದಂಡೇ ನೆರೆದಿದೆ. ಮಾ.16ರಿಂದ ಆರಂಭವಾಗಿರುವ ಜಾತ್ರೆ ಮಾ.21ರಂದು ಸಮಾರೋಪಗೊಳ್ಳಲಿದೆ. ಅಲ್ಲಿಯವರೆಗೆ ಜಾತ್ರೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಕಳೆದ ಎರಡು ವರ್ಷಗಳಿಂದ ಕೋವಿಡ್ ಭಯದಿಂದಾಗಿ ಜಾತ್ರೆಗಳು ಸಂಪ್ರದಾಯಕ್ಕೆ ಸೀಮಿತವಾಗಿದ್ದವು. ಆದರೆ ಈ ಬಾರಿ ಜಾತ್ರೆ ಕಳೆಕಟ್ಟಿದ್ದು, ಸ್ಥಳೀಯರಲ್ಲದೆ ದೂರದೂರುಗಳಿಂದ ಭಕ್ತರು ಆಗಮಿಸಿ ಗೋಪಾಲಸ್ವಾಮಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಮಾರ್ಚ್ 16ರಂದು ಬೆಳಿಗ್ಗೆ ಉತ್ಸವ, ಪಷ್ಪಬಲಿ, ಧ್ವಜಾರೋಹಣ, ಸಂಜೆ ಭೇರಿತಾಡನ ಯಾಗಶಾಲಾ ಪ್ರವೇಶದೊಂದಿಗೆ ಜಾತ್ರೆ ಆರಂಭವಾಗಿದ್ದರೆ ಮಾ. 17ರಂದು ಶ್ರೀಯವರ ಉತ್ಸವ, ಸಂ 4ಗಂಟೆಗೆ ಕಾಶಿಯಾತ್ರಾ ಉತ್ಸವ, ಸಂಬಂಧ ಮಾಲಾಪೂರ್ವಕ ಶ್ರೀ ರುಕ್ಮಿಣಿ ಸತ್ಯಭಾಮ ಸಹಿತ ಶ್ರೀ ಹಿಮವದ್ ಗೋಪಾಲಸ್ವಾಮಿಯವರ ದಿವ್ಯಕಲ್ಯಾಣೋತ್ಸವ ನಡೆದಿದೆ.

ಬ್ರಹ್ಮ ರಥೋತ್ಸವ ಕಾರ್ಯಕ್ರಮಗಳ ವಿವರ
ಇದೀಗ (ಮಾ. 18ರಂದು) ಬೆಳಿಗ್ಗೆ ಡೋಲಾಯಮಾನಂ, ಗೋವಿಂದಂ ಮಂಚಸ್ಥಂ ಮಧುಸೂಧನಂ ರಥಸ್ಥಂ ಕೇಶವಂಷ್ಠ್ವಾಪುನರ್ಜನ್ಮ ನವಿದ್ಯತೇ ಎಂಬ ಮರ್ಯಾದೆಯಂತೆ ಶ್ರೀಯವರ ದಿವ್ಯ ಬ್ರಹ್ಮ ರಥೋತ್ಸವ ನಡೆಯಲಿದ್ದು, ಸಂಜೆ ಶಾಂತ್ಯುತ್ಸವ ಜರುಗಲಿದೆ. ಮಾರ್ಚ್ 19ರಂದು ಬೆಳಿಗ್ಗೆ ಉತ್ಸವ ಕೈಂಕರ್ಯ ಮತ್ತು ಬೆಳ್ಳಿ ಗರುಡೋತ್ಸವ ಸಂಜೆ ಡೋಲೋತ್ಸವ ಶಯನೋತ್ಸವ, 20ರಂದು ಸಂಧಾನ ಲೀಲೋತ್ಸವ, ಅವಭೃತ ಸ್ನಾನ ಸಂಜೆ ಉತ್ಸವ, ಫಣಿಮಾಲಾ ಪ್ರಬಂಧಸೇವೆ, ಪೂರ್ಣಾಹುತಿ, 21ರಂದು ಬೆಳಿಗ್ಗೆ ಮಹಾಭಿಷೇಕ, ಮಹಾಮಂಗಳಾರತಿ, ದ್ವಾದಶಾರಾಧನಾ, ಪುಷ್ಪಯಾಗ ಧ್ವಜಾರೋಹಣ, ಉಧ್ವಾಸನ ಪ್ರಬಂಧ ಸೇವೆ ಸೇತೂ ಸೇವೆ ಮೂಕಬಲಿ ಕಾರ್ಯಕ್ರಮಗಳೊಂದಿಗೆ ಜಾತ್ರೆಗೆ ತೆರೆಬೀಳಲಿದೆ.

