Covid 19: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಆರೋಗ್ಯ ಇಲಾಖೆ ಮಾಡಿಕೊಂಡ ಸಿದ್ಧತೆಗಳಿವು
ಚಾಮರಾಜನಗರ, ಡಿಸೆಂಬರ್, 19: ಚಾಮರಾಜನಗರ ಜಿಲ್ಲೆಯಲ್ಲಿ ಶೂನ್ಯ ಕೋವಿಡ್ ಪ್ರಕರಣಗಳಿದ್ದು, ಕಠಿಣ ಸಂದರ್ಭವನ್ನು ಎದುರಿಸಲು ಜಿಲ್ಲಾ ಆರೋಗ್ಯ ಇಲಾಖೆ ಸನ್ನದ್ಧವಾಗಿದೆ ಎಂದು ಡಿಎಚ್ಒ ಡಾ.ಚಿದಂಬರ ಹೇಳಿದರು.
ಕೇರಳದಲ್ಲಿ ರೂಪಾಂತರಿ ಕೊರೊನಾ ಕಾಣಿಸಿಕೊಂಡಿರುವ ಹಿನ್ನೆಲೆ ಚಾಮರಾಜನಗರದಲ್ಲಿ ಮಾಧ್ಯಮವರೊಟ್ಟಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಮಾರ್ಗಸೂಚಿಗಳು ಬಂದ ಬಳಿಕ ಕೇರಳ ಗಡಿಯಲ್ಲಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಜಿಲ್ಲೆಯಲ್ಲಿ ಶೂನ್ಯ ಕೋವಿಡ್ ಪ್ರಕರಣ ಇರುವುದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಕೊರೊನಾ ಕಾಣಿಸಿಕೊಂಡರೂ ಎದುರಿಸಲು ಎಲ್ಲಾ ರೀತಿಯಲ್ಲೂ ನಾವು ಸನ್ನದ್ದರಾಗಿದ್ದೇವೆ. ಆಮ್ಲಜನಕ ಮತ್ತು ಬೆಡ್‌ಗಳಿಗೆ ಸಂಬಂಧಿಸಿದಂತೆ ಮಾಕ್ ಡ್ರಿಲ್ ಕೂಡ ನಡೆಸಿದ್ದು, ಹಾಸಿಗೆಗಳು, ಐಸೋಲೇಷನ್ ವಾರ್ಡ್‌ಗಳು, ಔಷಧ ದಾಸ್ತಾನು ನಮ್ಮಲ್ಲಿ ಸಾಕಷ್ಟಿದೆ ಎಂದು ತಿಳಿಸಿದರು.
ಸರ್ಕಾರದ ಗೈಡ್‌ಲೈನ್ ಬಂದ ಬಳಿಕ ಪರೀಕ್ಷೆಗಳು, ಪತ್ತೆ ಹಚ್ಚುವ ಕಾರ್ಯ, ಐಸೋಲೆಟೆಡ್ ಮಾಡಲಾಗುವುದು. ಯಾರೂ ಕೂಡ ಆತಂಕ ಪಡಬಾರದು ಎಂದು ಮನವಿ ಮಾಡಿದರು. ಪ್ರಸ್ತುತ ನಮ್ಮ ಜಿಲ್ಲೆಯಲ್ಲಿ 1049 ಆಮ್ಲಜನಕ ಸಿಲಿಂಡರ್, 4 ಪಿಎಸ್ಐ ಪ್ಲಾಂಟ್, ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ 2, ಪೈಪ್ ಲೈನ್ ಆಕ್ಸಿಜನ್ ವ್ಯವಸ್ಥೆ 4 ಆಸ್ಪತ್ರೆಗಳಲ್ಲಿವೆ. ಒಂದು ವೇಳೆ ಕೊರತೆಯಾದರೂ ತ್ವರಿತ ಪೂರೈಕೆಗೆ ಎಲ್ಲಾ ತಯಾರಿ ನಡೆಸಲಾಗಿದೆ ಎಂದು ಮಾಹಿತಿ ಕೊಟ್ಟಿದ್ದಾರೆ.
ಕೇರಳ ಗಡಿ ಮುಕ್ತ: ಇನ್ನು ಚಾಮರಾಜನಗರ ಕೇರಳ ಗಡಿಯನ್ನು ಹಂಚಿಕೊಂಡಿರುವ ಮೂಲೆಹೊಳೆ ಚೆಕ್ ಪೋಸ್ಟ್‌ನಲ್ಲಿ ಸದ್ಯ ಯಾವುದೇ ತಪಾಸಣೆ ಮಾಡುತ್ತಿಲ್ಲ. ಕೇರಳದಿಂದ ಬರುತ್ತಿರುವವರಿಗೆ ಮುಕ್ತ ಪ್ರವೇಶವಿದ್ದು, ಇದುವರೆಗೂ ಕೂಡ ಯಾವುದೇ ತಪಾಸಣೆ ಪರೀಕ್ಷಾ ಕಾರ್ಯ ಆರಂಭವಾಗಿಲ್ಲ.












Click it and Unblock the Notifications