ಮಾದಪ್ಪನ ಹುಂಡಿಯಲ್ಲಿ 28 ಲಕ್ಷ ಮೌಲ್ಯದ ಅಮಾನ್ಯಗೊಂಡ ನೋಟಿನ ಕಂತೆ
ಚಾಮರಾಜನಗರ, ಅಕ್ಟೋಬರ್ 16: ಕರ್ನಾಟಕದ ಪ್ರಸಿದ್ಧ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ ಅಮಾನ್ಯಗೊಂಡ ನೋಟುಗಳು ಪತ್ತೆಯಾಗಿದ್ದು, ಲಕ್ಷಾಂತರ ರೂಪಾಯಿ ಬೆಲೆಯ ಬಾಳುವ ಅಮಾನ್ಯಗೊಂಡ 500 ಹಾಗೂ 1,000 ನೋಟುಗಳು ಅಧಿಕ ಸಂಖ್ಯೆಯಲ್ಲಿವೆ.
ಅಮಾನ್ಯಗೊಂಡು ಹತ್ತಿರ ಹತ್ತಿರ 7 ವರ್ಷಗಳಾದ ಬಳಿಕ ಲಕ್ಷಾಂತರ ರೂಪಾಯಿಯ ನೋಟುಗಳು ಮಾದಪ್ಪನ ಹುಂಡಿ ಸೇರಿದೆ. ಕಳೆದ ಮಂಗಳವಾರ ದೇವಾಲಯ ಹುಂಡಿ ಎಣಿಕೆ ವೇಳೆ ಅಮಾನ್ಯಗೊಂಡ ನೋಟುಗಳು ಪತ್ತೆಯಾಗಿದ್ದವು. ಅದಾದ ಬಳಿಕ, ಅವುಗಳನ್ನು ಎಣಿಕೆ ಮಾಡಲಾಗಿ 1000₹ ಮುಖಬೆಲೆಯ ನೋಟುಗಳು 677 ಇವೆ (6,77,000) ಹಾಗೂ 500 ಮುಖಬೆಲೆಯ ನೋಟುಗಳು 4353( 21,76,500) ಇದ್ದು ಒಟ್ಟು 28,53,500 ನೋಟುಗಳನ್ನು ಭಕ್ತರು ಹುಂಡಿಯಲ್ಲಿ ಹಾಕಿದ್ದಾರೆ.

ಇನ್ನು 2,000 ಮುಖಬೆಲೆಯ ನೋಟುಗಳು ಕೂಡ 3.56 ಲಕ್ಷದಷ್ಟು ಸಂಗ್ರಹವಾಗಿದ್ದು ಈ ನೋಟುಗಳು ವಿನಿಮಯ ಮಾಡಿಕೊಳ್ಳಬಹುದಾಗಿದೆ. ಆದರೆ, 28 ಲಕ್ಷದಷ್ಟು ಹಣ ಹುಂಡಿ ಸೇರಿದರೂ ಪ್ರಾಧಿಕಾರಕ್ಕೆ ಪ್ರಯೋಜನಕ್ಕೆ ಬಾರದಂತಾಗಿದೆ.
ಮಲೆಮಹದೇಶ್ವರ ಬೆಟ್ಟದಲ್ಲಿ 2 ಕೋಟಿಗೂ ಅಧಿಕ ಕಾಣಿಕೆ ಸಂಗ್ರಹ
ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಕಳೆದ ಮಂಗಳವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ 2.28 ಕೋಟಿ ರೂಪಾಯಿ ಕಾಣಿಕೆ ಹಣ ಸಂಗ್ರಹವಾಗಿದೆ.
ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ, ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆದು ಎಣಿಕೆ ಕಾರ್ಯ 12 ಗಂಟೆಗಳಷ್ಟು ನಡೆದಿದ್ದು 39 ದಿನಗಳಲ್ಲಿ ಬರೋಬ್ಬರಿ 2,28,63,914 ರೂಪಾಯಿ ಹಣ ಸಂಗ್ರಹವಾಗಿದೆ.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭೇಟಿ ನೀಡುತ್ತಿದ್ದಾರೆ. ಜೊತೆಗೆ ಹುಣ್ಣಿಮೆ, ಅಮಾವಾಸ್ಯೆ, ಹಾಗೂ ಸರ್ಕಾರಿ ರಜೆ ದಿನಗಳು , ಸಾಮೂಹಿಕ ವಿವಾಹ, ಕಾರ್ಯಕ್ರಮಕ್ಕೆ ಹೆಚ್ಚಿನ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಹರಕೆಯ ರೂಪದಲ್ಲಿ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಕಾಣಿಕೆ ಅರ್ಪಿಸಿದ್ದಾರೆ. 2.28 ಕೋಟಿ ರೂ. ನಗದು, 92.5 ಗ್ರಾಂ ಚಿನ್ನ ಹಾಗೂ 2.7 ಕೆ.ಜಿ. ಬೆಳ್ಳಿ ಮಾದಪ್ಪನ ಹುಂಡಿಯಲ್ಲಿ ಸಂಗ್ರಹವಾಗಿದೆ.












Click it and Unblock the Notifications