ಹಿಮವದ್‌ಗೋಪಾಲಸ್ವಾಮಿ ಬೆಟ್ಟದ ವಿಶೇಷತೆ ಏನು..?
ಜಾತ್ರೆಗೆ ಆಗಮಿಸುವ ಭಕ್ತರಿಗೆ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಮೈದಾನದಿಂದ ಕೆ.ಎಸ್.ಆರ್.ಟಿ.ಸಿ ವಾಹನಗಳ ವ್ಯವಸ್ಥೆ ಮಾಡಿದೆ. ಹೀಗಾಗಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದ್ವಿಚಕ್ರ, ನಾಲ್ಕು ಚಕ್ರ, ಮಿನಿ ವಾಹನ ಮತ್ತು ಇತರೆ ವಾಹನಗಳಲ್ಲಿ ಬರುವ ಭಕ್ತರು ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಮೈದಾನದಲ್ಲಿ ನಿಲುಗಡೆ ಮಾಡಬೇಕು. ನಂತರ ಅಲ್ಲಿಂದ ಕೆ.ಎಸ್.ಆರ್.ಟಿ.ಸಿ ವಾಹನಗಳಲ್ಲಿ ನಿಗದಿಪಡಿಸಿರುವ ದರ ಪಾವತಿಸಿ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ರಥೋತ್ಸವ ಹಾಗೂ ದರ್ಶನಕ್ಕೆ ಹೋಗಿ ಬರಲು ವ್ಯವಸ್ಥೆ ಮಾಡಲಾಗಿದೆ.
ಇನ್ನು ಹಿಮವದ್‌ಗೋಪಾಲಸ್ವಾಮಿ ಬೆಟ್ಟದ ಬಗ್ಗೆ ಹೇಳುವುದಾದರೆ ಇದು ರಾಜ್ಯದ ಅತ್ಯಂತ ಎತ್ತರದ ಬೆಟ್ಟಗಳಲ್ಲಿ ಮೂರನೇ ಬೆಟ್ಟವಾಗಿದೆ. ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯ ಪ್ರದೇಶದಲ್ಲಿದ್ದು, ಸುಮಾರು 1450 ಅಡಿ ಎತ್ತರದ ಈ ಬೆಟ್ಟದಲ್ಲಿ ಶ್ರೀ ಗೋಪಾಲಸ್ವಾಮಿ ನೆಲೆನಿಂತಿದ್ದು, ಸುಂದರ ದೇಗುಲದೊಂದಿಗೆ ಆಸ್ತಿಕರು-ನಾಸ್ತಿಕರನ್ನೆದೆ ಎಲ್ಲರನ್ನೂ ತನ್ನತ್ತ ಸೆಳೆಯುವುದು ವಿಶೇಷವಾಗಿದೆ. ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಈ ಬೆಟ್ಟ ಸದಾ ಮಂಜಿನ ತೆರೆ ಹೊದ್ದು ಮಲಗಿರುತ್ತದೆ. h

ಹಿಮವದ್ ಗೋಪಾಲಸ್ವಾಮಿ ದೇಗುಲದ ಇತಿಹಾಸವೇನು..?
