Dog Show: ಗುಂಡ್ಲುಪೇಟೆಯಲ್ಲಿ ಡಾಗ್ ಶೋ, ಯಾವ್ಯಾವ ತಳಿಯ ಎಷ್ಟು ನಾಯಿಗಳು ಭಾಗಿ?-ಮಾಹಿತಿ ತಿಳಿಯಿರಿ
ಚಾಮರಾಜನಗರ, ಜನವರಿ, 30: ನಾಯಿಗಳು ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ, ಅಂತಹದರಲ್ಲಿ ಒಂದೇ ಕಡೇ ಹತ್ತಾರು ನಾಯಿಗಳ ಶಿಸ್ತಿನ ನಡೆ, ಚಿನ್ನಾಟವನ್ನು ನೂರಾರು ಮಂದಿ ಕಣ್ತುಂಬಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆಯಿತು.
ಗುಂಡ್ಲುಪೇಟೆ ಪಟ್ಟಣದ ಪಶು ಆಸ್ಪತ್ರೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಶ್ವಾನ ಪ್ರದರ್ಶನ ಕಾರ್ಯಕ್ರಮ ಪ್ರಾಣಿಪ್ರಿಯರ ಗಮನ ಸೆಳೆಯಿತು. ಶ್ವಾನದ ನಡಿಗೆ, ಆರೋಗ್ಯ, ದೇಹದ ಸ್ಥಿತಿಗೆ ಅನುಗುಣವಾಗಿ ಪ್ರಥಮ ಮತ್ತು ದ್ವೀತಿಯ ಎಂದು ಒಟ್ಟು 18 ಶ್ವಾನಗಳಿಗೆ ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿಗಳನ್ನು ಕೊಡಲಾಯಿತು.

ಅಂದಹಾಗೆ ಈ ಪ್ರದರ್ಶನದಲ್ಲಿ ಜರ್ಮನ್ ಶೆಫರ್ಡ್, ಡಾಬರ್ಮನ್, ಲ್ಯಾಬ್ರಡಾರ್ ರಿಟ್ರೈವರ್, ಗೋಲ್ಡನ್ ರಿಟ್ರೈವರ್, ಬಾಕ್ಸರ್, ಗ್ರೇಟ್‍ಡೇನ್, ಸೀಡ್ಜ್, ಪೊಮೊರಿಯನ್, ಬೀಗಲ್, ರಾಟ್ ವೀಲರ್ ಎಂಬ 9 ತಳಿಯ 42 ಶ್ವಾನಗಳು ಪಾಲ್ಗೊಂಡಿದ್ದವು. ಇನ್ನು ಶ್ವಾನ ಪ್ರದರ್ಶನಕ್ಕೆ ಶಾಸಕ ಗಣೇಶ್ ಪ್ರಸಾದ್ ಚಾಲನೆ ಕೊಟ್ಟರು. ಈ ವೇಳೆ ಪಶು ಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಹನುಮೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಹಾಲು ಕರೆಯುವ ಸ್ಪರ್ಧೆ: ನಾಡಹಬ್ಬ ದಸರಾ ಅಂಗವಾಗಿ ಗಡಿಜಿಲ್ಲೆ ಚಾಮರಾಜನಗರದಲ್ಲಿ ಇತ್ತೀಚೆಗಷ್ಟೇ ಪಶು ವೈದ್ಯಕೀಯ ಇಲಾಖೆ ವತಿಯಿಂದ ಗರಿಷ್ಠ ಹಾಲು ಕರೆಯುವ ಸ್ಪರ್ಧೆ ನಡೆಸಲಾಗಿತ್ತು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಪ್ರಚಾರದ ಕೊರತೆಯಿಂದಾಗಿ ಜಿಲ್ಲೆಯ 12 ರೈತರು ಮಾತ್ರ ತಮ್ಮ ಹಸುಗಳೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಪ್ರಥಮ ಬಹುಮಾನ 15 ಸಾವಿರ, ದ್ವಿತೀಯ 10 ಸಾವಿರ ಹಾಗು ತೃತೀಯ ಬಹುಮಾನ 5 ಸಾವಿರ ರೂಪಾಯಿ ಪಶು ಇಲಾಖೆಯಿಂದ ನೀಡಿತ್ತು.
ಇನ್ನು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಮೇಲಾಜಿಪುರದ ನವೀನ, ಕಾಗಲವಾಡಿಯ ಮುರುಗೇಶ ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ಮೂಡಲಪುರದ ಬಸವರಾಜ ಪಡೆದುಕೊಂಡರು.
ಮೇಲಾಜಿಪುರದ ನವೀನ್ ಎಂಬವವರು 14 ನಿಮಿಷದಲ್ಲಿ 13.200 ಕೆ.ಜಿ.ಹಾಲನ್ನು ಕರೆದು ಮೊದಲ ಸ್ಥಾನ ಪಡೆದು 15 ಸಾವಿರ ನಗದು ಪುರಸ್ಕಾರಕ್ಕೆ ಪಾತ್ರರಾದರು. ಕಾಗಲವಾಡಿ ಗ್ರಾಮದ ಶಿವಪ್ಪ 8.200 ಕೆ.ಜಿ. ಹಾಲನ್ನು ಕರೆದು ದ್ವೀತಿಯ ಸ್ಥಾನ, ಮೂಡಲಪುರ ಗ್ರಾಮದ ಬಸವಣ್ಣ 7.850 ಕೆ.ಜಿ. ಹಾಲು ಕರೆದು ಮೂರನೇ ಸ್ಥಾನ ತಮ್ಮದಾಗಿಸಿಕೊಂಡಿದ್ದರು.
ರೈತರಿಗೆ ಪ್ರೊತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ರಾಸುಗಳ ಆರೋಗ್ಯ ಶಿಬಿರ, ಹಾಲು ಕರೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗುವುದು. ಬರದ ಬೇಗೆಯಿಂದ ಅನ್ನದಾತರು ಕಂಗಾಲಾಗಿದ್ದು, ಶೀಘ್ರದಲ್ಲೇ ಮಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಪಶು ಇಲಾಖೆ ಉಪನಿರ್ದೇಶಕ ಹನುಮೇಗೌಡ ತಿಳಿಸಿದ್ದರು.












Click it and Unblock the Notifications