ಆಸ್ಪತ್ರೆ ಸಿಬ್ಬಂದಿ ನೀಡಿದ ಚುಚ್ಚುಮದ್ದಿನಿಂದ 9 ತಿಂಗಳ ಮಗು ಸಾವು ಆರೋಪ: ಸಿಮ್ಸ್ ಸ್ಪಷ್ಟನೆ
ಚಾಮರಾಜನಗರ, ನವೆಂಬರ್ 24 : ಆಸ್ಪತ್ರೆ ಸಿಬ್ಬಂದಿ ಕೊಟ್ಟ ಚುಚ್ಚುಮದ್ದಿನ ಬಳಿಕ ಮಗು ಮೃತಪಟ್ಟಿದೆ ಎನ್ನಲಾದ ಘಟನೆ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಮುರುಟಿಪಾಳ್ಯ ಗ್ರಾಮದ ಶಿವರುದ್ರಮ್ಮ ಹಾಗೂ ಅಶ್ವತ್ಥ್ ದಂಪತಿಯ 9 ತಿಂಗಳ ಮಗು ಮೃತ ದುರ್ದೈವಿ.
ಮಗುವಿಗೆ ಜ್ವರ, ಕೆಮ್ಮು ಎಂದು ಪೋಷಕರು ಬುಧವಾರ ಬೆಳಗ್ಗೆ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ವಾರ್ಡ್‌ಗೆ ಕರೆದೊಯ್ದು ಎರಡು, ಮೂರು ಚುಚ್ಚುಮದ್ದು ಕೊಟ್ಟಿದ್ದಾರೆ ಎನ್ನಲಾಗಿದೆ. ಬಳಿಕ ಮಗು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆ ಸಿಬ್ಬಂದಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯಿರಿ ಎಂದಿದ್ದಾರೆ.

ಮಗುವನ್ನು ಮೈಸೂರಿಗೆ ಕರೆದುಕೊಂಡು ಹೋಗಲು ಪೋಷಕರು ಆಂಬ್ಯುಲೆನ್ಸ್‌ಗಾಗಿ ಹುಡುಕಾಡುವಾಗ ಅವರ ಬಳಿ ಇರುವ ಚೀಟಿಗಳನ್ನು ಪಡೆದುಕೊಂಡ ಆಸ್ಪತ್ರೆ ಸಿಬ್ಬಂದಿ ಮಗು ಮೃತಪಟ್ಟಿದೆ ಅಂತಾ ತಿಳಿಸಿದ್ದಾರೆ ಎಂದು ಮೃತ ಮಗುವಿನ ಅಜ್ಜ ತಿಬ್ಬೇಗೌಡ ಚಾಮರಾಜನಗರದ ಜಿಲ್ಲಾಸ್ಪತ್ರೆ ವಿರುದ್ಧ ಆರೋಪ ಮಾಡಿದ್ದಾರೆ.
ಆಸ್ಪತ್ರೆ ಸಿಬ್ಬಂದಿ ವರ್ತನೆಯಿಂದ ಸಿಟ್ಟಿಗೆದ್ದ ಕುಟುಂಬಸ್ಥರು, ಆಸ್ಪತ್ರೆ ಮುಂಭಾಗದಲ್ಲಿ ಮಗುವಿನ ಮೃತದೇಹ ಇಟ್ಟು ಸುಮಾರು ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಜಿಲ್ಲಾಸ್ಪತ್ರೆಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ವೈದ್ಯರ ನಿರ್ಲಕ್ಷ್ಯದಿಂದ ಒಂಬತ್ತು ತಿಂಗಳ ಮಗು ಸಾವು ಎನ್ನುವ ಆರೋಪವನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆ ತಳ್ಳಿಹಾಕಿದ್ದು, ಈ ಪ್ರಕರಣದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ಇಲ್ಲ ಎಂದು ಸ್ಪಷ್ಟನೆ ಕೊಟ್ಟಿದೆ.
'ಮೂರು ದಿನಗಳಿಂದ ಜ್ವರ, ಉಸಿರಾಟ ತೊಂದರೆ, ಆಹಾರ ಸೇವಿಸುವುದಿಲ್ಲ ಎಂದು 9 ತಿಂಗಳ ಹೆಣ್ಣು ಮಗುವನ್ನು ಆಸ್ಪತ್ರೆಗೆ ಚಾಮರಾಜನಗರ ತಾಲೂಕಿನ ಮುರುಟಿಪಾಳ್ಯದ ಶಿವರುದ್ರಮ್ಮ ಕರೆತಂದಿದ್ದರು. ವೈದ್ಯರು ಪರೀಕ್ಷಿಸಿ ಮಗುವಿನ ಕೈ-ಕಾಲು ನೀಲಿಗಟ್ಟಿರುವುದನ್ನು ಪಾಲಕರಿಗೆ ತಿಳಿಸಿದ್ದರು. ಬಳಿಕ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ, ಚೇತರಿಕೆ ಕಂಡುಕೊಂಡ ಮಗುವನ್ನು ಮೈಸೂರಿಗೆ ಕರೆದೊಯ್ಯುವಾಗ ಆ್ಯಂಬುಲೆನ್ಸ್ ಹತ್ತುವ ಸಂದರ್ಭದಲ್ಲಿ ಹಠಾತ್ ಹೃದಯಸ್ತಂಭನವಾಗಿದೆ ಎಂದು ಜಿಲ್ಲಾ ವೈದ್ಯಕೀಯ ಅಧೀಕ್ಷಕ ಡಾ.ಕೃಷ್ಣಪ್ರಸಾದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೃದಯಸ್ತಂಭನಗೊಂಡಿದ್ದರಿಂದ ತೀವ್ರಘಟಕಕ್ಕೆ ಮಗುವನ್ನು ರವಾನಿಸಿ ಚಿಕಿತ್ಸೆ ನೀಡಿದ್ದಾರೆ. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಚಿಕಿತ್ಸೆ ನೀಡುವಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯ ಇಲ್ಲ ಎಂದು ಜಿಲ್ಲಾ ವೈದ್ಯಕೀಯ ಅಧೀಕ್ಷಕ ಡಾ.ಕೃಷ್ಣಪ್ರಸಾದ್ ಸ್ಪಷ್ಟನೆ ಕೊಟ್ಟಿದ್ದಾರೆ.












Click it and Unblock the Notifications