ಚಾಮರಾಜನಗರ: ಇವಿಎಂ ಸಾಗಿಸುತ್ತಿದ್ದ ವಾಹನ ಅಡ್ಡಗಟ್ಟಿದ ಗಜಪಡೆ, ವಿಡಿಯೋ ವೈರಲ್
ಚಾಮರಾಜನಗರ, ಏಪ್ರಿಲ್, 27: ನಿನ್ನೆ (ಏಪ್ರಿಲ್ 26) ರಾಜ್ಯದಲ್ಲಿ 14 ಕ್ಷೇತ್ರಗಳಿಗೆ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದ್ದು, ಈ ವೇಳೆ ಹಲವೆಡೆ ಮತದಾನ ಬಹಿಷ್ಕಾರ ಮಾಡಿರುವ ಘಟನೆಗಳು ಕೂಡ ನಡೆದಿವೆ. ಮತ್ತೊಂದೆಡೆ ಮತದಾನ ಮಾಡುವಂತೆ ಮನವೊಲಿಸಲು ಹೋದಾಗ ಜನರು ಚುನಾವಣಾಧಿಕಾರಿಗಳು, ಪೊಲೀಸರ ಮೇಲೆ ದಾಳಿ ಮಾಡಿದ್ದಲ್ಲದೆ, ಮತಗಟ್ಟೆಯನ್ನು ಹೊಡೆದುಹಾಕಿರುವ ಘಟನೆ ಚಾಮರಾಜನಗರ ಕ್ಷೇತ್ರಕ್ಕೆ ಒಳಪಡುವ ಇಂಡಿಗನತ್ತ ಗ್ರಾಮದಲ್ಲಿ ನಡೆದಿತ್ತು. ಅಲ್ಲದೆ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಮತ್ತೊಂದು ಘಟನೆ ನಡೆದಿದೆ.
ಚುನಾವಣಾ ಕರ್ತವ್ಯ ಮುಗಿಸಿ ಇವಿಎಂಗಳನ್ನು ಹೊತ್ತು ಬರುತ್ತಿದ್ದ ಚುನಾವಣಾ ಸಿಬ್ಬಂದಿಯಿದ್ದ ವಾಹನವನ್ನು ಕಾಡಾನೆ ಅಟ್ಟಾಡಿಸಿಕೊಂಡು ಹೋಗಿರುವ ಘಟನೆ ಚಾಮರಾಜನಗರ ತಾಲೂಕಿನ ಬೇಡಗುಳಿಯಲ್ಲಿ ಶುಕ್ರವಾರ (ಏಪ್ರಿಲ್ 27) ರಾತ್ರಿ ನಡೆದಿದೆ.

ಚಾಮರಾಜನಗರ ತಾಲೂಕಿನ ಬೇಡಗುಳಿಯಲ್ಲಿ ಚುನಾವಣಾ ಕರ್ತವ್ಯ ಮುಗಿಸಿ ವಾಪಾಸಾಗುವಾಗ ಅರಣ್ಯದ ರಸ್ತೆಯಲ್ಲಿ ಕಾಡಾನೆಯೊಂದು ಚುನಾವಣಾ ಸಿಬ್ಬಂದಿ ವಾಹನವನ್ನು ಅಟ್ಟಾಡಿಸಿಕೊಂಡು ಹೋಗಿದೆ. ಇನ್ನು ಈ ವೇಳೆ ಹೆದರಿಕೊಂಡು ಅರ್ಧದಾರಿಗೆ ಬಂದು ಮತ್ತೇ ಮತಗಟ್ಟೆಯತ್ತ ಚುನಾವಣ ಸಿಬ್ಬಂದಿ ತೆರಳಿದ ಘಟನೆ ನಡೆದಿದೆ. ಬಳಿಕ, ಪ್ರಯಾಸಪಟ್ಟು ಅರಣ್ಯ ಇಲಾಖೆ ಎಸ್ಕಾರ್ಟ್ ಜೊತೆಗೆ ಪ್ರಾಣಭೀತಿಯಲ್ಲೇ ಅರಣ್ಯ ಪ್ರದೇಶದಿಂದ ಹೊರಬಂದು ನಿಟ್ಟುಸಿರು ಬಿಟ್ಟಿದ್ದಾರೆ.
ಇಂಡಿಗನತ್ತದಲ್ಲಿ ಮರು ಮತದಾನ: ರಾಜ್ಯದಲ್ಲಿ 14 ಕ್ಷೇತ್ರಗಳಿಗೆ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದ್ದು, ಇನ್ನು ಈ ವೇಳೆ ಚಾಮರಾಜನಗರ ಕ್ಷೇತ್ರಕ್ಕೆ ಒಳಪಡುವ ಇಂಡಿಗನತ್ತ ಗ್ರಾಮದಲ್ಲಿ ಜನರು ಮತಗಟ್ಟೆಯನ್ನು ಧ್ವಂಸ ಮಾಡಿದ ಘಟನೆ ನಡೆದಿತ್ತು. ಈ ಸಂಬಂಧ ಚುನಾವಣಾ ಆಯೋಗ ಮಹತ್ವದ ನಿರ್ಧಾರಕ್ಕೆ ಬಂದಿದೆ. ಹಾಗಾದರೆ ಮಾಹಿತಿ ಇಲ್ಲಿದೆ ಗಮನಿಸಿ.
ಶುಕ್ರವಾರ (ಏಪ್ರಿಲ್ 27) ಮತದಾನ ಬಹಿಷ್ಕಾರ ನಡೆಸಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಮತಗಟ್ಟೆ ಧ್ವಂಸ ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಮರು ಚುನಾವಣೆ ಮಾಡುವುದಾಗಿ ಘೋಷಣೆ ಮಾಡಿದೆ. ಏಪ್ರಿಲ್ 29ರ ಸೋಮವಾರದಂದು ಬೆಳಗ್ಗೆ 7ರಿಂದ ಸಂಜೆವರೆಗೆ 146ರ ಮತಗಟ್ಟೆಯಲ್ಲಿ ಮರು ಚುನಾವಣೆ ನಡೆಸಲಾಗುತ್ತದೆ ಎಂದು ಚುನಾವಣಾ ಆಯೋಗ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ.
ಶುಕ್ರವಾರದಂದು ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಮತದಾನಕ್ಕೆ ಅಡ್ಡಿಪಡಿಸಿ, ಮತಯಂತ್ರಗಳನ್ನು ಕೆಲವರು ಹಾನಿ ಮಾಡಿದ್ದರು. ಈ ಸಂಬಂಧ, ಹನೂರು ತಹಶಿಲ್ದಾರ್ ಹಾಗೂ ಚುನಾವಣಾ ಅಧಿಕಾರಿ ಪ್ರತ್ಯೇಕ ದೂರು ಕೊಟ್ಟಿದ್ದರು. ಇನ್ನು ಮಲೆಮಹದೇಶ್ವರ ಬೆಟ್ಟ ಪೊಲೀಸರು 25ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ. ಹಲವರು ಗ್ರಾಮ ತೊರೆದು ಪರಾರಿಯಾಗಿದ್ದಾರೆ. ಮೆಂದಾರೆ ಗ್ರಾಮಕ್ಕೆ ಪೊಲೀಸರು ತೆರಳಿ ಮತದಾನ ಮಾಡುವಂತೆ ಇಂದು ಧೈರ್ಯ ತುಂಬಿದ್ದಾರೆ.












Click it and Unblock the Notifications