ಚಾಮರಾಜನಗರ: ಚೆಕ್ಕಿಂಗ್ ಆಫೀಸರ್ ಆಗಿ ವಾಹನಗಳ ತಪಾಸಣೆ ನಡೆಸಿದ ಒಂಟಿ ಸಲಗ, ವಿಡಿಯೋ ವೈರಲ್
ಚಾಮರಾಜನಗರ, ಜನವರಿ, 30: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸರು ತಪಾಸಣೆ ನಡೆಸುವುದು ಸಾಮಾನ್ಯ. ಆದರೆ, ಇಲ್ಲೊಂದು ಆನೆ ಎಲ್ಲಾ ವಾಹನಗಳನ್ನು ಚೆಕ್ ಮಾಡಿ ಬಿಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದ್ದು, ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಕರ್ನಾಟಕದ ಗಡಿಭಾಗದಲ್ಲಿರುವ ತಮಿಳುನಾಡಿನ ಗೇರುಮಾಳ ರಸ್ತೆಯಲ್ಲಿ ಎಂಟ್ರಿ ಕೊಟ್ಟ ಒಂಟಿ ಸಲಗವೊಂದು ಆಹಾರಕ್ಕಾಗಿ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಿ ಕಳುಹಿಸಿಕೊಟ್ಟಿದೆ. ಪಿಕ್ ಅಪ್ ವಾಹನ, ಲಾರಿ, ಬಸ್ ಅನ್ನೂ ಬಿಡದ ಒಂಟಿ ಸಲಗ ಸೊಂಡಿಲನ್ನು ಚಾಚಿ ಕಬ್ಬು, ತರಕಾರಿ ಸೇರಿದಂತೆ ಇತರೆ ಆಹಾರ ಪದಾರ್ಥಕ್ಕೆ ತಡಕಾಡುವ ವೀಡಿಯೋವನ್ನು ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರು ಸೆರೆ ಹಿಡಿದು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.

ಸೋಮವಾರ ಸಂಜೆ ಈ ಆನೆ ತಪಾಸಣೆ ಘಟನೆ ನಡೆದಿದ್ದು, ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ. ಇನ್ನು, ಅರಣ್ಯದಿಂದ ಆನೆ ರಸ್ತೆಗೆ ಬಂದಿದ್ದರಿಂದ ಕೆಲ ತಾಸು ವಾಹನ ಸಂಚಾರವೂ ಅಸ್ತವ್ಯಸ್ತವಾಗಿತ್ತು.
ಅರ್ಜುನನ ಶೌರ್ಯ ಪ್ರದರ್ಶನದ ಕೊನೆಯ ವಿಡಿಯೋ ವೈರಲ್
ಸತತವಾಗಿ 8 ಬಾರಿ ನಾಡದೇವತೆ ಮೈಸೂರು ಚಾಮುಂಡೇಶ್ವರಿಯ ತಾಯಿಯ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಅರ್ಜುನ ಆನೆ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಸಾವನ್ನಪ್ಪಿತ್ತು. ಇನ್ನು ಸಾಯುವ ಮುನ್ನ ಇದು ಏಕಾಂಗಿಯಾಗಿ ಕಾಡಾನೆ ಜೊತೆ ಯಾವುದೇ ಭಯವಿಲ್ಲದೆ ದಿಟ್ಟತನದಿಂದ ಕಾದಾಡಿದ್ದ ಕೊನೆಯ ವಿಡಿಯೋ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಇನ್ನು ಈ ವಿಡಿಯೋಗೆ ಪ್ರತಿಕ್ರಿಯೆಗಳು ಹರಿದುಬರುತ್ತಲೇ ಇವೆ.
ಕಾಡಾನೆ ಜೊತೆ ಅರ್ಜುನ ದಿಡ್ಡತನದಿಂದ ಏಕಾಂಗಿಯಾಗಿ ಕಾದಾಡಿದ ರಣರೋಚಕ ವಿಡಿಯೋ ಪ್ರವೀಣ್ ಇಟಿಎಫ್ ಸಕಲೇಶಪುರ ಎನ್ನುವ ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಮದವೇರಿದ ಕಾಡಾನೆ ಜೊತೆಗೆ ಏಕಾಂಗಿಯಾಗಿ ಯಾವುದೇ ಭಯವಿಲ್ಲದೆ ವೀರಾವೇಶದಿಂದ ಹೋರಾಡಿರುವ ಅರ್ಜುನ ಬಲಿಷ್ಠ ಕಾಡಾನೆ ದಾಳಿಗೆ ತೀವ್ರ ಗಾಯಗೊಂಡು ಸಾವಿಗೀಡಾಗಿತ್ತು. ಡಿಸೆಂಬರ್ 4ರಂದು ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ನೆಡುತೋಪಿನಲ್ಲಿ ಈ ಕಾಳಗ ನಡೆದಿದ್ದು, ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಒಂಟಿಸಲಗವೊಂದು ದೀಢೀರ್ ಬಂದು ಅರ್ಜುನನ ಮೇಲೆ ಎರಗಿತ್ತು.
ಮದವೇರಿದ ಕಾಡಾನೆ ಬರುತ್ತಲೇ ಬೇರೆ ಸಾಕಾನೆಗಳು ಸ್ಥಳದಿಂದ ಹೆದರಿ ಕಾಲ್ಕಿತ್ತವು. ಬಳಿಕ ಕಾಡಾನೆ ಜೊತೆ ಕಾಳಗಕ್ಕೆ ಏಕಾಂಗಿಯಾಗಿ ಹೋರಾಟಕ್ಕೆ ಮುಂದಾದಾಗ ಕ್ಯಾಪ್ಟನ್ ಅರ್ಜುನ ವೀರಮರಣ ಹೊಂದಿದ್ದ. ಅರ್ಜುನನ ಈ ರೋಚಕ ಕಾದಾಟದ ಕೊನೇ ಕ್ಷಣದ ಎರಡು ತಂಗಳ ಹಿಂದಿನ ವೀಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಇನ್ನು ಹಾಸನ ಜಿಲ್ಲೆಯ ಸಕಲೇಶಪು ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ತುಸು ಹೆಚ್ಚಾಗಿಯೇ ಇದ್ದು, ಇವುಗಳ ದಾಳಿಯಿಂದ ಬರೀ ಜಮೀನುಗಳ ನಾಶ ಮಾತ್ರವಲ್ಲದೆ, ಮಾನವ ಹಾನಿಯಾಗಿರುವ ಉದಾಹರಣೆಗಳು ಇವೆ. ಇದರಿಂದ ಬೇಸತ್ತ ಈ ಭಾಗದ ಜನರು ಕಾಡಾನೆಗಳನ್ನು ಸೆರೆಹಿಡಿಯುವಂತೆ ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಈಗಲೂ ಕೂಡ ಈ ಭಾಗದಲ್ಲಿ ಕಾಡಾನೆಗಳ ದಾಳಿ ಹೆಚ್ಚಾಗುತ್ತಲಿದ್ದು, ಇದರಿಂದ ಇಲ್ಲಿನ ಜನರು ತತ್ತರಿಸಿಹೋಗಿದ್ದಾರೆ. ಅಲ್ಲದೆ ಅರಣ್ಯ ಇಲಾಖೆ ವಿರುದ್ಧ ಕೆಂಡಕಾರುತ್ತಲೇ ಇದ್ದಾರೆ.












Click it and Unblock the Notifications