ಆಪರೇಷನ್ ಕಮಲಕ್ಕೆ ಒಳಗಾದರೇ ಕೊಳ್ಳೇಗಾಲ ಶಾಸಕ ಎನ್ ಮಹೇಶ್?
ಚಾಮರಾಜನಗರ, ಜುಲೈ 24: ಚಾಮರಾಜನಗರದ ಕೊಳ್ಳೇಗಾಲ ಕ್ಷೇತ್ರದ ಶಾಸಕ ಮಹೇಶ್ ಅವರು ವಿಶ್ವಾಸಮತ ಯಾಚನೆ ವೇಳೆ ಗೈರು ಹಾಜರಾಗಿ ಮೈತ್ರಿ ಸರ್ಕಾರಕ್ಕೆ ಕೈಕೊಟ್ಟಿದ್ದು ಈಗ ಸದ್ಯ ಚರ್ಚೆಗೆ ಗ್ರಾಸವಾದ ವಿಷಯವಾಗಿದೆ. ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಬೇಕೆಂದು ಬಿಎಸ್ಪಿ ಅಧಿನಾಯಕಿ ಮಾಯಾವತಿ ನಿರ್ದೇಶಿಸಿದ್ದರೂ ಎನ್ ಮಹೇಶ್ ಅವರು ಗೈರು ಹಾಜರಾಗಿದ್ದು ಅಚ್ಚರಿ ಮೂಡಿಸಿದೆ.
ಪಕ್ಷದ ವರಿಷ್ಠರ ನಿರ್ದೇಶನಕ್ಕೆ ತಾವೆಂದಿಗೂ ಬದ್ಧರಾಗಿದ್ದೇವೆ ಎಂದಿದ್ದ ಮಹೇಶ್ ಈಗ ದಿಢೀರ್ ಬದಲಾದರೇ? ಇದು ಏಕೆ ಎಂಬ ಪ್ರಶ್ನೆ ಕಾಡುತ್ತಿದೆ. ಅಲ್ಲದೇ ಬಿಜೆಪಿ ಸರ್ಕಾರದಲ್ಲಿ ಮಹೇಶ್ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದೆಯೇ ಎಂಬ ಅನುಮಾನಗಳು ಹರಿದಾಡುತ್ತಿವೆ. ಮಹೇಶ್ ಅವರು ವಿಶ್ವಾಸಮತ ಯಾಚನೆ ಸಂದರ್ಭ ಗೈರು ಹಾಜರಾಗಿರುವುದು ಈ ಎಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣವಾಗಿವೆ.
ಈ ಹಿಂದೆ ಚುನಾವಣೆಗೂ ಮುನ್ನ ಜಾ.ದಳದೊಂದಿಗೆ ಮಹೇಶ್ ಅವರು ಕೊಳ್ಳೇಗಾಲ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಅಲ್ಲದೆ ಸಮ್ಮಿಶ್ರ ಸರ್ಕಾರದ ರಚನೆ ವೇಳೆಯೂ ಕುಮಾರಸ್ವಾಮಿ ಅವರಿಗೆ ತಾವು ಬೆಂಬಲ ನೀಡಿದ್ದೇವೆ ಎಂದು ಹೇಳುವ ಮೂಲಕ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಇದಾದ ಬಳಿಕ ಏಕಾಏಕಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದರು. ತಮ್ಮ ಕ್ಷೇತ್ರದ ಜನತೆಯೊಂದಿಗೆ ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ರಾಜೀನಾಮೆ ನೀಡಿರುವುದಾಗಿ ಹೇಳಿಕೆ ನೀಡಿದ್ದರು.

ಇದರೊಟ್ಟಿಗೆ ಅವರೇ ತಮ್ಮ ಆಪ್ತವಲಯದಲ್ಲಿ ಮೈತ್ರಿ ಸರ್ಕಾರದಲ್ಲಿ ತಮಗೆ ನೀಡಿದ್ದ ಖಾತೆಯಲ್ಲಿ ರೇವಣ್ಣ ಅವರು ಹಸ್ತಕ್ಷೇಪ ಮಾಡುತ್ತಿದ್ದರು ಎಂಬುದನ್ನು ತಿಳಿಸಿದ್ದರು.
ಮೈತ್ರಿ ಸರ್ಕಾರದ ವಿಶ್ವಾಸಮತಕ್ಕೆ ಬೆಂಬಲ ನೀಡದಿದ್ದಕ್ಕಾಗಿ ಎನ್ ಮಹೇಶ್ ಅವರನ್ನು ಮಾಯಾವತಿಯವರು ಉಚ್ಚಾಟಿಸಿದ್ದಾರೆ. ಇದರಿಂದ ಅವರ ಶಾಸಕ ಸ್ಥಾನಕ್ಕೇನೂ ಗಂಡಾಂತರವಿಲ್ಲ. ಆದರೆ ಒಂದು ವೇಳೆ ಅವರ ಗೈರು ಹಾಜರಿಯಲ್ಲಿ ಬಿಜೆಪಿ ಕೈವಾಡವಿದ್ದುದೇ ಆದರೆ, ಅವರ ಮುಂದಿನ ನಡೆ ಏನು ಎಂಬುದನ್ನು ಊಹಿಸಲಾಗುತ್ತಿಲ್ಲ.
ರಾಜ್ಯದಲ್ಲಿ ಪಕ್ಷದ ಬಲವರ್ಧನೆಗಾಗಿ ದುಡಿದಿದ್ದ ಶಾಸಕ ಮಹೇಶ್ ಅವರು ಇತ್ತೀಚೆಗೆ ಪಕ್ಷದಲ್ಲಿ ಮೂಲೆಗುಂಪಾಗಿದ್ದರು ಎಂದು ಹೇಳುತ್ತಾರೆ ಕೆಲವು ಮುಖಂಡರು ಹಾಗೂ ಕಾರ್ಯಕರ್ತರು. ರಾಜೀನಾಮೆ ವಿಚಾರವಾಗಿ ಮಾಯಾವತಿ ಹಾಗೂ ಮಹೇಶ್ ಅವರ ಸಂಬಂಧ ಹಳಸಿತ್ತು ಎಂದು ಹೇಳಲಾಗುತ್ತಿದೆ. ಪಕ್ಷದ ಚಟುವಟಿಕೆಗಳಲ್ಲಿ ಇವರನ್ನು ಕಡೆಗಣಿಸಲಾಗುತ್ತಿತ್ತು. ಇದರಿಂದಲೂ ಅವರು ವಿಶ್ವಾಸಮತದಿಂದ ಹಿಂದುಳಿದಿರಬಹುದು ಎನ್ನುತ್ತಿದೆ ಅವರ ಆಪ್ತ ವಲಯ.












Click it and Unblock the Notifications