ವಿಡಿಯೋ; ಹನೂರಿನ ಗ್ರಾಮದಲ್ಲಿ ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಕಾಡಾನೆ ರಕ್ಷಿಸಿದ ಅರಣ್ಯ ಇಲಾಖೆ
ಚಾಮರಾಜನಗರ, ಏಪ್ರಿಲ್ 24: ಮೇವು ಅರಸಿ ಕಾಡಿನಿಂದ ನಾಡಿನತ್ತ ಬಂದಿದ್ದ ಕಾಡಾನೆಯೊಂದು ಜಮೀನಿನಲ್ಲಿದ್ದ ಬಾವಿಗೆ ಬಿದ್ದ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿನ ಚೆನ್ನೇಗೌಡ ದೊಡ್ಡಿ ಗ್ರಾಮದಲ್ಲಿ ನಿನ್ನೆ ನಡೆದಿದೆ. ಅರಣ್ಯ ಅಧಿಕಾರಿಗಳ ಯಶಸ್ವಿ ಕಾರ್ಯಾಚರಣೆಯಿಂದ ಆನೆಯನ್ನು ಮೇಲಕ್ಕೆ ಎತ್ತಲಾಗಿದೆ.
ಬಾವಿಗೆ ಬಿದ್ದ ಕಾಡಾನೆಯು ಸುಮಾರು 15 ವರ್ಷ ಪ್ರಾಯದ ಗಂಡಾನೆಯಾಗಿದ್ದು, ಇದು ಮಲೆಮಹದೇಶ್ವರ ವನ್ಯಜೀವಿ ವಲಯದಿಂದ ಮೇವು ಅರಸುತ್ತಾ ಅರಣ್ಯದಂಚಿನಲ್ಲಿರುವ ಚೆನ್ನೇಗೌಡ ದೊಡ್ಡಿ ಗ್ರಾಮದತ್ತ ಬಂದಿದೆ. ಗ್ರಾಮದ ನಿವಾಸಿ ಗೋವಿಂದ ಎಂಬುವರ ಜಮೀನಿನಲ್ಲಿ ತೆರಳುತ್ತಿದ್ದ ವೇಳೆ ಜಮೀನಿನಲ್ಲಿದ್ದ ಬಾವಿಗೆ ಅಕಸ್ಮಾತ್ ಆಗಿ ಬಿದ್ದಿದೆ.

ಬಾವಿಯೊಳಗೆ ಬಿದ್ದ ಕಾಡಾನೆ ಘೀಳಿಡುವುದನ್ನು ಕೇಳಿದ ಜನರು ಬಂದು ನೋಡಿದಾಗ ಬಾವಿಯಲ್ಲಿ ಕಾಡಾನೆ ಬಿದ್ದಿರುವುದು ಕಂಡುಬಂದಿದೆ. ಈ ಬಗ್ಗೆ ಕೂಡಲೇ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆರ್‌ಎಫ್‌ಓ ಸುಂದರ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಬಂದಿದ್ದು, ಬಳಿಕ ಜೆಸಿಬಿ ತರಿಸಿ ಮಣ್ಣನ್ನು ತೆಗೆದು ಕಾಡಾನೆ ಮೇಲೆ ಹತ್ತಲು ಅನುಕೂಲ ಮಾಡಿಕೊಡಲಾಯಿತು.
ಮೇವು ಅರಸಿ ಕಾಡಿನಿಂದ ನಾಡಿನತ್ತ ಬಂದಿದ್ದ ಕಾಡಾನೆಯೊಂದು ಜಮೀನಿನಲ್ಲಿದ್ದ ಬಾವಿಗೆ ಬಿದ್ದ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿನ ಚೆನ್ನೇಗೌಡ ದೊಡ್ಡಿ ಗ್ರಾಮದಲ್ಲಿ ನಿನ್ನೆ ನಡೆದಿದೆ. ಅರಣ್ಯ ಅಧಿಕಾರಿಗಳ ಯಶಸ್ವಿ ಕಾರ್ಯಾಚರಣೆಯಿಂದ ಆನೆಯನ್ನು ಮೇಲಕ್ಕೆ ಎತ್ತಲಾಗಿದೆ.#Elephant #Forestdepartment pic.twitter.com/xUMpFKzvCW
— oneindiakannada (@OneindiaKannada) April 24, 2020
ಬೇಸಿಗೆ ದಿನವಾಗಿರುವುದರಿಂದ ಅರಣ್ಯದಲ್ಲಿ ಬಿಸಿಲಿಗೆ ಹಸಿರು ಮೇವು ಒಣಗಿದ್ದು, ಕುಡಿಯುವ ನೀರಿಗೂ ತೊಂದರೆ ಉಂಟಾಗಿರುವ ಕಾರಣ ಹೆಚ್ಚಿನ ಕಾಡಾನೆಗಳು ಅರಣ್ಯದಿಂದ ಮೇವು ಅರಸಿಕೊಂಡು ರೈತರ ಜಮೀನಿನತ್ತ ಬರುತ್ತಿವೆ. ಹೀಗೆ ಬಂದ ಕಾಡಾನೆಗಳು ಜಮೀನಿನಲ್ಲಿ ಬೆಳೆದಿದ್ದ ಬೆಳೆ ತಿಂದು ತುಳಿದು ನಾಶ ಮಾಡುತ್ತಿವೆ. ಕೆಲವೊಮ್ಮೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆಗಳು ನಡೆದಿವೆ. ಆದರೆ ಅದೃಷ್ಟವಶಾತ್ ಬಾವಿಗೆ ಬಿದ್ದ ಈ ಕಾಡಾನೆ ಪ್ರಾಣಾಪಾಯದಿಂದ ಪಾರಾಗಿ ಅರಣ್ಯ ಸೇರಿರುವುದು ನೆಮ್ಮದಿ ತಂದಿದೆ.












Click it and Unblock the Notifications