ಸಾಕಿದ ಬೆಕ್ಕಿಗೆ ಮಗಳ ಸ್ಥಾನ ಕೊಟ್ಟು ಸೀಮಂತ ಮಾಡಿದ ಗುಂಡ್ಲುಪೇಟೆ ದಂಪತಿ
ಚಾಮರಾಜನಗರ, ಡಿಸೆಂಬರ್ 21: ಇತ್ತೀಚಿನ ದಿನಗಳಲ್ಲಿ ಬೆಕ್ಕು ಮತ್ತು ಶ್ವಾನ ಪ್ರಿಯರು ಅವುಗಳನ್ನು ತಮ್ಮ ಮನೆಯ ಸದಸ್ಯನಂತೆ ನೋಡಿಕೊಂಡು ಮುದ್ದಾಗಿ ಸಾಕುತ್ತಾರೆ. ಅದರಲ್ಲೂ ಸಾಕು ಪ್ರಾಣಿಗಳಿಗೆ ಹುಟ್ಟುಹಬ್ಬ ಹಾಗೂ ಸೀಮಂತದಂತಹದ ಸಂಭ್ರಮಾಚರಣೆ ಮಾಡುವುದು ಸಾಮಾನ್ಯವಾಗಿದೆ.
ಬೆಕ್ಕು ಎಂದರೆ ಯಾರಿಗೆ ಇಷ್ಟ ಇರುವುದಿಲ್ಲ. ಅದರ ತುಂಟಾಟ, ಜನರೊಂದಿಗೆ ಅವುಗಳು ಬೇರೆಯುವ ರೀತಿ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಚಾಮರಾಜನಗರ ಮನೆಯೊಂದರ ಬೆಕ್ಕು, ಮನೆಯ ಪೆಟ್ ಅಥವಾ ಸಾಕು ಪ್ರಾಣಿ ಎನ್ನುವುದಕ್ಕಿಂತ ಹೆಜ್ಜೆ ಮುಂದಕ್ಕೆ ಹೋಗಿ ಮನೆಯ ಮಗಳಾಗಿ ಸ್ಥಾನ ಪಡೆದುಕೊಂಡಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿಯಲ್ಲಿ ಶಿಕ್ಷಕರಾಗಿರುವ ವೆಂಕಟರಮಣ ಶೆಟ್ಟಿ ಹಾಗೂ ಅವರ ಪತ್ನಿ ನಿರ್ಮಲಾ ಅವರಿಗೆ ಬೆಕ್ಕುಗಳೆಂದರೆ ಅತೀ ಪ್ರೀತಿ. ಬಲು ಅಕ್ಕರೆ. ಹೀಗಾಗಿ ಅವರ ಮನೆಯಲ್ಲಿ ಸಾಕಿರುವ ಬೆಕ್ಕಿಗೆ ಮನೆಯ ಸದಸ್ಯನ ಸ್ಥಾನವನ್ನು ಕೊಟ್ಟಿದ್ದಾರೆ. ಆ ಬೆಕ್ಕಿಗೆ ಸುಬ್ಬಿ ಎಂದು ಹೆಸರಿಟ್ಟಿದ್ದು, ಮುದ್ದಾಗಿ ನೋಡಿಕೊಂಡಿದ್ದಾರೆ.

ಇದೀಗ ಸುಬ್ಬಿ ಗರ್ಭಿಣಿಯಾಗಿದ್ದು, ಇನ್ನೇನು ಕೆಲವೇ ದಿನದಲ್ಲಿ ಮುದ್ದಾದ ಮರಿಗಳಿಗೆ ಜನ್ಮ ನೀಡಲಿದ್ದಾಳೆ. ಹೀಗಾಗಿ ತಮ್ಮ ಮಗಳಂತಿರುವ ಸುಬ್ಬಿಗೆ ವೆಂಕಟರಮಣ ಶೆಟ್ಟಿ ಹಾಗೂ ಅವರ ಪತ್ನಿ ನಿರ್ಮಲಾ ಸೀಮಂತ ಶಾಸ್ತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ವೆಂಕಟರಮಣ ಹಾಗೂ ನಿರ್ಮಲಾ ಅವರಿಗೆ ಇಬ್ಬರು ಪುತ್ರರಿದ್ದು ಮಗಳಿಲ್ಲ ಎಂಬ ಕೊರಗನ್ನು ಸುಬ್ಬಿ ನಿವಾರಿಸಿದ್ದಾಳಂತೆ. ತಮ್ಮ ಮನೆಯ ಸುಬ್ಬಿ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ನಿರ್ಮಲಾ ಅವರು ಅದಕ್ಕಿಷ್ಟವಾದ ಆಹಾರ, ತಿನಿಸು ಕೊಟ್ಟು ವಿಶೇಷ ಆರೈಕೆ ಮಾಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಶಿಕ್ಷಕ ವೆಂಕಟರಮಣ ಶೆಟ್ಟಿ " ಹೆಣ್ಣು ಮಕ್ಕಳಿಲ್ಲದ ಕಾರಣ ಪ್ರೀತಿಯಿಂದ ಹೆಣ್ಣು ಬೆಕ್ಕನ್ನು ಸಾಕಿ ಅದಕ್ಕೆ ಪ್ರೀತಿಯಿಂದ ಸುಬ್ಬಿ ಎಂದು ಹೆಸರಿಡಲಾಗಿದೆ. ಪ್ರತಿನಿತ್ಯ ಅದಕ್ಕೆ ಇಷ್ಟವಾದ ತಿನಿಸನ್ನು ಕೊಟ್ಟು_ಸ್ನಾನ ಮಾಡಿಸಿ ಅಗತ್ಯ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಕ್ಕಳಿಗೆ ಸೀಮಂತ ಮಾಡುವ ಹಾಗೆ ಫಲ ತಾಂಬೂಲ, ತಿನಿಸುಗಳನ್ನು ಇಟ್ಟು ಹೊಸ ಬಟ್ಟೆ ತೊಡಿಸಿ ಸಂಪ್ರದಾಯದಂತೆ ಶಾಸ್ತ್ರ ಮಾಡಿ ಆರತಿ ಬೆಳಗಿ ಶುಭ ಹಾರೈಸಿದ್ದೆವೆ ಎಂದು ತಿಳಿಸಿದರು.
ವೇಗದ ಬದುಕಿನಲ್ಲಿ ಪ್ರಾಣಿಗಳನ್ನು ಸಾಕಿ ಸಲುಹುವುದೇ ಬೇಡ ಎನ್ನುವವರ ಮಧ್ಯ ವೆಂಕಟರಮಣ ಶೆಟ್ಟಿ ಬೆಕ್ಕಿಗೆ ಮಗಳ ಸ್ಥಾನ ಕೊಟ್ಟು ಸೀಮಂತ ಮಾಡಿರುವುದು ವಿಶೇಷವಾಗಿದೆ.












Click it and Unblock the Notifications