ಗೋಪಾಲಸ್ವಾಮಿ ಬೆಟ್ಟವು ಗುಂಡ್ಲುಪೇಟೆಯಿಂದ ಸುಮಾರು 20 ಕಿ.ಮೀ. ದೂರದಲ್ಲಿದ್ದು, ಕಡಿದಾದ ಅಂಕುಡೊಂಕು ರಸ್ತೆಯಲ್ಲಿ ತೆರಳವುದೇ ಒಂದು ರೋಮಾಂಚನಕಾರಿ ಅನುಭವ. ಅಲ್ಲಲ್ಲಿ ಸಿಗುವ ವ್ಯೂ ಪಾಯಿಂಟ್‌ಗಳಲ್ಲಿ ನಿಂತು ನಿಸರ್ಗ ಸೌಂದರ್ಯವನ್ನು ಸವಿಯುತ್ತಾ ಕಾಡಿನೊಳಗೆ ಅಲೆದಾಡುವ ಪ್ರಾಣಿ, ಹಾರಾಡುವ ಪಕ್ಷಿಗಳನ್ನು ನೋಡುತ್ತಾ ಸಾಗುವುದೇ ಮಜಾವಾಗಿದೆ.
ಇನ್ನು ಹಿಮವದ್ ಗೋಪಾಲಸ್ವಾಮಿ ದೇಗುಲದ ಬಗ್ಗೆ ಹೇಳುವುದಾದರೆ ಇದಕ್ಕೆ ಸುಮಾರು ಏಳು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಇತಿಹಾಸದ ಪ್ರಕಾರ ಹೊಯ್ಸಳ ದೊರೆ ಚೋಳ ಬಲ್ಲಾಳ ಈ ದೇವಾಲಯವನ್ನು ನಿರ್ಮಿಸಿದನೆಂದೂ ಬಳಿಕ ಮೈಸೂರಿನ ಒಡೆಯರ ಕಾಲದಲ್ಲಿ ಇನ್ನಷ್ಟು ಅಭಿವೃದ್ಧಿಗೊಳಿಸಲಾಯಿತು ಎನ್ನಲಾಗಿದೆ. ಒಂದೇ ಸುತ್ತುಪೌಳಿಯಲ್ಲಿ ನಿರ್ಮಾಣವಾಗಿರುವ ದೇವಾಲಯ ವಿಶಾಲ ಆವರಣವನ್ನು ಹೊಂದಿದ್ದು, ಮುಖಮಂಟಪದಲ್ಲಿ ದಶಾವತಾರದ ಕೆತ್ತನೆಗಳು, ಬಲಿಪೀಠ, ಧ್ವಜ ಸ್ತಂಭಗಳು ಆಕರ್ಷಕವಾಗಿವೆ.

ವನ್ಯಜೀವಿ ವಲಯಕ್ಕೆ ಒಳಪಟ್ಟ ತಾಣ
ಈ ಬೆಟ್ಟಕ್ಕೆ ಗೋಪಾಲಸ್ವಾಮಿ ಬೆಟ್ಟ ಎಂಬ ಹೆಸರು ಹೇಗೆ ಬಂತೆಂಬ ಪ್ರಶ್ನೆಗೆ ಇಲ್ಲಿನವರು ತಮ್ಮದೇ ಆದ ಉತ್ತರವನ್ನು ನೀಡುತ್ತಾರೆ. ಸ್ಥಳೀಯ ಹಿರಿಯರು ಹೇಳುವ ಪ್ರಕಾರ ಈ ಬೆಟ್ಟಕ್ಕೆ ಹಿಂದೆ ಗೋವರ್ಧನಗಿರಿ ಎನ್ನುತ್ತಿದ್ದರಂತೆ ಇದಕ್ಕೆ ಕಾರಣ ಬೆಟ್ಟ ದೂರದಿಂದ ನೋಡಲು ಹಸುವಿನ ರೀತಿ ಕಾಣುತ್ತದೆಯಂತೆ. ಅಷ್ಟೇ ಅಲ್ಲದೆ ಹಸಿರ ಸಂಪತ್ತಿನಿಂದ ಕಂಗೊಳಿಸುತ್ತಿದ್ದ ಬೆಟ್ಟಕ್ಕೆ ಹಿಂದಿನ ಕಾಲದಲ್ಲಿ ಗೋಪಾಲಕರು ದನ ಮೇಯಿಸಲು ಬರುತ್ತಿದ್ದರಂತೆ ಗೋಪಾಲಕರು ಬರುತ್ತಿದ್ದರಿಂದ ಗೋವರ್ಧನಗಿರಿ ಗೋಪಾಲಸ್ವಾಮಿ ಬೆಟ್ಟವಾಯಿತಂತೆ.
