ಬಂಡೀಪುರ: ಮರಿ ಆನೆ ಸಾವು, ಸುತ್ತ ಕುಳಿತು ರೋದಿಸಿದ ಕಾಡಾನೆಗಳು
ಗುಂಡ್ಲುಪೇಟೆ, ಜನವರಿ 24 : ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಎರಡು ವರ್ಷದ ಆನೆಮರಿಯೊಂದು ಸಾವಿಗೀಡಾಗಿದ್ದು, ತಾಯಿಯಾನೆ ಸೇರಿ ಕಾಡಾನೆಗಳು ಸ್ಥಳದಿಂದ ಕದಲದೆ ರೋಧಿಸುತ್ತಿದ್ದ ದೃಶ್ಯ ಕಂಡು ಬಂತಲ್ಲದೆ, ಅರಣ್ಯ ಸಿಬ್ಬಂದಿ ಅವುಗಳನ್ನು ಪಟಾಕಿ ಸಿಡಿಸಿ ಕಾಡಿಗೆ ಅಟ್ಟಿ ಅಂತ್ಯಕ್ರಿಯೆ ನಡೆಸಿದ್ದಾರೆ.
ಹುಲಿಯೋಜನೆಯ ಕುಂದಕೆರೆ ವಲಯಕ್ಕೆ ಸೇರಿದ ಮಂಗಲ ಗ್ರಾಮದ ಕಾಡಂಚಿನ ಕೆರೆಯ ಬಳಿ ಮರಿಯಾನೆ ಸಾವಿಗೀಡಾಗಿತ್ತು. ಸತ್ತ ಮರಿಯ ಬಳಿ ಯಾರನ್ನು ಬಿಡದೆ ಕಾಡಾನೆಗಳ ಹಿಂಡು ಕಳೇಬರದ ಸುತ್ತಲೂ ಓಡಾಡುತ್ತಿದ್ದುದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಎಸಿಎಫ್ ರವಿಕುಮಾರ್, ಆರ್‍ಎಫ್‍ಓ ಪ್ರಭುಸ್ವಾಮಿ ಸಿಬ್ಬಂದಿಯೊಂದಿಗೆ ತೆರಳಿ ಪಟಾಕಿ ಸಿಡಿಸಿ ಅವುಗಳನ್ನು ಕಾಡಿಗೆ ಅಟ್ಟಿ ಬಳಿಕ ಅರಣ್ಯ ಇಲಾಖೆಯ ಪಶುವೈದ್ಯ ಡಾ.ನಾಗರಾಜು ಮರಿಯಾನೆಯ ಕಳೇಬರವನ್ನು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯಕ್ರಿಯೆ ನಡೆಸಲಾಯಿತು.

ಆನೆ ಮರಿಯ ಹೊಟ್ಟೆಯಲ್ಲಿ ಅಲ್ಸರ್ ಹುಣ್ಣು ಕಂಡು ಬಂದಿದ್ದು ಇದೇ ಸಾವಿಗೆ ಕಾರಣ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಹೆಣ್ಣಾನೆಯೊಂದು ನಿತ್ರಾಣಗೊಂಡು ಸಾವನ್ನಪ್ಪಿತ್ತು. ಇದೀಗ ಮರಿಯಾನೆ ಸಾವನ್ನಪ್ಪಿದೆ. ಒಟ್ಟಾರೆ ಬಂಡೀಪುರದಲ್ಲಿ ಕಾಡಾನೆಗಳ ಸಾವು ಪ್ರಾಣಿ ಪ್ರಿಯರ ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications