ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ದೂರು, ಯಾಕೆ?-ಇಲ್ಲಿದೆ ಮಾಹಿತಿ
ಚಾಮರಾಜನಗರ, ಏಪ್ರಿಲ್, 02: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಸಂಬಂಧ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಫ್ಲೈಯಿಂಗ್ ಸ್ಕಾಡ್ ತಂಡ ಹನೂರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.
ಏಪ್ರಿಲ್ 1ರಂದು ಫ್ಲೈಯಿಂಗ್ ಸ್ಕಾಡ್ ತಂಡದ ಗುಂಡುರಾವ್ ಎಂಬವರು ಹನೂರು ಠಾಣೆಗೆ ದೂರು ಕೊಟ್ಟು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ, ಅವಹೇಳನಕಾರಿಯಾಗಿ ಭಾಷಣ ಮಾಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ಕೊಟ್ಟಿದ್ದಾರೆ.

ಕಳೆದ ತಿಂಗಳು 28ರಂದು ಹನೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಓರ್ವ ಗೂಂಡಾ, ರೌಡಿ, ಗುಜರಾತ್‌ನಲ್ಲಿ ನರಮೇದ ಮಾಡಿದ ಆರೋಪ ಹೊತ್ತಿದ್ದಾರೆ. ದೇಶದ ಉನ್ನತ ಸ್ಥಾನದಲ್ಲಿದ್ದು, ಇಂತಹವರನ್ನ ಮೋದಿಯವರು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದರು.
ಈ ಸಂಬಂಧ ಬಿಜೆಪಿ ಬೆಂಗಳೂರಿನಲ್ಲಿ ದೂರು ದಾಖಲು ಮಾಡಿತ್ತು. ಯತೀಂದ್ರ ಸಿದ್ದರಾಮಯ್ಯಗೆ ಚಾಮರಾಜನಗರ ಚುನಾವಣಾಧಿಕಾರಿ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದ್ದಾರೆ. ಈಗ ಹನೂರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.
ಯತೀಂದ್ರಗೆ ನೋಟಿಸ್ ಜಾರಿ: ಹನೂರು ಕಾರ್ಯಕರ್ತರ ಸಭೆಯಲ್ಲಿ ಅಮಿತ್ ಶಾ ಗೂಂಡಾ, ರೌಡಿ ಎಂದು ಉಲ್ಲೇಖಿಸಿ ನೀಡಿದ್ದ ಹೇಳಿಕೆ ಸಂಬಂಧ ಚಾಮರಾಜನಗರ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ನೋಟಿಸ್ ಜಾರಿ ಮಾಡಿದ್ದಾರೆ.
ಗೃಹ ಸಚಿವ ಅಮಿತ್ ಶಾ ವಿರುದ್ಧ ನೀಡಿರುವ ಹೇಳಿಕೆಗೆ ವಿವರಣೆ ನೀಡುವಂತೆ ನೋಟಿಸ್ ಕೊಡಲಾಗಿದೆ.
ಸಹಾಯಕ ಚುನಾವಣಾಧಿಕಾರಿ, ಮಾದರಿ ನೀತಿ ಸಂಹಿತೆ ನೂಡಲ್ ಅಧಿಕಾರಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳಿಂದ ವರದಿ ಪಡೆದು ನೋಟಿಸ್ ಜಾರಿಗೊಳಿಸಿತ್ತು.
ಆಪರೇಷನ್ ಹಸ್ತ ಜೋರು: ಲೋಕಸಭಾ ಚುನಾವಣೆಯಲ್ಲಿ ತವರಿನ ಕ್ಷೇತ್ರಗಳನ್ನು ಗೆಲ್ಲಲ್ಲೇಬೇಕು ಎಂದು ಪಣ ತೊಟ್ಟಿರುವ ಸಿಎಂ ಸಿದ್ದರಾಮಯ್ಯ ರಣವ್ಯೂಹವನ್ನೇ ಮಾಡುತ್ತಿದ್ದು, ಕಮಲದ ಮುಖಂಡರಿಗೆ ಗಾಳ ಹಾಕಿದ್ದಾರೆ.