ರುಕ್ಮಿಣಿ, ಸತ್ಯಭಾಮೆಯರ ಸಹಿತ ಇಲ್ಲಿ ನೆಲೆಸಿರುವ ಶ್ರೀಕೃಷ್ಣನನ್ನು ಸಂತಾನ ಗೋಪಾಲಕೃಷ್ಣ ಎಂದೂ ಕರೆಯಲಾಗುತ್ತದೆ. ಇಲ್ಲಿನ ಮೂಲ ಮೂರ್ತಿಯನ್ನು ಅಗಸ್ತ್ಯ ಮಹರ್ಷಿಗಳು ಪ್ರತಿಷ್ಠಾಪಿಸಿದರೆಂದೂ ಹೇಳಲಾಗುತ್ತದೆ. ಗೋಪಾಲಸ್ವಾಮಿ ಬೆಟ್ಟವು ತ್ರಯಂಬಕಾದ್ರಿ, ನೀಲಾದ್ರಿ, ಮಂಗಳಾದ್ರಿ, ಶಂಖರಾದ್ರಿಗಿರಿ, ಹಂಸಾದ್ರಿ, ಗರುಡಾದ್ರಿ, ಪಲ್ಲವಾದ್ರಿ, ಮಲ್ಲಿಕಾರ್ಜುನಗಿರಿ ಮೊದಲಾದ ಬೆಟ್ಟಗಳಿಂದ ಸುತ್ತುವರೆದಿದ್ದು, ಹಂಸತೀರ್ಥ, ಪದ್ಮತೀರ್ಥ, ಶಂಖ ತೀರ್ಥ, ಚಕ್ರ ತೀರ್ಥ, ಗದಾ ತೀರ್ಥ, ಶಜ್ಞಾತೀರ್ಥ, ವನಮೂಲಿಕಾ ತೀರ್ಥ, ತೊಟ್ಲು ತೀರ್ಥ ಎಂಬ ಅಷ್ಟ ತೀರ್ಥಗಳಿವೆ. ಮಕ್ಕಳಿಲ್ಲದವರು ತೊಟ್ಲು ತೀರ್ಥದಲ್ಲಿ ಸ್ನಾನ ಮಾಡಿದರೆ ಮಕ್ಕಳಾಗುತ್ತವೆಂಬ ನಂಬಿಕೆಯೂ ಇಲ್ಲಿನವರಿಗಿದೆ.
ಅರಣ್ಯ ಇಲಾಖೆ ಈ ಪ್ರದೇಶವನ್ನು ವನ್ಯಜೀವಿ 1972ರ ಅನ್ವಯ ವನ್ಯಜೀವಿ ವಲಯ ಎಂದು ಘೋಷಣೆ ಮಾಡಿದ್ದು, ಭಾರತದಲ್ಲಿ ಅತೀ ಹೆಚ್ಚು ಹುಲಿ ಹೊಂದಿರುವ ಬಂಡೀಪುರ ಅರಣ್ಯಕ್ಕೆ ಈ ಬೆಟ್ಟ ಒಳಪಟ್ಟಿದೆ. ಇಲ್ಲಿಗೆ ತೆರಳುವ ಮೊದಲು ಸಮೀಪದ ಹಂಗಳ ಗ್ರಾಮದಲ್ಲಿ ಬೇಕಾದ ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಹೋಗಬೇಕು. ಬೆಟ್ಟದ ಮೇಲೆ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ.












Click it and Unblock the Notifications