ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿಯಲ್ಲೇ ಕಡವೆ ಬೇಟೆಯಾಡಿದ ಸೀಳುನಾಯಿಗಳು, ಈ ದೃಶ್ಯ ಮಾತ್ರ ಭಯಾನಕ.!
ಚಾಮರಾಜನಗರ, ಜೂನ್, 06: ಮೇಯುತ್ತಾ ನಿಂತಿದ್ದ ಕಡವೆಯೊಂದರ ಮೇಲೆ ವಾಹನಗಳ ಓಡಾಡಟದ ನಡುವೆಯೂ ಸೀಳುನಾಯಿಗಳ ಗುಂಪು ಬೇಟೆಯಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಿಂದ ಕೇರಳಕ್ಕೆ ತೆರಳುವ ರಸ್ತೆಯಲ್ಲಿ ನಡೆದಿದೆ.
ಕೇರಳ ರಸ್ತೆಯಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಕಾಡು ಬರಲಿದ್ದು, ಇಲ್ಲಿ ವಾಹನಗಳ ಓಡಾಟವು ಹೆಚ್ಚಿರಲಿದೆ. ಇಲ್ಲಿನ ರಸ್ತೆಬದಿ ಮೇಯುತ್ತಾ ನಿಂತಿದ್ದ ಕಡವೆಯೊಂದರ ಮೇಲೆ 7ಕ್ಕೂ ಹೆಚ್ಚು ಸೀಳುನಾಯಿಗಳು ದಾಳಿ ಮಾಡಿ ತಮ್ಮ ಆಹಾರವನ್ನು ಪಡೆದುಕೊಂಡಿವೆ.

ಆದರೆ, ಪ್ರಾಣ ಕಳೆದುಕೊಳ್ಳುವ ಸಂದರ್ಭದಲ್ಲಿ ಕಡವೆಯ ಅಸಹಾಯಕತೆ ಕಂಡ ಪ್ರಯಾಣಿಕರು ಮರುಗಿದ್ದಾರೆ. ಇನ್ನು, ಈ ರೋಮಾಂಚಕ ದೃಶ್ಯವನ್ನು ರಂಗರಾಜು ಎಂಬವವರು ಸೆರೆ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೆ ಈ ದೃಶ್ಯವು ಮೈ ಝಲ್ ಅನ್ನಿಸುವಂತಿದೆ.
ಚಿರತೆಗಳ ವಿಡಿಯೋ ವೈರಲ್
ಇನ್ನು ಇತ್ತೀಚೆಗಷ್ಟೇ ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ಮಾರ್ಗದ ಮಧ್ಯದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದವು. ಈ ಅದ್ಭುತ ದೃಶ್ಯವನ್ನು ಪ್ರವಾಸಿಗರೊಬ್ಬರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು.
ಕೆಎಸ್ಆರ್‌ಟಿಸಿ ಬಸ್ ಮೂಲಕ ಪ್ರವಾಸಿಗರು ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ರಸ್ತೆ ತಿರುವಿನಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದು, ರಸ್ತೆಯ ತಡೆಗೋಡೆ ಪಕ್ಕದಲ್ಲಿ ಹೋಗುತ್ತಿರುವ ದೃಶ್ಯವನ್ನು ಪ್ರವಾಸಿಗರೊಬ್ಬರು ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ.ಇನ್ನು ಜೋಡಿ ಚಿರತೆಗಳನ್ನು ಕಂಡು ಪ್ರವಾಸಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಇದೀಗ ಈ ಚಿರತೆಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.












Click it and Unblock the Notifications