Heart attack: ಕಾವೇರಿ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್‌ಟೇಬಲ್ ಹೃದಯಾಘಾತದಿಂದ ಸಾವು
ಚಾಮರಾಜನಗರ, ಆಗಸ್ಟ್, 25: ಕಾವೇರಿ ನೀರಿನ ಸಂಬಂಧ ಕಾನೂನು ಸುವ್ಯವಸ್ಥೆಗಾಗಿ ಕೊಳ್ಳೇಗಾಲಕ್ಕೆ ಬಂದಿದ್ದ ಕೆಎಸ್‌ಆರ್‌ಪಿ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಇಂದು ನಡೆದಿದೆ.
ಮೋಹನ್ (44) ಮೃತ ಪೊಲೀಸ್ ಹೆಡ್ ಕಾನ್ಸ್‌ಟೇಬಲ್. ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದು, ಈ ಸಂಬಂಧ ಗಲಭೆಗಳು ಉಂಟಾಗದಂತೆ ಎಚ್ಚರ ವಹಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಕೆಎಸ್‌ಆರ್‌ಪಿ ಮೈಸೂರು ಬೆಟಾಲಿಯನ್ 23 ಮಂದಿ ಕೊಳ್ಳೇಗಾಲದಲ್ಲಿ ಕರ್ತವ್ಯ ನಿರ್ವಹಿಸಲು ಕಳೆದ ಎರಡು ದಿನಗಳ ಹಿಂದೆ ಬಂದು ಸಾರ್ವಜನಿಕರ ವಿದ್ಯಾರ್ಥಿ ನಿಲಯದಲ್ಲಿ ಉಳಿದುಕೊಂಡಿದ್ದರು.

ಕರ್ತವ್ಯ ಮುಗಿಸಿಕೊಂಡು ಹಾಸ್ಟೆಲ್‌ನಲ್ಲಿ ತಂಗಿದ್ದ ಮುಖ್ಯ ಪೇದೆ ಮೋಹನ್ ಅವರಿಗೆ ಹಠಾತ್ ಹೃದಯಾಘಾತವಾಗಿ ಅಸುನೀಗಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಲಾಗಿದೆ. ಮೃತ ಮೋಹನ್ ಮೂಲತಃ ಮಡಿಕೇರಿ ಜಿಲ್ಲೆಯ ನಾಪ್ಲೋಕು ಹೋಬಳಿಯ ಕಕ್ಕಬೇ ಗ್ರಾಮದವರು ಎಂದು ತಿಳಿದುಬಂದಿದೆ.
ಹೃದಯಾಘಾತದಿಂದ ನರ್ಸಿಂಗ್ ವಿದ್ಯಾರ್ಥಿನಿ ಸಾವು
ಇತ್ತೀಚೆಗಷ್ಟೇ ಹೃದಯಾಘಾತದಿಂದ ನರ್ಸಿಂಗ್ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ನಡೆದಿತ್ತು.
ಸುಮಾ (19) ಮೃತ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟ ವಿದ್ಯಾರ್ಥಿನಿ. ಮಂಗಳೂರಿನಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡುತಿದ್ದ ವಿದ್ಯಾರ್ಥಿನಿ ಸುಮಾ ಅವರು ಅನಾರೋಗ್ಯದ ಹಿನ್ನೆಲೆ ಆಗಸ್ಟ್ 9ರಂದು ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದರು.
ಬಳಿಕ ಲೋ ಬಿಪಿ ಆಗಿ ಮತ್ತೆ ಆಗಸ್ಟ್ 11ರಂದು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಗುಣಮುಖರಾಗಿದ್ದರು. ಆದರೆ ಆಗಸ್ಟ್ 13 ರಂದು ಸಂಜೆ ಮತ್ತೆ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು.
ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು
ಶಾಲಾ ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ ಪಟ್ಟಣದ ಸಿಎಂಎಸ್ ಅನಾಥಾಲಯದಲ್ಲಿ ಬುಧವಾರ ಬೆಳಗ್ಗೆ ನಡೆದಿತ್ತು.
ಗುಂಡ್ಲುಪೇಟೆ ಪಟ್ಟಣದ ನಿರ್ಮಲಾ ಕಾನ್ವೆಂಟ್‌ನಲ್ಲಿ ಎಸ್ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಫಿಲಿಶ್ (15) ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ. ಈಕೆ ಸಿಎಂಎಸ್ ಅನಾಥಾಲಯದಲ್ಲಿ ವಾಯುವಿಹಾರ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಳು.
ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ವೈದ್ಯರು ತಪಾಸಣೆಗೆ ಒಳಪಡಿಸಿದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಧೃಡಪಡಿಸಿದ್ದರು. ಇನ್ನು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಮೃತಳ ತಾಯಿ ದೂರು ಕೊಟ್ಟಿದ್ದರು.
ಮೃತ ವಿದ್ಯಾರ್ಥಿನಿ ಫಿಲಿಶ್(15) ಮೂಲತಃ ಬೆಂಗಳೂರಿನ ನಿವಾಸಿಯಾಗಿದ್ದು, ತಂದೆ ನಿಧನರಾದ ಬಳಿಕ ಕ್ರೈಸ್ತ ಮಿಷನರಿಯೊಂದು ವ್ಯಾಸಂಗಕ್ಕಾಗಿ ಪಟ್ಟಣದ ಸಿಎಂಎಸ್ ಅನಾಥಾಲಯಕ್ಕೆ ತಂದು ಬಿಟ್ಟಿದ್ದರು ಎಂದು ನಿಲಯ ಪಾಲಕರಾದ ಸೆಲ್ವರಾಜ್ ಮಾಹಿತಿ ನೀಡಿದ್ದರು.
ಬಾಲಕಿ ಆರೋಗ್ಯವಾಗಿದ್ದು ಧಿಡೀರ್ ಕುಸಿದು ಬಿದ್ದು ಹೃದಯಾಘಾತವಾಗಿರುವುದು ನಮಗೆಲ್ಲರಿಗೂ ಆಘಾತವಾಗಿದೆ ಎಂದು ಅವರು ಕಂಬನಿ ಮಿಡಿದಿದ್ದಾರೆ. ಮೃತ ಬಾಲಕಿಯ ಶವವನ್ನು ಪಟ್ಟಣದ ಶವಾಗಾರಕ್ಕೆ ರವಾನಿಸಿ, ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಹಸ್ತಾಂತತರಿಸಲಾಗಿತ್ತು.












Click it and Unblock the Notifications