ವರುಣ ವಿಧಾನಸಭಾ ಕ್ಷೇತ್ರ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡಲಿದೆ. ಜೊತೆಗೆ, ಮೈಸೂರು ತವರಿನ ಜಿಲ್ಲೆಯಾಗಿರುವ ಹಿನ್ನೆಲೆ ಸಿಎಂ ಸಿದ್ದರಾಮಯ್ಯಗೆ ಈ ಎರಡು ಕ್ಷೇತ್ರಗಳು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದು, ಗೆಲ್ಲಿಸಬೇಕಿದ ಅನಿವಾರ್ಯತೆ ಎದುರಾಗಿದೆ.
ಕೈ ಹಿಡಿಯುವ ಪ್ರಸಾದ್ ಬೆಂಬಲಿಗರು: ಸಂಸದರ ಸೋದರಳಿಯ ಹಾಗೂ ಸಹೋದರ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು, ಈಗ ಸಂಸದರ ಬೆಂಬಲಿಗರು ಕಮಲ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆ ಆಗಲು ಮುಂದಾಗಿದ್ದಾರೆ. ಏಪ್ರಿಲ್ 3ರಂದು ಸಿದ್ದರಾಮಯ್ಯ ಸಮ್ಮುಖದಲ್ಲಿ ಸಂಸದರ ಬೆಂಬಲಿಗರು ಹಾಗೂ ದಲಿತ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದ್ದು, ಆಪರೇಷನ್ ಹಸ್ತ ಸಕ್ಸಸ್ ಆಗಿದೆ ಎನ್ನಲಾಗಿದೆ.
ಇನ್ನು, 3 ದಿನ ಸಿದ್ದರಾಮಯ್ಯ ಮೈಸೂರು ಪ್ರವಾಸದಲ್ಲಿದ್ದು, ಈ ವೇಳೆ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿಯಾಗಿ ಬೆಂಬಲ ಕೇಳುವ ಸಾಧ್ಯತೆ ಇದೆ ಎನ್ನಲಾಗಿದ್ದು, ಚುನಾವಣೆ ಹೊತ್ತಲ್ಲಿ ಕಟ್ಟ ಎದುರಾಳಿಗಳು ಭೇಟಿಯಾದರೇ ಚುನಾವಣಾ ಆಖಾಡ ಮತ್ತಷ್ಟು ರಂಗೇರಲಿದೆ.
ಕಾಂಗ್ರೆಸ್ ಸಂಪರ್ಕ ಮಾಡಿದೆ: ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ಡಾ.ಮೋಹನ್ ಪ್ರತಿಕ್ರಿಯಿಸಿದ್ದು, ಬಿಜೆಪಿ ಕೆಲ ತೀರ್ಮಾನಗಳಿಂದ ಬೇಸರ ಆಗಿರುವುದು ನಿಜ. ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕಿಸಿರುವುದು ನಿಜ. ಎರಡು ದಿನಗಳಲ್ಲಿ ಎಲ್ಲಾ ನಿರ್ಧಾರವನ್ನು ಕೈಗೊಳ್ಳುತ್ತೇನೆ. ಸಿಎಂ ಸಿದ್ದರಾಮಯ್ಯ ಅವರು ಪ್ರಸಾದ್ ಅವರನ್ನು ಭೇಟಿಯಾಗಲೂಬಹುದು ಎಂದಿದ್ದಾರೆ.
ಒಟ್ಟಿನಲ್ಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಬೆಂಬಲಿಗರು ಕಾಂಗ್ರೆಸ್‌ನತ್ತ ಮುಖ ಮಾಡುತ್ತಿರುವುದು ರಾಜಕೀಯ ವಲಯದ ಪ್ರಮುಖ ಬೆಳವಣಿಗೆ ಆಗಿದೆ.












Click it and Unblock the Notifications